ಹರಿಹರ: ದೇವರಾಜ್ ಅರಸು ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಮನೆ ನಿರ್ಮಾಣಕ್ಕೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಶೀಘ್ರ ಆದೇಶ ಪತ್ರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ನೇಕಾರ ಸಮಿತಿಯಿಂದ ಗುರುವಾರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ನೇಕಾರ ಸಮಿತಿ ಗೌರವಾಧ್ಯಕ್ಷ ಎಚ್.ಕೆ. ಕೊಟ್ರಪ್ಪ ಮಾತನಾಡಿ, ದೇವರಾಜ್ ಅರಸು ವಸತಿ ಯೋಜನೆಯಡಿ ನಗರದ ನೇಕಾರ ಸಮಿತಿ ಹಾಗೂ ಮಹಜೇನಹಳ್ಳಿ ಗ್ರಾಮದೇವತೆ ಹಮಾಲರ ಸಂಘದ ನಿವೇಶನಗಳ ಫಲಾನುಭವಿಗಳನ್ನು ಮನೆ ನಿರ್ಮಿಸಿಕೊಳ್ಳಲು ಜಿಲ್ಲಾ ಸಮಿತಿ ಆಯ್ಕೆ ಮಾಡಿದೆ.
ಸಮಿತಿಯು ಫಲಾನುಭವಿಗಳ ನಿವೇಶನಕ್ಕೆ ತೆರಳಿ ಜೆಪಿಎಸ್ ಛಾಯಾಚಿತ್ರ ಸಹ ತೆಗೆದುಕೊಂಡು ಹೋಗಿದ್ದು, 1 ತಿಂಗಳಾದರೂ ಈವರೆಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಆದೇಶ ಪತ್ರ ಬಂದಿಲ್ಲ. ವಿಷಯವನ್ನು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು, ಆದಷ್ಟು ಬೇಗ ರಾಜೀವ್ ಗಾಂಧಿ ವಸತಿ ನಿಗಮದಿಂದ ಆದೇಶ ಪತ್ರ ಕೊಡಿಸಬೇಕೆಂದು ಪೌರಾಯುಕ್ತರನ್ನು ಒತ್ತಾಯಿಸಿದರು.
ಇದಲ್ಲದೆ ನೇಕಾರ ಹಾಗೂ ಹಮಾಲರ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ನೀರು, ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಆದಷ್ಟು ಬೇಗ ಚಾಲನೆ ನೀಡಬೇಕೆಂದು ಸಹ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಪೌರಾಯುಕ್ತೆ ಎಸ್.ಲಕ್ಷ್ಮೀ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮುಖಂಡರಾದ ಕುಬೇರಪ್ಪ, ನಾಗರಾಜ ಹೊಸಮನಿ, ಕರೀಂಸಾಬ್, ಚಂದ್ರಮ್ಮ ಕೊಟಗಿ, ಲಕ್ಷ್ಮಮ್ಮ ಮಾಂತಾ, ರಾಧಾ ರಮೇಶ್, ಗೋವಿಂದಪ್ಪ, ಮಂಜಣ್ಣ, ರೆಹಮಾನ್ ಸಾಬ್, ಪಾಲಾಕ್ಷಮ್ಮ, ಅಕ್ಬರ್ ಸಾಬ್, ಜಯಮ್ಮ ಅಗಡಿ ಮತ್ತಿತರರಿದ್ದರು.