Advertisement

ಬಾಲಾಕೋಟ್ ವಾಯುದಾಳಿಗೆ ನೆರವಾಗಿದ್ದು ಅಫ್ಘಾನ್ ಗುಪ್ತಚರ ಮಾಹಿತಿ!

11:02 AM Feb 27, 2020 | Hari Prasad |

ನವದೆಹಲಿ: ಪಾಕಿಸ್ಥಾನ ಪ್ರಾಯೋಜಿತ ಜೈಶ್ ಉಗ್ರರು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರಿದ್ದ ಸೇನಾ ವಾಹನವನ್ನು ಸ್ಪೋಟಿಸಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಪಾಕಿಸ್ಥಾನ ಭೂಭಾಗದೊಳಗೆ ನುಗ್ಗಿ ಉಗ್ರ ತರಬೇತಿ ಶಿಬಿರಗಳನ್ನು ನಾಶಪಡಿಸಿದ ಬಾಲಾಕೋಟ್ ವಾಯುದಾಳಿಗೆ ಇಂದಿಗೆ ಒಂದು ವರ್ಷ ಪೂರ್ತಿಯಾಗಿದೆ.

Advertisement

ಪುಲ್ವಾಮ ಉಗ್ರ ದಾಳಿಯ ಬಳಿಕ ಪಾಕ್ ಸೇನೆಯು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇದ್ದ ಉಗ್ರಗಾಮಿ ಶಿಬಿರಗಳನ್ನು ತೆರವುಗೊಳಿಸಿತ್ತು. ಪುಲ್ವಾಮ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಎಲ್.ಒ.ಸಿ. ಭಾಗದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುವ ಆತಂಕ ಪಾಕಿಸ್ಥಾನದ್ದಾಗಿತ್ತು.

ಈ ಕಾರಣಕ್ಕಾಗಿ ಇಲ್ಲಿದ್ದ ಉಗ್ರರನ್ನು ಪಾಕಿಸ್ಥಾನ ಅಫ್ಗಾನಿಸ್ಥಾನ ಗಡಿ ಭಾಗದಲ್ಲಿದ್ದ ಬೆಟ್ಟ ಗುಡ್ಡಗಳಿಂದ ಆವೃತ ದುರ್ಗಮ ಬಾಲಾಕೋಟ್ ಪ್ರದೇಶಕ್ಕೆ ರವಾನಿಸಿತ್ತು. ಭಾರತೀಯ ಸೇನೆಯು ತನ್ನ ನೆಲದೊಳಕ್ಕೆ ಅಷ್ಟು ದೂರ ನುಗ್ಗಿ ಬಂದು ದಾಳಿ ನಡೆಸಲಾರದು ಎಂಬ ಯೋಚನೆ ಪಾಕಿಸ್ಥಾನದ್ದಾಗಿತ್ತು.

ಆದರೆ ಪಾಕ್ ನ ಈ ಯೋಚನೆ ತಲೆಕೆಳಗಾಗಿದ್ದೇ ಫೆಬ್ರವರಿ 26ರ ಬೆಳ್ಳಂಬೆಳಿಗ್ಗೆ ಭಾರತೀಯ ವಾಯುಪಡೆಯ ಮಿರಾಜ್ ಯುದ್ಧ ವಿಮಾನಗಳು ಖೈಬರ್ ಪಖ್ಟ್ತುಂಖ್ವಾ ಪ್ರದೇಶದಲ್ಲಿದ್ದ ಬಾಲಾಕೋಟ್ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ಉಗ್ರಗಾಮಿ ತರಬೇತು ಶಿಬಿರದ ಮೇಲೆ ಬಾಂಬ್ ಗಳನ್ನು ಸುರಿಸಿ ಯಶಸ್ವಿಯಾಗಿ ತಮ್ಮ ನೆಲೆಯನ್ನು ಸೇರಿಕೊಂಡಾಗ ಪಾಕಿಸ್ಥಾನ ಸಹಿತ ವಿಶ್ವವೇ ಒಮ್ಮ ಬೆಚ್ಚಿಬಿದ್ದಿತ್ತು.

ಆದರೆ ಒಟ್ಟು ಬಾಲಾಕೋಟ್ ದಾಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಗುಪ್ತಚರ ಮಾಹಿತಿಗಳು. ಎಲ್.ಒ.ಸಿ ಭಾಗದಿಂದ ಕಾಲ್ಕಿತ್ತಿದ್ದ ಉಗ್ರರನ್ನು ಪಾಕಿಸ್ಥಾನ ನೇರವಾಗಿ ಸಾಗಿಸಿದ್ದೇ ಈ ಬಾಲಾಕೋಟ್ ಉಗ್ರ ಶಿಬಿರಗಳಿಗೆ. ಇಲ್ಲಿನ ಉಗ್ರ ಶಿಬಿರಗಳಿಗೆ ಹೊಸ ಉಗ್ರರು ಬರುತ್ತಿದ್ದಾರೆ ಎಂಬ ಅಮೂಲ್ಯ ಮಾಹಿತಿಯನ್ನು ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ನೀಡಿದ್ದು ಬೇರಾರು ಅಲ್ಲ, ಬದಲಾಗಿ ಅ‍ಫ್ಘಾನಿಸ್ಥಾನ ಗುಪ್ತಚರ ಜಾಲಗಳಿಂದಲೇ ಈ ಮಹತ್ವದ ಮಾಹಿತಿ ಭಾರತಕ್ಕೆ ಲಭ್ಯವಾಗಿದ್ದು.

Advertisement

ಅಫ್ಘಾನಿಸ್ಥಾನದಲ್ಲಿನ ಗುಪ್ತಚರ ಜಾಲಗಳು ಭಾರತದ ತಾಂತ್ರಿಕ ಗುಪ್ತಚರ ದಳ, ರಾಷ್ಟ್ರೀಯ ತಾಂತ್ರಿಕ ಸಂಸೋಧನಾ ಸಂಸ್ಥೆಗಳಿಗೆ ನೀಡಿದ ಈ ಪ್ರಾಥಮಿಕ ಮಾಹಿತಿಗಳನ್ನು ಆಧರಿಸಿ ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ ಈ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಕಣ್ಗಾವಲು ಇರಿಸಿದ ಬಳಿಕ ಅಲ್ಲಿ ಲಭಿಸಿದ ಮಾಹಿತಿಗಳನ್ನು ಆಧರಿಸಿ ಈ ವಾಯುದಾಳಿಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಪಾಕಿಸ್ಥಾನದ ಖೈಬರ್ ಪಖ್ಟ್ತುಂಖ್ವಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಅಫ್ಘಾನ್ ಗುಪ್ತಚರ ಇಲಾಖೆಯ ಮಾನವ ಸಂಪನ್ಮೂಲಗಳಿಂದ ಪ್ರಾಥಮಿಕ ಮಾಹಿತಿಗಳು ನಮ್ಮ ಗುಪ್ತಚರ ಸಂಸ್ಥೆಗಳಿಗೆ ಲಭಿಸಿವೆ.

ಈ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ಒಂದು ಸಮಗ್ರ ದಾಳಿ ಯೋಜನೆಯನ್ನು ರೂಪಿಸಿದ ಬಳಿಕ ಭಾರತೀಯ ವಾಯುಪಡೆಯು ಬಾಲಾಕೋಟ್ ದಾಳಿಯ ರೂಪುರೇಷೆಗಳನ್ನು ಪಕ್ಕಾ ಮಾಡಿಕೊಂಡಿದೆ. ಆ ಬಳಿಕ ಯೋಜನೆಯ ಪ್ರಕಾರವೇ 2019ರ ಫೆಬ್ರವರಿ 26ರ ಬೆಳ್ಳಂಬೆಳಿಗ್ಗೆ ಒಟ್ಟು 16 ಯುದ್ಧ ವಿಮಾನಗಳ ಪೈಕಿ ಸ್ಪೈಸ್ 2000 ಮತ್ತು ಕ್ರಿಸ್ಟಲ್ ಮೇಝ್ ಕ್ಷಿಪಣಿಗಳನ್ನು ಹೊತ್ತಿದ್ದ ತಲಾ 6 ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿ ಸುರಕ್ಷಿತವಾಗಿ ವಾಪಾಸಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next