Advertisement

40 ಸಾವಿರ ಕುಟುಂಬಗಳಿಗೆ ಸೂರೇ ಸಿಕ್ಕಿಲ್ಲ! : ಸರಕಾರದ ವಿಳಂಬ ಧೋರಣೆಯೇ ಕಾರಣ

10:52 PM Dec 01, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವಿಳಂಬ ಧೋರಣೆಯಿಂದ ಅಂಗವಿಕಲರು, ಎಚ್‌ಐವಿ ಸೋಂಕು ಪೀಡಿತರು, ದೇವದಾಸಿಯರು, ಮಂಗಳಮುಖಿಯರು, ಲೈಂಗಿಕ ಕಾರ್ಯಕರ್ತೆಯರು ಸೇರಿದಂತೆ 14 ವಿಶೇಷ ವರ್ಗಗಳ 40 ಸಾವಿರ ಕುಟುಂಬಗಳಿಗೆ ಸೂರು ಇಲ್ಲದಂತಾಗಿದೆ.

Advertisement

2014-15ನೇ ಸಾಲಿನಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತದಡಿ ಜಾರಿಗೆ ತರಲಾದ ದೇವರಾಜು ಅರಸು ವಸತಿ ಯೋಜನೆಯಡಿ 1,02,972 ಫ‌ಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ 56 ಸಾವಿರ ಮನೆಗಳು ಪೂರ್ಣಗೊಂಡಿವೆ. 24 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿದ್ದು, 12 ಸಾವಿರ ಕುಟುಂಬಕ್ಕೆ ಅನುದಾನ ನೀಡುವುದು ಬಾಕಿ ಇದೆ.

ಸರಕಾರದಿಂದ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯಡಿ ಸ್ವಂತ ಸೂರು ನಿರ್ಮಿಸುವ ಕನಸು ಕಂಡಿದ್ದ ವಿಶೇಷ ವರ್ಗದ 40 ಸಾವಿರ ಕುಟುಂಬಗಳಿಗೆ ನಿರಾಸೆಯಾಗಿದೆ. ತಾಂತ್ರಿಕ ಕಾರಣಗಳಿಂದ 5 ಸಾವಿರ ಫ‌ಲಾನುಭವಿಗಳ ಅರ್ಜಿ ಬ್ಲಾಕ್‌ ಆಗಿವೆ.

ಯಾರಿಗೆ ಈ ಯೋಜನೆ ?:

ರಸ್ತೆ ಬದಿ, ಅಂಗಡಿಗಳ ಜಗುಲಿಯಲ್ಲಿ ಮಲಗುವ ನಿರ್ಗತಿಕರು, ವಿಕಲಚೇತನರು, ಕುಷ್ಠ ರೋಗದಿಂದ ಗುಣಮುಖರಾದವರು, ಎಚ್‌ಐವಿ ಸೋಂಕುಪೀಡಿತರು, ಮಂಗಳಮುಖೀಯರು, ಲೈಂಗಿಕ ಕಾರ್ಯಕರ್ತೆಯರು, ದೇವದಾಸಿಯರು, ವಿಧವೆಯರು, ಜೀತದಿಂದ ಮುಕ್ತರಾದವರು, ಸಫಾಯಿ ಕರ್ಮಚಾರಿಗಳು, ದೌರ್ಜನ್ಯಕ್ಕೊಳಗಾದವರು, ಮತೀಯ ಗಲಭೆ ಹಾಗೂ ಚಳುವಳಿಗಳಿಂದ ಹಾನಿಗೊಳಗಾದವರು, ಅಲೆಮಾರಿ ಜನಾಂಗದವರು, ವಿಶೇಷ ವೃತ್ತಿಪರ ಗುಂಪುಗಳಾದ ಹಮಾಲರು, ನೇಕಾರರು, ಕುಶಲಕರ್ಮಿಗಳು ಸೇರಿದಂತೆ ಒಟ್ಟು 14 ವಿಶೇಷ ವರ್ಗಕ್ಕೆ ಸೇರಿದವರಿಗೆ ದೇವರಾಜು ಅರಸು ಯೋಜನೆಯಡಿ ವಸತಿ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿತ್ತು.

Advertisement

ಆಯ್ಕೆ ಪ್ರಕ್ರಿಯೆ ಹೇಗೆ? :

ಸ್ವಂತ ಮನೆ ಹೊಂದಿರುವ ವಿಶೇಷ ವರ್ಗದ ಫ‌ಲಾನುಭವಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆಯ್ಕೆ ಮಾಡಲಾಗುತ್ತದೆ. ಮನೆ ನಿರ್ಮಿಸಲು ನಾಲ್ಕು ಹಂತಗಳಲ್ಲಿ ಹಂತಹಂತವಾಗಿ ಒಟ್ಟು 1.20 ಲಕ್ಷ ರೂ. ರಾಜ್ಯ ಸರಕಾರದಿಂದ ಫ‌ಲಾನುಭವಿಯ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಆಗಲಿದೆ. ಮನೆ ನಿರ್ಮಾಣಕ್ಕೆ ತಗುಲುವ ಉಳಿದ ಖರ್ಚು ಫ‌ಲಾನುಭವಿಗಳೇ ಭರಿಸಬೇಕಿದೆ.

ಎಲ್ಲ ಸ್ಥಳೀಯ ಸಂಸ್ಥೆಗಳ ಅರ್ಹ ವಸತಿ ರಹಿತರ ಪಟ್ಟಿಯನ್ನು ಕ್ರೋಡೀಕರಿಸಿ ಜಿಲ್ಲಾ ಸಮಿತಿಯಲ್ಲಿ ಅನುಮೋದಿಸಿ ಆರ್‌ಜಿಎಚ್‌ಸಿಎಲ್‌ಗೆ ಪ್ರಸ್ತಾವನೆ ಕಳಿಸಲಾಗುತ್ತದೆ. ಜಿಲ್ಲಾ ಸಮಿತಿಯಿಂದ ಸ್ವೀಕೃತವಾದ ಫ‌ಲಾನುಭವಿಗಳ ಮಾಹಿತಿಯನ್ನು ಸ್ಥಳೀಯ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಉಲ್ಲೇಖೀಸಿದರೆ ಸಾಮಾನ್ಯ ವಸತಿ ಯೋಜನೆಗಳಂತೆ ಇವರಿಗೂ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆದರೆ ಸಾವಿರಾರು ಫ‌ಲಾನುಭವಿಗಳು ಅನುದಾನಕ್ಕಾಗಿ ಕಾಯುವಂತಾಗಿದೆ.

ಮಾಹಿತಿ ಕೊರತೆ:

ರಾಜ್ಯದಲ್ಲಿ ಈ ವಿಶೇಷ ವರ್ಗಕ್ಕೆ ಸೇರಿದ ಲಕ್ಷಾಂತರ ಮಂದಿ ಅರ್ಹತೆ ಹೊಂದಿದ್ದರೂ ಮಾಹಿತಿ ಕೊರತೆಯಿಂದ ಅರ್ಜಿ ಸಲ್ಲಿಸುತ್ತಿಲ್ಲ. ಇನ್ನು ಕೆಲವರಿಗೆ ಆರ್ಥಿಕತೆಯ ಸಮಸ್ಯೆ, ಸ್ವಂತ ನಿವೇಶನದ ಸಮಸ್ಯೆ ಎದುರಾಗಿದೆ. ರಾಜ್ಯ ಸರಕಾರವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಿಶೇಷ ಅಂಚಿನಲ್ಲಿರುವ ಜನಾಂಗದವರಿಗಾಗಿ ಈ ಯೋಜನೆ ಜಾರಿಗೆ ತಂದಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ. 70ರಷ್ಟು ಫ‌ಲಾನುಭವಿಗಳಿದ್ದರೆ ನಗರ ಪ್ರದೇಶದವರ ಸಂಖ್ಯೆ ವಿರಳವಾಗಿದೆ ಎಂದು ಆರ್‌ಜಿಎಚ್‌ಸಿಎಲ್‌ ಪ್ರಧಾನ ವ್ಯವಸ್ಥಾಪಕ ಎಸ್‌.ಎನ್‌. ಪರಶುರಾಮೇಗೌಡ ಹೇಳಿದ್ದಾರೆ.

ದೇವರಾಜು ಅರಸು ವಸತಿ ಯೋಜನೆಯಲ್ಲಿ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಅನುದಾನ ಜಮೆಯಾಗುತ್ತದೆ. ಇದುವರೆಗೆ ವಿಶೇಷ ವರ್ಗದ ಹಲವು ಜನ ಇದರ ಅನುಕೂಲ ಪಡೆದಿದ್ದಾರೆ. ಬಾಕಿ ಇರುವ ಫ‌ಲಾನುಭವಿಗಳಿಗೆ ಅನುದಾನ ನೀಡಲು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.– ಕವಿತಾ ಎಸ್‌. ಮನ್ನಿಕೇರಿ ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕಿ

 

-ಅವಿನಾಶ್‌ ಮೂಡಂಬಿಕಾನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next