Advertisement

ವಸತಿ ಯೋಜನೆ ನೋಡಲ್‌ ಅಧಿಕಾರಿಗಳಿಗೆ 2 ವರ್ಷಗಳಿಂದ ಬಂದಿಲ್ಲ ವೇತನ !

06:00 AM Jun 03, 2018 | |

ಪುತ್ತೂರು: ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ನೋಡಲ್‌ ಅಧಿಕಾರಿಗಳಾಗಿ ವಿವಿಧ ವಸತಿ ಯೋಜನೆ
ಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿ ನಿಭಾಯಿಸುತ್ತಿರುವ 206 ಮಂದಿಗೆ 2 ವರ್ಷಗಳಿಂದ ಸಂಬಳವೇ ಸಿಕ್ಕಿಲ್ಲ…!

Advertisement

ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು 176 ತಾಲೂಕು ಹಾಗೂ 30 ಜಿಲ್ಲೆಗಳಿಗೆ ವಸತಿ ಯೋಜನೆಯ ನೋಡಲ್‌ ಅಧಿಕಾರಿಗಳನ್ನು 2011ರಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿತ್ತು. ಡಾ| ಅಂಬೇಡ್ಕರ್‌ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್‌ ಯೋಜನೆ, ಬಸವ ವಸತಿ ಸಹಿತ ಎಲ್ಲ ವಸತಿ ಯೋಜನೆಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿತ್ತು.

ನ್ಯಾಯಾಲಯದಲ್ಲಿ ಪ್ರಕರಣ
2015ರ ತನಕ ಇವರಿಗೆ ಸಮರ್ಪಕವಾಗಿ ಸಂಬಳವನ್ನೂ ನೀಡಲಾಗಿತ್ತು. 2015ರಲ್ಲಿ ಈ ವಸತಿ ಯೋಜನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ನೋಡಲ್‌ ಅಧಿಕಾರಿಗಳನ್ನು ಗುತ್ತಿಗೆ ಆಧಾರ ವ್ಯವಸ್ಥೆಯಿಂದ ಹೊರಗುತ್ತಿಗೆಗೆ ಬದಲಿಸುವ ಪ್ರಯತ್ನ ಸರಕಾರದ ಮಟ್ಟದಲ್ಲಿ ನಡೆದಿದ್ದು, ಇದರ ವಿರುದ್ಧ ನೋಡಲ್‌ ಅಧಿಕಾರಿಗಳು ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಇವರ ಹೋರಾಟ ನ್ಯಾಯಾಲಯದ ಏಕ ಸದಸ್ಯ ಪೀಠದಲ್ಲಿ ವಿಫಲವಾಗಿದ್ದರೂ ಇದೀಗ ಇವರ ದೂರು ದ್ವಿಸದಸ್ಯ ಪೀಠದಲ್ಲಿದೆ. ಯಥಾಸ್ಥಿತಿಯನ್ನು ಕಾಯ್ದು ಕೊಳ್ಳುವಂತೆ ಆದೇಶವನ್ನೂ ನೀಡಲಾಗಿದೆ.

ಎಲ್ಲಿ ಎಡವಟ್ಟಾಯಿತು ?
ಹೊರಗುತ್ತಿಗೆ ಆಧಾರದಡಿ ನೇಮಕಾತಿಯನ್ನು ವಿರೋಧಿಸಿ ನೋಡಲ್‌ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಲು ಹತ್ತಿದ ಬಳಿಕ ಅವರ ಸಂಬಳವನ್ನು ತಡೆ ಹಿಡಿಯಲಾಯಿತು. ಕಾನೂನಾತ್ಮಕ ಹೋರಾಟ ನಡೆಸುತ್ತಲೇ ಈ 206 ಮಂದಿ ತಮ್ಮ ಕರ್ತವ್ಯವನ್ನು ಮುಂದುವರಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ ಸಂಬಳ ಇಲ್ಲದೇ ಕೆಲಸ ಮಾಡುವ ಅನಿವಾರ್ಯ ಸ್ಥಿತಿ ಇವರದ್ದಾಗಿದೆ.

ಈ ಮಧ್ಯೆ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಕೊಟ್ರೇಶ್‌ ಅವರು ಸಂಬಳ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತ್ಯ ವಸತಿ ಯೋಜನೆಗಳ ಅನುಷ್ಠಾನ, ಅನುಮೋದನೆ, ಜಿಪಿಎಸ್‌ ಎಂದು ಓಡಾಡುವ ಇವರಿಗೆ ತಮ್ಮ ಬದುಕಿನ ಜಿಪಿಎಸ್‌ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

Advertisement

ಸಮಸ್ಯೆಗೆ ಸ್ಪಂದಿಸಲಿ
ರಾಜ್ಯವನ್ನು ಗುಡಿಸಲು ಮುಕ್ತವಾಗಿಸಲು 2011ರಿಂದ ದುಡಿಯುತ್ತಿದ್ದ ಈ ವರ್ಗದ ಸಮಸ್ಯೆಗೆ ಸರಕಾರ ತತ್‌ಕ್ಷಣ ಸ್ಪಂದಿಸಬೇಕಾಗಿದೆ. ನ್ಯಾಯಯುತ ಹೋರಾಟವನ್ನು ಮಾಡಲು ಮುಂದಾಗಿರುವ ಸಿಬಂದಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ನಿಲ್ಲಿಸುವ ಮೂಲಕ ಇವರ ಬದುಕಿಗೆ ಮತ್ತೆ ಚೈತನ್ಯ ನೀಡುವ ಪ್ರಕ್ರಿಯೆಗೆ ಮುಂದಾಗಬೇಕಾಗಿದೆ.

ದ. ಕ. ಜಿಲ್ಲೆಯಲ್ಲೂ ರಾಜೀವ್‌ ಗಾಂಧಿ ಗ್ರಾಮೀಣ ವಸತಿ  ನಿಗಮದ ನೋಡಲ್‌ ಅಧಿಕಾರಿಗಳಾಗಿ 6 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಜಿ.ಪಂ. ಆಡಳಿತ ವ್ಯಾಪ್ತಿಗೆ ಬರುವುದಿಲ್ಲ. ರಾಜ್ಯದಲ್ಲಿ ಇವರಿಗೆ ನಿರ್ಮಿತಿ ಕೇಂದ್ರದ ಮೂಲಕ ವೇತನ ನೀಡಲಾಗುತ್ತಿತ್ತು. ನಿಗಮ ಹಾಗೂ ನೋಡಲ್‌ ಅಧಿಕಾರಿಗಳ ಮಧ್ಯೆ ಗೊಂದಲ ಉಂಟಾಗಿದೆ. ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 
– ಡಾ| ಎಂ.ಆರ್‌. ರವಿ
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next