Advertisement

ವಸತಿ ನಿರ್ಮಾಣಕ್ಕೆ ಎನ್‌ಒಸಿ ನೀಡಲು ಹಿಂದೇಟು ಸಭೆಯಲ್ಲಿ ಅಸಮಾಧಾನ

03:07 PM Feb 25, 2017 | Team Udayavani |

ಮಡಿಕೇರಿ: ಕೃಷಿ ಭೂಮಿ ಹಾಗೂ ತೋಟದ ಜಮೀನುಗಳಲ್ಲಿ ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಳ್ಳಲು ಫ‌ಲಾನುಭವಿಗಳಿಗೆ ಗ್ರಾ.ಪಂ. ಪಿಡಿಒಗಳು ಎನ್‌ಒಸಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ಜಿ.ಪಂ. ಅಧ್ಯಕ್ಷ
ಬಿ.ಎ. ಹರೀಶ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಜಿ.ಪಂ. ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎನ್‌ಒಸಿಗಾಗಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿ ವರ್ಷವೇ ಕಳೆದರೂ ಪಿಡಿಒಗಳು ಎನ್‌ಒಸಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಭೂಪರಿವರ್ತನೆಗೂ ಅಡೆತಡೆ ಉಂಟು ಮಾಡಲಾಗುತ್ತಿದೆ ಎಂದರು. 

ಇದರಲ್ಲಿ ಪಿಡಿಒಗಳ ತಪ್ಪಿಲ್ಲವೆಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್‌ ಅವರು ಸಮರ್ಥಿಸಿಕೊಂಡಾಗ, ಹಾಗಾದರೆ ನಿಮ್ಮದೇ ತಪ್ಪಿರಬಹು ದೆಂದು ಅಧ್ಯಕ್ಷ ಹರೀಶ್‌ ಆಕ್ಷೇಪ ವ್ಯಕ್ತಪಡಿಸಿದರು.
ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್‌ ಮಾತನಾಡಿ, ಎನ್‌ಒಸಿ ಹಾಗೂ ಆರ್‌ಟಿಸಿ ನೀಡದೆ ವಿಧವೆಯರನ್ನು ಕೂಡ ಸತಾಯಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರು ಮಾತನಾಡಿ, ಹಣ ನೀಡಿದರೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಎನ್‌ಒಸಿ ದೊರೆಯುತ್ತದೆ ಎಂದು ಆರೋಪಿಸಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಆರ್‌ಟಿಸಿ ಬದಲಾಯಿಸಿ ನೀಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿಸುಬ್ರಮಣಿ ಮಾತನಾಡಿ, ದಕ್ಷಿಣ ಕೊಡಗಿನಲ್ಲಿ ಫಾರಂಹೌಸ್‌ಗೆಂದು ಎನ್‌ಒಸಿ ಪಡೆದ ವ್ಯಕ್ತಿಯೊಬ್ಬರು ಇದೀಗ ಕಾಫಿ ಕ್ಯೂರಿಂಗ್‌ ವರ್ಕ್ಸ್ ನಿರ್ಮಿಸಿದ್ದಾರೆ. ಇವರ ಬಳಿ ಹಣವಿದೆ ಎನ್ನುವ ಕಾರಣಕ್ಕಾಗಿ ಗ್ರಾ.ಪಂ. ಯಾವುದೇ ಕ್ರಮ ಜರಗಿಸುತ್ತಿಲ್ಲ ಆರೋಪಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್‌ ಮಾತನಾಡಿ 1995ರ ಭೂ ಕಾಯ್ದೆ ಪ್ರಕಾರ ಪಿಡಿಒಗಳಗೆ ಭೂಪರಿವರ್ತನೆ ಬಗ್ಗೆ ಯಾವುದೇ ಅಧಿಕಾರ ಇರುವುದಿಲ್ಲ. ಕಂದಾಯ ಇಲಾಖೆಯೇ ಇದಕ್ಕೆ ಜವಬ್ದಾರಿಯಾ ಗಿದ್ದು, ತಹಶೀಲ್ದಾರರು ದೃಢೀಕರಣ ಪತ್ರ ನೀಡಬೇಕಷ್ಟೆ ಎಂದರು. ಮಡಿಕೇರಿ ತಾಲೂಕಿನಲ್ಲಿ ಮಾತ್ರ ಈ ರೀತಿಯ ಸಮಸ್ಯೆ ಇದೆ ಎಂದು ಸಮಜಾಯಿಷಿ ನೀಡಿದರು.

Advertisement

ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ ಸೋಮವಾರ ಪೇಟೆ ತಾಲೂಕಿನಲ್ಲೂ ಸಾಕಷ್ಟು ಕಡತಗಳು ವಿಲೇವಾರಿ ಯಾಗದೆ ಬಾಕಿ ಉಳಿದಿವೆ ಎಂದರು. ವಿನಾಕಾರಣ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದ್ದರೆ ಖುದ್ದಾಗಿ ತಮ್ಮನ್ನು ಭೇಟಿಯಾಗಿ ಮಾಹಿತಿ ನೀಡುವಂತೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸಲಹೆ ನೀಡಿದರು. ಎನ್‌ಒಸಿ ನೀಡುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರು.

ಇದಕ್ಕೂ ಮೊದಲು ಅಧ್ಯಕ್ಷ ಬಿ.ಎ. ಹರೀಶ್‌ ಅವರು ಎನ್‌ಒಸಿ ಸಿಗದೆ ಇರುವುದು ಮತ್ತು ಸರಕಾರದ ಸುತ್ತೋಲೆಯನ್ನು ಸಭೆಯ ಗಮನಕ್ಕೆ ತಂದರು. ಮಡಿಕೇರಿ ಮಾತ್ರವಲ್ಲದೆ ಇತರ ಎರಡು ತಾಲೂಕುಗಳಲ್ಲಿಯೂ ಎನ್‌ಒಸಿ ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಸ್ಟೆಲ್‌ಗ‌ಳ ಬಗ್ಗೆ ಆತಂಕ 
ಹಾಸ್ಟೆಲ್‌ಗ‌ಳ ಅವ್ಯವಸ್ಥೆ ಬಗ್ಗೆ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್‌ ಸಭೆಯ ಗಮನ ಸೆಳೆದರು. ಸೋಮವಾರಪೇಟೆಯ ವಿದ್ಯಾರ್ಥಿನಿಯರ ಹಾಸ್ಟೇಲ್‌ನಲ್ಲಿ 86 ವಿದ್ಯಾರ್ಥಿನಿಯರಿಗೆ ಮಹಿಳಾ ಕಾವಲುಗಾರರೊಬ್ಬರಿದ್ದು, ಇವರು ನಿಶ್ಶಕ್ತರಾಗಿದ್ದಾರೆ. ಹಾಸ್ಟೆಲ್‌ಗೆ ಭೇಟಿ ನೀಡಿದ್ದ ಸಂದರ್ಭ ಹಲವು ನ್ಯೂನತೆಗಳು ಕಂಡು ಬಂದಿವೆ. ಆಹಾರ ವಿತರಣೆಯಲ್ಲೂ ಲೋಪದೋಷ ಗಳಿವೆ. ವಿದ್ಯಾರ್ಥಿನಿಯರನ್ನು ಹೇಳ್ಳೋರು ಇಲ್ಲ, ಕೇಳ್ಳೋರು ಇಲ್ಲ ಎನ್ನುವಂತಾಗಿದೆ. ಹಾಸ್ಟೆಲ್‌ನಲ್ಲಿ ಹಾಜರಾತಿ ಬಗ್ಗೆ ಸಂಶಯವಿದೆ. ಮುಂದೇ ನಾದರೂ ಸಂಭವಿಸಿದಲ್ಲಿ ಎಲ್ಲರೂ ಜವಾಬ್ದಾರರಾಗಬೇಕಾಗುತ್ತದೆ. ಪೊಲೀ ಸರು ಬೀಟ್‌ ಪುಸ್ತಕದಲ್ಲಿ ಸಹಿಯೇ ಮಾಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಉಪಾಧ್ಯಕ್ಷರು, ವಿದ್ಯಾರ್ಥಿಗಳ ಹಾಸ್ಟೆಲ್‌ಗ‌ಳಲ್ಲಿ ದುಶ್ಚಟಗಳು ಕಂಡು ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.  

ಹಿಂದುಳಿದ ಮತ್ತು ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಶ್‌ ಅವರು ಮಾತನಾಡಿ, ಜಿಲ್ಲೆಯಲ್ಲಿ ವಾರ್ಡನ್‌ಗಳ ಕೊರತೆ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಧಿಕಾರಿಗೆ ಸೂಚನೆ ನೀಡಿದರು.

ಹಾಸ್ಟೆಲ್‌ಗ‌ಳಲ್ಲಿ ತಂಗದ ವಿದ್ಯಾರ್ಥಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳು ವಂತೆ ಅಧ್ಯಕ್ಷರಾದ ಹರೀಶ್‌ ಆದೇಶಿಸಿದರು. 
ಆಶ್ರಮ ಶಾಲೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಆಧಾರದ ಶಿಕ್ಷಕರಿಗೆ ಕೇವಲ 5,600 ರೂ. ವೇತನ ನೀಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಸುಬ್ರಮಣಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ದಿಡ್ಡಳ್ಳಿಯಲ್ಲಿ ದುಡಿಯದೆ ನಿಶ್ಚಿಂತೆಯಿಂದ ಇರುವವರಿಗೆ ಊಟ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡುತ್ತೀರಿ, ಆದರೆ ಕಷ್ಟಪಟ್ಟು ದುಡಿಯುತ್ತಿರುವ ಶಿಕ್ಷಕರುಗಳಿಗೆ ವೇತನ ನೀಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next