Advertisement

ಬಂಡೆಗಳಿಗೆ ಒತ್ತಿ ಹಿಡಿದು, ನೀರಿನಲ್ಲಿ ಮುಳುಗಿಸಿ ಯೋಧರ ಹತ್ಯೆಗೈದ ಪಾಪಿ ಚೀನಾ

10:45 PM Jun 17, 2020 | Hari Prasad |

ನವದೆಹಲಿ: ಕಳೆದ ಕೆಲವು ಸಮಯಗಳಿಂದ ಲಢಾಕ್ ಭಾಗದಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವೆ ಗಡಿ ವಿಚಾರದಲ್ಲಿ ನಡೆಯುತ್ತಿದ್ದ ಜಗಳ 20 ಜನ ಭಾರತೀಯ ಯೋಧರನ್ನು ಹುತಾತ್ಮರನ್ನಾಗಿಸಿದೆ.

Advertisement

ಆದರೆ ಸಾಮಾನ್ಯವಾಗಿ ಎರಡೂ ದೇಶಗಳ ನಡುವಿನ ಯೋಧರ ನಡುವೆ ಹೋರಾಟ ನಡೆದಾಗ ಅಲ್ಲಿ ಮದ್ದು ಗುಂಡುಗಳ ವಿನಿಮಯವಾಗುತ್ತದೆ. ಮತ್ತು ಆ ರೀತಿಯ ಹೋರಾಟದಲ್ಲಿ ಎರಡೂ ಕಡೆಗಳಲ್ಲಿ ಸೈನಿಕರ ಬಲಿದಾನವಾಗುತ್ತದೆ.

ಆದರೆ ವಿಚಿತ್ರವೆಂದರೆ ಲಢಾಕ್ ನ ಗಲ್ವಾನ್ ನದಿ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಹೋರಾಟ ಒಂದು ಗುಂಪು ಘರ್ಷಣೆಯ ರೀತಿಯಲ್ಲಿ ನಡೆದು ಎರಡೂ ಕಡೆಗಳಲ್ಲಿ ಸಾವು ನೋವಿಗೆ ಕಾರಣವಾಗಿರುವುದು ಅಚ್ಚರಿಯ ಸಂಗತಿ.

ಇದನ್ನೂ ಓದಿ: ಲಡಾಖ್: ಹಲೋ…ನಾನಿನ್ನೂ ಜೀವಂತವಾಗಿದ್ದೇನೆ; ಪತ್ನಿಗೆ ಕರೆ ಮಾಡಿದ “ಹುತಾತ್ಮ” ಯೋಧ!

ಇದಕ್ಕೆ ಪ್ರಮುಖ ಕಾರಣ ಈ ಭಾಗದಲ್ಲಿ ಭಾರತ ಹಾಗೂ ಚೀನಾ ದೇಶಗಳ ನಡುವೆ ಗಡಿ ನಿಯಂತ್ರಣ ರೇಖೆ ಇಲ್ಲದಿರುವುದು. ಬದಲಾಗಿ ಇಲ್ಲಿ ಇರುವುದು ವಾಸ್ತವ ನಿಯಂತ್ರಣ ರೇಖೆ. ಇಲ್ಲಿ ಯಾವ ದೇಶದ ಪಡೆಗಳು ಗಸ್ತು ತಿರುಗತ್ತೆವೆಯೋ ಆ ಭಾಗ ವಾಸ್ತವ ನಿಯಂತ್ರಣ ರೇಖೆಯಾಗಿರುತ್ತದೆ. ಮತ್ತು ಇದರ ಅಂತರ ಸರಿ ಸುಮಾರು 5 ರಿಂದ 6 ಕಿಲೋಮೀಟರ್ ಗಳಾಗಿರುತ್ತವೆ.

ಇಂತಹ ಪ್ರದೇಶದಲ್ಲಿ ಸೋಮವಾರ ರಾತ್ರಿ ಚೀನಾ ಸೈನಿಕರು ಅಮಾನುಷ ವರ್ತನೆಯನ್ನು ಮೆರೆದಿದ್ದಾರೆ. ತಮ್ಮ ಡೇರೆಗಳನ್ನು ತೆರವುಗೊಳಿಸುವಂತೆ ಕೇಳಿಕೊಳ್ಳಲು ಬಂದ ಭಾರತೀಯ ಯೋಧರ ತಂಡದ ಮೇಲೆ ಚೀನಾ ಸೈನಿಕರು ಮುಗಿಬಿದ್ದಿದ್ದಾರೆ.

Advertisement

ನಮ್ಮ ಯೋಧರ ಮೇಲೆ ಚೀನಾ ಸೈನಿಕರು ಕಲ್ಲು, ದೊಣ್ಣೆ, ಬೇಲಿ ತಂತಿ ಸುತ್ತಿದ ಬಡಿಗೆಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ಸಮುದ್ರ ಮಟ್ಟದಿಂದ ಸುಮಾರು 15 ಸಾವಿರ ಅಡಿ ಎತ್ತರದಲ್ಲಿರುವ ಈ ನದಿ ನೀರಿನಲ್ಲಿ ನಮ್ಮ ಯೋಧರನ್ನು ಮುಳುಗಿಸಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ವರದಿ ಇದೀಗ ಸೇನಾ ಮೂಲಗಳಿಂದ ಬಹಿರಂಗಗೊಂಡಿರುವುದನ್ನು ಎ.ಎಫ್.ಪಿ. ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಎನ್.ಡಿ.ಟಿ.ವಿ. ವೆಬ್ ಸೈಟ್ ವರದಿ ಮಾಡಿದೆ.

ಇದನ್ನೂ ಓದಿ: ನಮ್ಮನ್ನು ಕೆಣಕಿದಾಗಲೆಲ್ಲಾ ಸರಿಯಾದ ಪ್ರತ್ಯುತ್ತರ ನೀಡಿದ್ದೇವೆ: ಪ್ರಧಾನಿ ಗುಡುಗು

ಮೈನಸ್ ಪಾಯಿಂಟ್ ನಲ್ಲಿರುವ ಇಲ್ಲಿನ ವಾತಾವರಣಕ್ಕೆ ಈ ನದಿಯ ನೀರು ಮೈ ಕೊರೆಯುವ ಶೀತ ಸ್ಥಿತಿಯಲ್ಲಿರುತ್ತದೆ. ಅಂತಹ ನೀರಿಗೆ ನಮ್ಮ ಯೋಧರನ್ನು ಮುಳುಗಿಸಿ ಕ್ರೌರ್ಯ ಮೆರೆದಿರುವುದು ಚೀನಾ ಸೈನಿಕರ ವಿಕ್ಷಿಪ್ತತೆಗೆ ಸಾಕ್ಷಿಯಾಗಿದೆ. ಯೋಧರ ಮರಣೋತ್ತರ ವರದಿಯಲ್ಲಿ ಈ ಎಲ್ಲಾ ಅಂಶಗಳು ದಾಖಲುಗೊಂಡಿರುವುದಾಗಿ ವೆಬ್ ಸೈಟ್ ಉಲ್ಲೇಖಿಸಿದೆ.

ಮಾತ್ರವಲ್ಲದೇ ಚೀನಾ ಸೈನಿಕರು ತಮ್ಮ ಶೂಗಳಿಂದ ನಮ್ಮ ಯೋಧರನ್ನು ಬಂಡೆಗಳಿಗೆ ಒತ್ತಿಹಿಡಿದು ಹಿಂಸೆ ನೀಡಿರುವ ಅಂಶವೂ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಮೃತ ಯೋಧರ ದೇಹದ ಭಾಗಗಳಲ್ಲಿ ಗುದ್ದಿದ ಗುರುತಗಳೂ ಸಹ ಪತ್ತೆಯಾಗಿರುವುದು ಚೀನಾ ಸೈನಿಕರು ಮೆರೆದಿರುವ ಕ್ರೂರ ಕೃತ್ಯಕ್ಕೆ ಸಾಕ್ಷಿಯಾಗಿದೆ. ನೀರಿನಲ್ಲಿ ಮುಳುಗಿಸಿರುವುದು ಹಾಗೂ ಎತ್ತರದಿಂದ ನೀರಿಗೆ ಬಿದ್ದು ತಲೆ ಭಾಗಕ್ಕೆ ಗಾಯಗಳಾಗಿರುವುದು ಯೋಧರ ಸಾವಿಗೆ ಪ್ರಮುಖ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಗೊಂಡಿದೆ ಎಂದು ಎ.ಎಫ್.ಪಿ. ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಮಾತ್ರವಲ್ಲದೇ ಲೇಹ್ ನಿಂದ ಮಿಲಿಟರಿ ಸರಕು ವಿಮಾನಗಳು ಹಲವು ಬಾರಿ ಹಾರಾಟ ನಡೆಸಿದ್ದವು ಎಂಬ ಮಾಹಿತಿಯನ್ನೂ ಸಹ ಖಚಿತ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. ಇನ್ನು ಈ ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯೋ‍ಧರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಕಳೆದ ಮೇ ತಿಂಗಳಿನಲ್ಲಿ ವಾಸ್ತವ ನಿಯಂತ್ತಣ ರೇಖೆಯ ಪ್ರದೇಶವನ್ನು ಚೀನಾ ಪದೇ ಪದೇ ಉಲ್ಲಂಘಿಸಿ ಒಳ ದಾಟುವ ಮೂಲಕ ಈ ಭಾಗದಲ್ಲಿ ಎರಡೂ ದೇಶಗಳ ನಡುವೆ ಉದ್ವಿಗ್ನತೆ ತಲೆದೋರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next