ಪರಮ ನಾಸ್ತಿಕನೊಬ್ಬ ದೇವರನ್ನು ಭಜಿಸದೆ, ಪೂಜಿಸದೇ ಇದ್ದರೂ ಆತ ಮತ್ತು ಆತನ ಕುಟುಂಬ ಯಾವುದೇ ಸಮಸ್ಯೆಯಿಲ್ಲದೆ ಬದುಕುತ್ತಿದೆ. ಅಂದರೆ ಆಸ್ತಿಕರಿಗೆ ಮಾತ್ರ ಕಷ್ಟ ಕಾರ್ಪಣ್ಯಗಳೇ? ಹೀಗೇಕೆ? ಎಂಬುದು ಕೆಲವರ ಪ್ರಶ್ನೆ. ಆದರೆ ಇಲ್ಲೊಂದು ನಾವು ಅರಿಯದ ಸತ್ಯವಿದೆ. ನಾಸ್ತಿಕ ದೇವರನ್ನು ನಂಬುವುದಿಲ್ಲವೆನ್ನುತ್ತಲೇ ಅವನಿಗೆ ಅರಿವಿಲ್ಲದೇ ದೇವರನ್ನು ಪೂಜಿಸುತ್ತಾನೆ…
ಆಸ್ತಿಕತೆ ಎಂದರೇನು? ಎಂದು ಕೇಳಿದಾಕ್ಷಣ ಹೊಳೆಯುವ ಉತ್ತರ ದೇವರನ್ನು ನಂಬುವುದು, ಪೂಜಿಸುವುದು ಮತ್ತು ಭಜಿಸುವುದು ಇತ್ಯಾದಿ. ದೇವರನ್ನು ನಂಬದೇ ಇರುವುದೇ ನಾಸ್ತಿಕತೆ ಎಂಬ ಸರಳವಾದ ತಿಳುವಳಿಕೆ ಎಲ್ಲರಲ್ಲಿಯೂ ಇದೆ. ಆದರೆ, ಆಸ್ತಿಕತೆ ಎಂಬುದು ಕೇವಲ ದೇವರನ್ನು ನಂಬುವುದು ಎಂಬುದಕ್ಕೆ ಸೀಮಿತವಾದುದಲ್ಲ. ನಮ್ಮ ಮನಸ್ಸಿನ ನಿಗ್ರಹ ಮತ್ತು ಸದ್ವಿನಿಯೋಗ ಮಾಡುವುದು ಮುಖ್ಯವಾಗಿ ಆಸ್ತಿಕತೆ. ಅಂದರೆ ಧನಾತ್ಮಕವಾಗಿ, ನಿರಂತರವಾಗಿ ಮನಸ್ಸನ್ನು ಒಂದಲ್ಲ ಒಂದು ರೀತಿಯಲ್ಲಿ ಹಿಡಿತದಲ್ಲಿಟ್ಟುಕೊಂಡು, ಮನಸ್ಸು ಸಂಸ್ಕಾರಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ದೇವರು ಮೆಚ್ಚುವುದು ಶುದ್ಧ ಮನಸ್ಸನ್ನು. ಅದನ್ನು ಸಾಧಿಸುವ ರೀತಿ ಹೇಗೇ ಇರಲಿ, ಸನ್ಮಾರ್ಗದಲ್ಲಿದ್ದರೆ ಸಾಕು. ದೇವರ ಅಭಯ ಅವನ ಜೊತೆಗಿದ್ದೇ ಇರುತ್ತದೆ.
ಇನ್ನು ಕೆಲವರ ಅಳಲಿದೆ. ಪರಮ ನಾಸ್ತಿಕನೊಬ್ಬ ದೇವರನ್ನು ಭಜಿಸದೆ, ಪೂಜಿಸದೇ ಇದ್ದರೂ ಆತ ಮತ್ತು ಆತನ ಕುಟುಂಬ ಯಾವುದೇ ಸಮಸ್ಯೆಯಿಲ್ಲದೆ ಬದುಕುತ್ತಿದೆ. ಅಂದರೆ, ಆಸ್ತಿಕರಿಗೆ ಮಾತ್ರ ಕಷ್ಟ ಕಾರ್ಪಣ್ಯಗಳೇ? ಹೀಗೇಕೆ? ಎಂಬುದು. ಆದರೆ ಇಲ್ಲೊಂದು ನಾವು ಅರಿಯದ ಸತ್ಯವಿದೆ. ಅವನು ದೇವರನ್ನು ನಂಬುವುದಿಲ್ಲವೆನ್ನುತ್ತಲೇ ಅವನಿಗೆ ಅರಿವಿಲ್ಲದೇ ದೇವರನ್ನು ಪೂಜಿಸುತ್ತಾನೆ. ಅಂದರೆ, ತನ್ನ ಮನಸ್ಸನ್ನು ನಿಗ್ರಹಿಸುತ್ತಾನೆ. ಇದೇ ಅಲ್ಲವೇ ದೇವರನ್ನು ಕಾಣುವ ಮಾರ್ಗ. ಪರಮನಾಸ್ತಿಕನೊಬ್ಬನಿಗೆ ತನ್ನೂರಿನಲ್ಲಿರುವ ಅರಳೀಕಟ್ಟೆಗೆ ಜನರೆಲ್ಲ ಮುಗಿಬಿದ್ದು ಪೂಜಿಸುವುದನ್ನು ಕಂಡು ಕೋಪ ಬರುತ್ತಿತ್ತು. ಹಾಗಾಗಿ ಆತ, ಯಾರೂ ಇಲ್ಲದಾಗ ಆ ಮರವನ್ನು ಕಡಿದು ಮುಗಿಸಬೇಕೆಂದು ನಿರ್ಧರಿಸಿದ. ಪ್ರತಿಗಳಿಗೆಯೂ ಆ ಬಗ್ಗೆ ಯೋಚನೆ-ಯೋಜನೆಯನ್ನು ಹಾಕುತ್ತಾ ಕಾಲ ಕಳೆಯತೊಡಗಿದ. ಅದನ್ನೇ ಚಿಂತಿಸುತ್ತ ಅವನ ಮನಸ್ಸು ಏಕಾಗ್ರತೆಯತ್ತ ಸಾಗುತ್ತ ಶುದ್ಧವಾಗುತ್ತ ಹೋಯಿತು. ಕೊನೆಯ ತನಕವೂ ಅವನಿಗೆ ಆ ಮರವನ್ನು ಕಡಿಯಲಾಗಲಿಲ್ಲ. ಆದರೆ ಅದರ ಬಗೆಗೆ ಚಿತ್ತವನ್ನಿಟ್ಟದ್ದ ಆತನ ಮನಸ್ಸು ಕೆಟ್ಟಕಾರ್ಯಗಳಿಗೆ ಮುಂದಾಗಲಿಲ್ಲ. ಅಂದರೆ, ಅವನಿಗರಿವಿಲ್ಲದೆಯೇ ಆಸ್ತಿಕನಾಗಿದ್ದ. ಅಂದರೆ ಮನಸ್ಸು ಅಲ್ಲಿ ಕೇಂದ್ರೀಕೃತವಾಗಿದ್ದರಿಂದ ಕೆಟ್ಟಯೋಚನೆಗಳು ಬಾರದೆ ಸನ್ಮಾರ್ಗದಲ್ಲಿಯೇ ಬದುಕಿದ.
ಆದ್ದರಿಂದ ಆತ ನಾಸ್ತಿಕನಾಗಿದ್ದರೂ ಸುಖಜೀವನ ನಡೆಸಿದ್ದ. ಇದು, ಉದಾಹರಣೆಗೆ ಹೆಣೆದ ಕತೆ. ಆದರೆ ಸತ್ಯವೂ ಅದೇ. ನಾಸ್ತಿಕ ಎನಿಸಿಕೊಂಡವನು ದೇವರಿಲ್ಲ..ದೇವರಿಲ್ಲ ಎನ್ನುತ್ತಲೇ ಅದರ ಪ್ರತಿಪಾದನೆಯಲ್ಲಿಯೇ ಮನಸ್ಸನ್ನು ಕೇಂದ್ರೀಕರಿಸಿದುದರಿಂದ ಪಂಚೇಂದ್ರಿಯಗಳೂ, ಆಮೂಲಕ ಕರ್ಮೇಂದ್ರಿಯಗಳೂ ವಿಚಲಿತವಾಗದೇ ಸನ್ಮಾರ್ಗದಲ್ಲಿಯೇ ನಡೆದುದರಿಂದ ಆತ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಹಾಗಾಗಿ, ನನ್ನ ಪ್ರಕಾರ ನಾಸ್ತಿಕತೆ ಎಂಬುದೂ ಆಸ್ತಿಕತೆಯೇ. ಆಸ್ತಿಕತೆಯ ಮೂಲಸ್ವರೂಪ ಏಕಾಗ್ರತೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ದೇಹವನ್ನು ನಿಯಂತ್ರಿಸುವುದೇ ಆಸ್ತಿಕತೆ. ಇದನ್ನೇ ಸರಳ ಮತ್ತು ಸುಲಭವಾಗಿ ದೇವರ ಬಗೆಗೆ ನಂಬಿಕೆ ಎಂದು ಹೇಳಿಕೊಳ್ಳುತ್ತೇವೆ. ಕಿಟಕಿಯ ಮೂಲಕ ಕಸವನ್ನೋ ಸಣ್ಣ ಕಲ್ಲನ್ನೋ ಬಿಸಾಡುವಾಗ ಅದು ಹೆಚ್ಚಾಗಿ ಆ ಕಿಟಕಿಯ ಸರಳಿಗೇ ತಾಗುವುದನ್ನು ನಾವು ಗಮನಿಸಿರುತ್ತೇವೆ. ಏಕೆಂದರೆ, ನಾವು ಹೊರಗೆ ಬಿಸಾಡುವ ತವಕದಲ್ಲಿ ಮನಸ್ಸನ್ನು ನಮಗರಿವಿಲ್ಲದೇ ಸರಳಿನ ಮೇಲೆ ಕೇಂದ್ರೀಕರಿಸಿರುತ್ತೇವೆ. ಹಾಗಾಗಿ ಆ ಕಲ್ಲು ನೇರವಾಗಿ ಸರಳನ್ನು ತಟ್ಟುತ್ತದೆ.
ನಾಸ್ತಿಕತೆಯೂ ಹೀಗೆಯೇ. ಇಲ್ಲವೆನ್ನುತ್ತ ಮನವನ್ನು ಕೇಂದ್ರೀಕರಿಸಿದರೂ ದೇವರ ಸಾಕ್ಷಾತ್ಕಾರವಾಗಿಯೇ ಆಗುತ್ತದೆ. ಏಕಾಗ್ರತೆಯ ಮಾರ್ಗ: ನಾಸ್ತಿಕತೆ ಎಂಬುದು ಆಸ್ತಿಕತೆಯ ಇನ್ನೊಂದು ಹೆಸರು. ಏಕಾಗ್ರತೆಗೆ ಮತ್ತೂಂದು ದಾರಿ. ಆಚಾರ ಬದಲಿರಬಹುದು. ಮಾರ್ಗ ಬೇರೆಯದ್ದೇ ಇರಬಹುದು. ಚಿತ್ತಶುದ್ಧಿಗೆ ದಾರಿ ಸಾವಿರಾರು.
ವಿಷ್ಣು ಭಟ್ಟ ಹೊಸ್ಮನೆ