Advertisement

4 ಕೋಟಿ ವಿಮಾ ಹಣಕ್ಕಾಗಿ ಕೊಲೆ ಮಾಡಿ ತನ್ನ ನಕಲಿ ಸಾವಿನ ಕಥೆ ಕಟ್ಟಿದ

11:20 AM Jun 30, 2017 | udayavani editorial |

ನಾಶಿಕ್‌ : ಕೇಳಲು ಇದೊಂದು ಬಾಲಿವುಡ್‌ ಸಿನೆಮಾ ಕಥೆಯ ಹಾಗಿದೆ; ಆದರೂ ಇದು ಸತ್ಯ ಘಟನೆಯೇ ಆಗಿದೆ.  ರಾಮದಾಸ್‌ ವಾಘಾ ಎಂಬ

Advertisement

ನಾಶಿಕ್‌ : ಕೇಳಲು ಇದೊಂದು ಬಾಲಿವುಡ್‌ ಸಿನೆಮಾ ಕಥೆಯ ಹಾಗಿದೆ; ಆದರೂ ಇದು ಸತ್ಯ ಘಟನೆಯೇ ಆಗಿದೆ. ರಾಮದಾಸ್‌ ವಾಘಾ ಎಂಬ  ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿ ತಾನೇ ಮುಖ್ಯ ಪಾತ್ರದಲ್ಲಿದ್ದು ಕೊಂಡು ಇತರ ಮೂವರು ಸ್ನೇಹಿತರ ನೆರವಿನಲ್ಲಿ, ತನ್ನ ನಾಲ್ಕು ಕೋಟಿ ರೂ. ವಿಮಾ ಮೊತ್ತವನ್ನು ಪಡೆಯಲು ನಡೆಸಿದ ರೋಚಕ ಸತ್ಯ ಘಟನೆ ಇದಾಗಿದೆ.

ರಾಮದಾಸ್‌ ವಾಘಾ ರಸ್ತೆ ಅಪಘಾತದಲ್ಲಿ ಸತ್ತರೆಂದು ತೋರಿಸುವುದು ಮತ್ತು ಆ ಮೂಲಕ ಅವರಿಗೆ ಮೂರು ಬೇರೆ ಬೇರೆ ವಿಮಾ ಕಂಪೆನಿಗಳಲ್ಲಿರುವ ಪಾಲಿಸಿಗಳ ಮೂಲಕ ನಾಲ್ಕು ಕೋಟಿ ರೂ. ಹಣ ಪಡೆಯುವುದು ಈ ಕಥೆಯ ಮೂಲ ಹಂದರ. 

ಇದಕ್ಕಾಗಿ ವಾಘಾ ಮತ್ತು ಆತನ ಮೂವರು ಸ್ನೇಹಿತರು (ಇವರಲ್ಲಿ ಒಬ್ಟಾತ ಹೊಟೇಲು ಉದ್ಯಮಿ) ಹೊಟೇಲಿನ ವೇಟರ್‌ ಒಬ್ಬನನ್ನು ಕತ್ತು ಹಿಸುಕಿ, ಉಸಿರು ಗಟ್ಟಿಸಿ ಸಾಯಿಸಿದರು. ಬಳಿಕ ಆತನ ಮುಖದ ಗುರುತು ಹತ್ತದ ರೀತಿಯಲ್ಲಿ ಆತನ ಮೇಲೆ ವಾಹನವೊಂದನ್ನು ಹರಿಸಿದರು. ಹೀಗೆ ರಸ್ತೆ ಅಪಘಾತದಲ್ಲಿ  ಸತ್ತ ವ್ಯಕ್ತಿ ರಾಮದಾಸ್‌ ವಾಘಾ ಎಂದು ತೋರಿಸಲು ವೇಟರ್‌ನ ಶವದ ಅಂಗಿಯ ಕಿಸೆಯಲ್ಲಿ ವಾಘಾನ ಎಟಿಎಂ ಕಾರ್ಡ್‌ ಮತ್ತೆ ಇಲೆಕ್ಟ್ರಿಸಿಟಿ ಬಿಲ್‌ ಇಟ್ಟರು. 

ಜೂನ್‌ 9ರಂದು ನಾಶಿಕ್‌ನ ತ್ರ್ಯಂಬಕೇಶ್ವರ ದೇವಸ್ಥಾನದ ಬಳಿಯಲ್ಲಿ  ನಡೆಯಿತೆನ್ನಲಾದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಪರಿಚಿತ ವ್ಯಕ್ತಿಯ ಶವವನ್ನು ಪೊಲೀಸರು, ಕೇಸು ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

Advertisement

ಶವದ ಕಿಸೆಯಲ್ಲಿ  ದೊರೆತ ಎಟಿಎಂ ಕಾರ್ಡ್‌, ಇಲೆಕ್ಟ್ರಿಸಿಟಿ ಬಿಲ್‌ ಆಧಾರದಲ್ಲಿ ರಾಮದಾಸ್‌ ವಾಘಾ ಅವರ ಕುಟುಂಬದವರು ಮತ್ತು ಸ್ನೇಹಿತರನ್ನು ಕಾಣಲು ಹೋದ ಪೊಲೀಸರಿಗೆ “ವಾಘಾ ಸತ್ತಿಲ್ಲ, ಜೀವಂತ ಇದ್ದಾರೆ’ ಎಂಬ ಮಾಹಿತಿ ದೊರಕಿ ಅಚ್ಚರಿ ಉಂಟಾಯಿತು. 

ಇತ್ತ ಶವದ ಪೋಸ್ಟ್‌ ಮಾರ್ಟಂ ವರದಿ ಕೈಸೇರಿದ ಪೊಲೀಸರಿಗೆ, “ಅಪರಿಚಿತ ವ್ಯಕ್ತಿಯ ಸಾವು ರಸ್ತೆ ಅಪಘಾತದಿಂದ ಆಗಿಲ್ಲ; ಉಸಿರು ಗಟ್ಟಿ ಸಾಯಿಸಿರುವುದರಿಂದ ಆಗಿದೆ’ ಎಂದು ತಿಳಿಯಿತು. 

ಒಡನೆಯೇ ಪೊಲೀಸರು ರಾಮದಾಸ್‌ ವಾಘಾನನ್ನು ಬಂಧಿಸಲು ಮುಂದಾದರು. ಆದರೆ ತನ್ನ ಸಿನಿಮೀಯ ಕೃತ್ಯ ಪೊಲೀಸರಿಗೆ ತಿಳಿಯಿತೆಂಬುದನ್ನು ಅರಿತ ವಾಘಾ ನಾಪತ್ತೆಯಾದ. ಆದರೆ ಪೊಲೀಸರು ಕೊಲೆ ಕೃತ್ಯದಲ್ಲಿ ಶಾಮೀಲಾದ ಆತನ ಮೂವರು ಸಹಚರರನ್ನು ಬಂಧಿಸಿದರು. ಕೊಲೆ ಕೃತ್ಯಕ್ಕೆ ಬಳಸಲಾದ ಮಾರುತಿ 800 ಕಾರನ್ನು ಕೂಡ ಅವರಿಂದ ವಶಪಡಿಸಿಕೊಂಡರು. 

ವಾಘಾ ಮತ್ತು ಆತನ ಸಹಚರರಿಂದ ಕೊಲೆಗೀಡಾದ 45ರ ಹರೆಯದ ಹೊಟೇಲ್‌ ವೇಟರ್‌, ತಮಿಳುನಾಡು ಅಥವಾ ಆಂಧ್ರ ಪ್ರದೇಶದವನಾಗಿದ್ದು ಆತನ ಹೆಸರು ಮುಬಾರಕ್‌ ಚಾಂದ್‌ ಪಾಶಾ ಎಂದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರಿಗೆ ಮುಖ್ಯ ಕೊಲೆ ಆರೋಪಿಯಾಗಿದ್ದು ತಲೆ ಮರೆಸಿಕೊಂಡಿರುವ ರಾಮದಾಸ್‌ ವಾಘಾ ನಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next