Advertisement

ವಲಸೆ ಕಾರ್ಮಿಕರ ತಡೆ ಕ್ರಮ ನಮ್ಮ ಕೆಲಸವಲ್ಲ ; ಸ್ಥಳೀಯಾಡಳಿತಗಳೇ ಆಹಾರ ಕಲ್ಪಿಸಲಿ: ಸುಪ್ರೀಂ

08:28 AM May 17, 2020 | Hari Prasad |

ಹೊಸದಿಲ್ಲಿ: ಕಾಲ್ನಡಿಗೆಯಲ್ಲಿ ಊರಿನತ್ತ ಹೊರಟ ವಲಸೆ ಕಾರ್ಮಿಕರಿಗೆ ಆಹಾರ, ಆಶ್ರಯ ನೀಡಲು ಸರಕಾರಕ್ಕೆ ಆದೇಶಿಸಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

Advertisement

ವಲಸೆ ಕಾರ್ಮಿಕರಲ್ಲಿ ಯಾರು ನಡೆದು ಹೋಗುತ್ತಾರೆ, ಯಾರು ನಡೆಯುವುದಿಲ್ಲ ಎಂದು ವೀಕ್ಷಿಸುವುದು ಸುಪ್ರೀಂ ಕೋರ್ಟ್‌ನ ಕೆಲಸವಲ್ಲ ಎಂದು ಸ್ಪಷ್ಟಪಡಿಸಿದೆ.

‘ಈಗಾಗಲೇ ಬಹುತೇಕ ರಾಜ್ಯಗಳು, ವಲಸಿಗರಿಗೆ ಅಂತಾರಾಜ್ಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿವೆ. ಕೇಂದ್ರ ಸರಕಾರ ಕೂಡ ಶ್ರಮಿಕ್‌ ರೈಲನ್ನು ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಹೀಗಿದ್ದೂ ಜನರು ಕಾಲ್ನಡಿಗೆಯಲ್ಲಿ ಊರಿನತ್ತ ತೆರಳುತ್ತಿದ್ದಾರೆಂದರೆ ಯಾರೇನೂ ಮಾಡಲಾಗುವುದಿಲ್ಲ. ಆಹಾರ – ಆಶ್ರಯ ಕುರಿತಾಗಿ ಗಮನಹರಿಸುವಂತೆ ಆಯಾ ಪ್ರದೇಶಗಳ ಜಿಲ್ಲಾಧಿಕಾರಿಗಳು, ರಾಜ್ಯ ಸರಕಾರಗಳನ್ನು ಕೇಳಿಕೊಳ್ಳುವುದು ಉತ್ತಮ’ ಎಂದು ನ್ಯಾ| ಎಲ್‌. ನಾಗೇಶ್ವರ ರಾವ್‌ ನೇತೃತ್ವದ ಪೀಠ ಸಲಹೆ ನೀಡಿದೆ.

ರೈಲು ತಡೆ ಅಸಾಧ್ಯ: ವಕೀಲ ಅಲಖ್‌ ಅಲೋಕ್‌ ಶ್ರೀವಾಸ್ತವ್‌, ಔರಂಗಾಬಾದ್‌ ರೈಲ್ವೆ ಹಳಿ ಮೇಲೆಅಪಘಾತಕ್ಕೀಡಾಗಿ ಮೃತರಾದ 16 ಕಾರ್ಮಿಕರ ದುರ್ಘ‌ಟನೆ ಹಿನ್ನೆಲೆಯಲ್ಲಿ, ಕಾಲ್ನಡಿಗೆಯಲ್ಲಿ ಸಾಗುವ ವಲಸಿಗರನ್ನು ತಡೆಯುವಂತೆ, ಅವರಿಗೆ ನೆರವಾಗುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

‘ರೈಲ್ವೇ ಹಳಿ ಮೇಲೆ ಜನ ಮಲಗಿದರೆ, ರೈಲನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಅವರು ರೈಲ್ವೇ ಹಳಿಯ ಮೇಲೆ ಮಲಗಬಾರದಿತ್ತು. ಮುಂದೆ ಇಂಥ ಪ್ರಮಾದಗಳು ಆಗದಂತೆ ಆಯಾ ರಾಜ್ಯ ಸರಕಾರಗಳು ನಿಗಾ ವಹಿಸಬೇಕು’ ಎಂದು ಸುಪ್ರಿಂ ಸೂಚಿಸಿದೆ.

Advertisement

ರೈಲಿಗಾಗಿ ನಡೆದ ಕಾರ್ಮಿಕ ಸಾವು: ಮುಂಬಯಿಯಿಂದ ರಾಜಸ್ಥಾನಕ್ಕೆ ಶ್ರಮಿಕ್‌ ವಿಶೇಷ ರೈಲಿನಲ್ಲಿ  ತೆರಳಲು ರೈಲು ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ ವಲಸಿಗ ಕಾರ್ಮಿಕ ಹಾದಿಯಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಥಾಣೆ ಜಿಲ್ಲೆಯ ಭಯಾಂದೆರ್‌ ಪ್ರದೇಶದ ಹರೀಶ್‌ ಚಂದೇರ್‌ ಶಂಕರ್‌ಲಾಲ್‌ ಎಂದು ಗುರುತಿಸಲಾಗಿದೆ. ಅವರು 30 ಕಿ.ಮೀ. ದೂರ ನಡೆದಿದ್ದರು. ಮುಂಬಯಿನ ವಸಾಯಿ ರಸ್ತೆ ರೈಲ್ವೇ ನಿಲ್ದಾಣದಿಂದ ಶ್ರಮಿಕ್‌ ರೈಲಿನ ಮೂಲಕ ರಾಜಸ್ಥಾನಕ್ಕೆ ಹೋಗಬೇಕಿತ್ತು.

ಪೂರ್ಣ ಸಂಬಳ ಆದೇಶಕ್ಕೆ ತಡೆ
ಲಾಕ್‌ಡೌನ್‌ ವೇಳೆಯಲ್ಲಿ ಎಲ್ಲ ಕಂಪೆನಿಗಳು ತಮ್ಮ ಸಿಬ್ಬಂದಿಗೆ ವೇತನ ಕಡಿತ ಮಾಡದೆ, ಕಡ್ಡಾಯವಾಗಿ ಪೂರ್ಣ ಸಂಬಳ ನೀಡಬೇಕೆಂಬ ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ಸುಪ್ರೀಂ ಕೋರ್ಟ್‌ ತಡೆಹಿಡಿದಿದೆ.

ಮಾ.29ರಂದು ಗೃಹ ಸಚಿವಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ, ಲೂಧಿಯಾನ ಹ್ಯಾಂಡ್‌ಟೂಲ್ಸ್‌ ಅಸೋಸಿಯೇಶನ್‌, ಫಿಕಸ್‌ ಪ್ಯಾಕ್ಸ್‌ ಹಾಗೂ ನಾಗರಿಕ ಎಕ್ಸ್‌ಪೋರ್ಟ್ಸ್, ಸುಪ್ರಿಂ ಕೋರ್ಟ್‌ನ ಮೆಟ್ಟಿಲೇರಿದ್ದವು. ವ್ಯವಹಾರವಿಲ್ಲದೆ ಸಂಸ್ಥೆಗಳು ನಷ್ಟದಲ್ಲಿರುವಾಗ ಪೂರ್ಣ ಸಂಬಳ ನೀಡಲು ಹೇಗೆ ಸಾಧ್ಯ ಎಂದು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.

ಪೊಲೀಸರ ಜತೆಗೆ ಕಾರ್ಮಿಕರ ಘರ್ಷಣೆ
ಗುಜರಾತ್‌ನ ಭರೂಚ್‌ ಜಿಲ್ಲೆಯ ದಹೇಜ್‌ ಕೈಗಾರಿಕಾ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರು ಪೊಲೀಸರ ಜತೆಗೆ ಶುಕ್ರವಾರ ಘರ್ಷಣೆಗೆ ಇಳಿದಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ವಗ್ರಾಮಗಳಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎನ್ನುವುದು ಅವರ ಒತ್ತಾಯ.

150 ಮಂದಿ ವಲಸೆ ಕಾರ್ಮಿಕರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಪೊಲೀಸರು ಅಶ್ರುವಾಯು ಸಿಡಿಸಿ ಅವರನ್ನು ಚದುರಿಸಿದ್ದಾರೆ. ಗುರುವಾರ ಕೂಡ ಹಲವಾರು ಮಂದಿ ಊರಿಗೆ ಹೋಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದ್ದರು.

6 ಮಂದಿ ಸಾವು: ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ನಡೆದ ಅಪಘಾತಗಳಲ್ಲಿ ಆರು ಮಂದಿ ವಲಸೆ ಕಾರ್ಮಿಕರು ಅಸುನೀಗಿದ್ದಾರೆ. ಜತೆಗೆ ಈ ಪ್ರಕರಣಗಳಲ್ಲಿ 95 ಮಂದಿ ಗಾಯಗೊಂಡಿದ್ದಾರೆ.

ಬಾರಾಬಂಕಿ, ಜಲೌನ್‌, ಬಹರ್ಚಿಯಾ ಮತ್ತು ಮಹೋಬಾ ಜಿಲ್ಲೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಈ ದುರಂತ ನಡೆದಿದೆ. ಗಾಯಗೊಂಡವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಸುನೀಗಿದ ವ್ಯಕ್ತಿಗಳ ಕುಟುಂಬಕ್ಕೆ ಉ.ಪ್ರ. ಸರಕಾರ ಪರಿಹಾರ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next