Advertisement

Lakkundi ಇತಿಹಾಸ, ಪರಂಪರೆ,ಗತವೈಭವವನ್ನು ದೇಶಕ್ಕೆ ಪರಿಚಯಿಸಲು ಶೀಘ್ರ ಉತ್ಖನನ

09:22 PM Sep 08, 2024 | Team Udayavani |

ಗದಗ: ಐತಿಹಾಸಿಕ ಲಕ್ಕುಂಡಿಯ ಮಣ್ಣಿನಲ್ಲಿ ಹುದುಗಿರುವ ಕಲ್ಯಾಣ ಚಾಲುಕ್ಯರ ಶಿಲ್ಪಕಲೆಗಳನ್ನು ಪುನರುತ್ಥಾನಗೊಳಿಸಬೇಕಿದ್ದು, ಜನತೆಯ ತ್ಯಾಗ ಅವಶ್ಯವಿದ್ದು ಉತ್ಖನನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ತಾಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 13 ಆರಕ್ಷಿತ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಲಕ್ಕುಂಡಿ ಗ್ರಾಮದಲ್ಲಿ 101 ದೇವಾಲಯಗಳು, 101 ಬಾವಿಗಳಿದ್ದವು ಎಂಬ ಮಾತನ್ನು ಕೇಳುತ್ತಿದ್ದೇವೆ. ಆದರೆ, ನಮಗೆ ನೋಡಲು ಸಾಧ್ಯವಾಗಿರುವುದು ಕೇವಲ 30 ದೇವಾಲಯಗಳು, 30 ಬಾವಿಗಳಷ್ಟೇ. ಆದ್ದರಿಂದ ಮಣ್ಣಿನಲ್ಲಿ ಹುದುಗಿರುವ 70ಕ್ಕೂ ಹೆಚ್ಚು ದೇವಾಲಯ, ಬಾವಿಗಳನ್ನು ಉತ್ಖನನ ಮಾಡಿದಾಗ ಮಾತ್ರ ಲಕ್ಕುಂಡಿಯ ಹಿರಿಮೆ, ಶ್ರೇಷ್ಠತೆ, ಗತವೈಭವ ಸಂಪೂರ್ಣವಾಗಿ ನೋಡಲು ಸಿಗುತ್ತದೆ. ರಾಷ್ಟçಕ್ಕೊಂದು ದೊಡ್ಡ ಆಸ್ತಿಕೊಟ್ಟಂತಾಗುತ್ತದೆ ಎಂದು ಹೇಳಿದರು.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅದ್ಬುತ ಶಿಲ್ಪಕಲೆಗಳನ್ನು ನಾವಿಂದು ಅಗೌರವದಿಂದ ನೋಡಲಾಗುತ್ತಿದೆ. ಇಂದಿನ ದಿನದಲ್ಲೂ ಲಕ್ಕುಂಡಿ ಭಾಗದಲ್ಲಿನ ತಿಪ್ಪೆಯನ್ನು ಅಗೆದರೆ 20ಕ್ಕೂ ಹೆಚ್ಚು ಶಿಲ್ಪಕಲೆಗಳು ಸಿಗುತ್ತವೆ. ಮನೆಗಳಳಲ್ಲಿನ ಕಟ್ಟೆಗಳನ್ನು ಅಗೆದರೂ ಮ್ಯೂಸಿಯಂ ಹಿಡಿಸಲಾಗದಷ್ಟು ಪಾರಂಪರಿಕ ಶಿಲ್ಪಕಲೆಗಳು ದೊರೆಯುತ್ತವೆ. ಆದ್ದರಿಂದ ಗ್ರಾಮಸ್ಥರು, ಯುವಕರು ಶಿಲ್ಪಕಲೆಗಳ ರಕ್ಷಣೆಗೆ ಮುಂದಾಗಬೇಕು, ಕಟ್ಟೆಯ ಕೆಳಗೆ ಅವಿತಿರುವ ಕಲೆ, ಶಿಲ್ಪಕಲೆಗಳು ಅದ್ಬುತ ಕಲಾಕೃತಿಗಳನ್ನು ಉತ್ಖನನವಾಗಬೇಕಾದರೆ ಗ್ರಾಮಸ್ಥರ ಪ್ರೀತಿ, ಸ್ನೇಹ, ವಿಶ್ವಾಸ, ತ್ಯಾಗ ಬೇಕಾಗುತ್ತದೆ ಎಂದು ಹೇಳಿದರು.

Advertisement

ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಲಕ್ಕುಂಡಿಯನ್ನು ಚಾಲುಕ್ಯರು ಠಂಕಸಾಲೆಯನ್ನಗಿಸಿಕೊಂಡಿದ್ದರು. ಆ ಕಾಲದ ಇತಿಹಾಸ, ಸಂಸ್ಕೃತಿ, ವೈಭವದ ಮೆರಗು, ಸಂಭ್ರಮ ಮರುಕಳಿಸುವಂತೆ ಆಂದೋಲನ ಪ್ರಾರಂಭಿಸಿ ಅದಕ್ಕೆ ಎಲ್ಲರು ಪ್ರಾಮಾಣಿಕ ಪ್ರಯತ್ನ ಮಾಡುವ ಕೆಲಸವಾಗಬೇಕು ಎಂದರು.

”ಹುಬ್ಬಳ್ಳಿ ಹುಡಿ ಹಾರಬೇಕು, ಗದಗು ಗದ್ದುಗೆಯಾಗಬೇಕು, ಲಕ್ಕುಂಡಿ ಲೆಕ್ಕಾಗಬೇಕು ಈ ಮಾತು ನಿಜವಾಗಬೇಕಾದರೆ ಲಕ್ಕುಂಡಿಯಲ್ಲಿ ಹುದುಗಿರುವ ಶಿಲ್ಪಕಲೆಗಳು ಕಾಣುವಂತಾಗಬೇಕು. ಈ ಹಿನ್ನೆಲೆಯಲ್ಲಿ ಉತ್ಖನನ ಆರಂಭಿಸಿಲು ಈಗಾಗಲೇ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಸೂಚನೆ ನೀಡಲಾಗಿದೆ. ಲಕ್ಕುಂಡಿಯಲ್ಲಿ ಎಲ್ಲೆಲ್ಲಿ ಉತ್ಖನನ ಮಾಡಬೇಕು, ಒಂದು ವರ್ಷದಲ್ಲಿ ಎಷ್ಟು ಉತ್ಖನನ ಮಾಡಲು ಸಾಧ್ಯ, ಅದಕ್ಕೆ ಬೇಕಾಗುವ ಹಣವನ್ನು ಮುಂದಿನ ಬಜೆಟ್‌ನಲ್ಲಿ ತೆಗೆದಿಡುವ ಹಾಗೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇವೆ” ಎಂದು ಎಚ್.ಕೆ. ಪಾಟೀಲ ಹೇಳಿದರು.

ಶಾಸಕ ಸಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next