Advertisement

ನಿಮ್ಮನ್ನ ಚೌಕಿದಾರ ಅಂತ ಕರೆಯಬೇಕಾ? : ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

03:36 PM Apr 20, 2022 | Team Udayavani |

ಮೈಸೂರು: ‘ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಅಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಂತ್ರ ಬಂದು 75 ವರ್ಷ ಆಗುವ ವೇಳೆಯಲ್ಲಿ ದೇಶದ ಸಾಲವನ್ನ ದುಪ್ಪಟ್ಟು ಮಾಡಿದ್ದಾರೆ ಅಷ್ಟೇ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ರಸಗೊಬ್ಬರ ಬೆಲೆಗಳು ಗಗನಕ್ಕೆ ಏರಿದೆ.ನರೇಂದ್ರ ಮೋದಿ ಅವರು ರೈತರ ಜೇಬಿನಿಂದ 3,600ಕೋಟಿ ದೋಚಿದ್ದಾರೆ’ ಎಂದು ಆಕ್ರೋಶ ಹೊರ ಹಾಕಿದರು.

‘ಅಂಬಾನಿ, ಅದಾನಿ ಸಂಪತ್ತು ಮಾತ್ರ ಏರಿಕೆ ಆಗಿದೆ‌.ಅಂತಹವರ ಸಾಲ ಮನ್ನಾವನ್ನೂ ಮಾಡಿದ್ದಾರೆ. ಇವರು ಯಾರ ಪರ ಇದ್ದಾರೆ. ಕಾರ್ಪೊರೇಟ್ ಟ್ಯಾಕ್ಸ್ ಡಾ. ಮನಮೋಹನ್ ಸಿಂಗ್ ಕಾಲದಲ್ಲಿ 35% ಇತ್ತು, ಈಗ 23%ಗೆ ಇಳಿಸಿದ್ದಾರೆ. ಕೇಂದ್ರಕ್ಕೆ ಇದರಿಂದ 5 ಲಕ್ಷ ಕೋಟಿ ಕಡಿಮೆ ಆಯ್ತು.ಇದೆಲ್ಲ ಸುಳ್ಳು ಎನ್ನುವುದಾದರೆ ಒಂದೇ ವೇದಿಕೆಗೆ ಚರ್ಚೆಗೆ ಬರಲಿ’ ಎಂದು ಪ್ರಧಾನಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.

‘ಮೋದಿ ಪ್ರಧಾನಿ ಆದಮೇಲೆ 8 ಕೋಟಿ ಉದ್ಯೋಗ ತಪ್ಪಿ ಹೋಗಿವೆ. ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದೇ ನರೇಂದ್ರ ಮೋದಿ ಅವರ ಕೊಡುಗೆಯಾ? ದೇಶದ ಸಾಲ 53.11ಲಕ್ಷ ಕೋಟಿಯಿಂದ 152 ಲಕ್ಷ ಕೋಟಿ ಸಾಲ ಮಾಡಿದ್ದೀರಿ. ಇದನ್ನ ಯಾರು ತೀರಿಸಬೇಕು ಹೇಳಿ.ದೇಶದಲ್ಲಿ ಯುವಕರ, ಮಹಿಳೆಯರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಮೋದಿ ಪ್ರಧಾನಿ ಆಗಿ 8 ವರ್ಷ ಆಗುತ್ತಿದೆ. 16 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಯುವಕರು ಉದ್ಯೋಗ ಕೊಡಿ ಅಂದರೆ ಪಕೋಡ ಮಾರಿ, ಬೋಂಡಾ ಮಾರಿ ಅಂತಾರೆ. ವಿಶ್ವಾಸ ಇಟ್ಟು ವೋಟ್ ಹಾಕಿದ ಯುವಕರ ತಲೆ ಮೇಲೆ ಚಪ್ಪಡಿ ಎಳೆದು ಬಿಟ್ಟಿರಲ್ಲ ಮೋದಿಜಿ’ ಎಂದು ವ್ಯಂಗ್ಯವಾಡಿದರು.

‘ತಿನ್ನುವುದಿಲ್ಲ, ತಿನ್ನುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಿರಿ. ಕಂಟ್ರಾಕ್ಟರ್ ಅಸೋಸಿಯೇಷನ್ 2020 ನೇ ಇಸವಿಯಲ್ಲಿ ನಿಮಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಕಂಟ್ರಾಕ್ಟರ್ ಬದುಕಲು ಸಾಧ್ಯ ಇಲ್ಲ, ನಮ್ಮ ರಕ್ತ ಹೀರುತ್ತಿದ್ದಾರೆ. 40% ಕಮಿಷನ್ ಕೇಳುತ್ತಿದ್ದಾರೆ ಅಂದಿದ್ದರು. ಕರ್ನಾಟಕ ಇತಿಹಾಸದಲ್ಲಿ ಈ ರೀತಿ ಪತ್ರ ಬರೆದ ನಿದರ್ಶನ ಇಲ್ಲ. ತನಿಖೆ ಮಾಡಿಸುವಂತೆ ಕೇಳಿದ್ದರೂ, ಇವತ್ತಿನ ವರೆಗೆ ತನಿಖೆ ಮಾಡಿಸಿಲ್ಲ.
ನಿಮ್ಮನ್ನ ಚೌಕಿದಾರ ಅಂತ ಕರೆಯಬೇಕಾ? ಭ್ರಷ್ಟಾಚಾರಕ್ಕೆ ಕುಮ್ಮಕ್ಕು, ಶಿಫಾರಸ್ಸು ಮಾಡುವ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next