ಪೋರ್ಟ್ ಎಲಿಜಬೆತ್: ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ ಫಾರ್ಮ್ ಕಳೆದುಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದಾಗಲೇ ಭರ್ಜರಿ ಶತಕ (115) ಸಿಡಿಸುವ ಮೂಲಕ ಟೀಕಾಕಾರರಿಗೆ ಉತ್ತರಿಸಿದ್ದಾರೆ. ಅವರ ಈ ಸಾಹಸ ಭಾರತದ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧ 5ನೇ ಏಕದಿನ ಪಂದ್ಯ ಗೆದ್ದು ಏಕದಿನ ಸರಣಿ ಕೈವಶವಾದ ಬಳಿಕ ಪ್ರತಿಕ್ರಿಯಿಸಿದ ರೋಹಿತ್ ಶರ್ಮ, “ಮೂರು ಪಂದ್ಯಗಳಲ್ಲಷ್ಟೇ ನನಗೆ ಹೆಚ್ಚು ರನ್ ಗಳಿಸಲಾಗಲಿಲ್ಲ. ಅಂದಮಾತ್ರಕ್ಕೆ ಫಾರ್ಮ್ನಲ್ಲಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಒಂದು ಪಂದ್ಯದಲ್ಲಿ ಚೆನ್ನಾಗಿ ಆಡಿದರೆ ಒಳ್ಳೆಯ ಫಾರ್ಮ್ನಲ್ಲಿದ್ದಾನೆ ಎನ್ನುತ್ತೀರಿ; 3 ಪಂದ್ಯಗಳಲ್ಲಿ ರನ್ ಗಳಿಸದಿದ್ದರೆ ಆತ ಫಾರ್ಮ್ನಲ್ಲಿಲ್ಲ ಎಂದು ಟೀಕಿಸುತ್ತೀರಿ’ ಎಂದು ಖಾರವಾಗಿ ನುಡಿದರು.
“2013ರಿಂದೀಚೆಗೆ ನನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳಾಗಿವೆ. ಮಧ್ಯಮ ಕ್ರಮಾಂಕದಿಂದ ನಾನು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಭಡ್ತಿ ಹೊಂದಿದ್ದೇನೆ. ಈಗಿನ ನನ್ನ ಬ್ಯಾಟಿಂಗ್‌ನಲ್ಲಿ ಸುಧಾರಣೆಗಳಾಗಿವೆ. 2013ರ ಹಿಂದಿನ ನನ್ನ ಬ್ಯಾಟಿಂಗನ್ನೆಲ್ಲ ಮರೆತುಬಿಡಿ’ ಎಂದು ರೋಹಿತ್ ಹೇಳಿದರು.
2-3 ಪ್ರದರ್ಶಗಳನ್ನಷ್ಟೇ ಪರಿಗಣಿಸಿ ಯಾರದೇ ಸೋಲು-ಗೆಲುವನ್ನು ನಿರ್ಧರಿಸುವಂತಿಲ್ಲ ಎಂದಿರುವ ರೋಹಿತ್, “ಮೊದಲ 3 ಪಂದ್ಯಗಳಲ್ಲಿ ಸರಿಯಾಗಿ ಆಡಿಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇಂಥ ವೈಫಲ್ಯ ಪ್ರತಿಯೊಬ್ಬ ಆಟಗಾರನ ಜೀವನದಲ್ಲೂ ಸಂಭವಿಸುವಂಥದ್ದೇ. ಆದರೆ ನಾನು ಉತ್ತಮ ಮನಸ್ಥಿತಿಯಲ್ಲಿದ್ದೇನೆ. ನೆಟ್ ಅಭ್ಯಾಸ ನಡೆಸುವಾಗಲೂ ಸೋಲಿಗೆ ಎಡೆಗೊಡಬಾರದೆಂದೇ ಬ್ಯಾಟಿಂಗ್ ನಡೆಸುತ್ತಿದ್ದೇನೆ. ಕ್ರಿಕೆಟ್ ಜೀವನದಲ್ಲಿ ಫಾರ್ಮ್ಗೆ ಸಂಬಂಧಿಸಿ ಇಂಥ ಸಂಗತಿಗಳು ಸಾಮಾನ್ಯ’ ಎಂದು ನೆನಪಿಸಿದರು.
ಒಂದು ಶಕತ ಹೇಗೆ ಒಬ್ಬ ಕ್ರಿಕೆಟ್ ಆಟಗಾರನನ್ನು ಸಂತೃಪ್ತಗೊಳಿಸಲಾರದೋ ಹಾಗೆಯೇ ಒಂದೆರಡು ವೈಫಲ್ಯದಿಂದಲೂ ಅವನನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದಿರುವ ಸ್ಟೈಲಿಶ್ ಬ್ಯಾಟ್ಸ್‌ಮನ್, “ಶತಕ ಬಾರಿಸಿದ ಮರು ಪಂದ್ಯದಲ್ಲೇ ನಾನು ಶತಕ ವಿಚಾರ ಮರೆತು ಆಡುತ್ತೇನೆ. ಏಕೆಂದರೆ ಪ್ರತಿ ದಿನವೂ ನಮ್ಮ ಪಾಲಿಗೆ ಹೊಸತೇ. ಶಕತ ಬಾರಿಸುವುದು ದೊಡ್ಡ ಸಂಗತಿಯಲ್ಲ. ಆದರೆ ಲಯವನ್ನು ಉಳಿಸಿಕೊಳ್ಳುವುದು ಮುಖ್ಯ. ಡ್ರೆಸ್ಸಿಂಗ್ ರೂಮಿನಲ್ಲೂ ನಾವು ಇದೇ ವಿಚಾರವಾಗಿ ಮಾತನಾಡುತ್ತಿರುತ್ತೇವೆ’ ಎಂದರು.