Advertisement

ಅರ್ಜಿ ಹಿಂಪಡೆದ ಗೃಹ ನಿರ್ಮಾಣ ಸಂಘ

01:08 AM Jul 18, 2019 | Lakshmi GovindaRaj |

ಬೆಂಗಳೂರು: ರಾಮಚಂದ್ರಾಪುರ ಮಠದ ಗಿರಿನಗರ ಶಾಖಾ ಮಠದ ಜಾಗವೂ ಸೇರಿಕೊಂಡಂತೆ ಮಠಕ್ಕೆ ಸೇರಿದ “ಪುನರ್ವಸು ಭವನ’ ನಿರ್ಮಾಣ ಮಾಡುತ್ತಿರುವ ನಿವೇಶನದ ವಿವಾದಕ್ಕೆ ಸಂಬಂಧಿಸಿದ ಅರ್ಜಿಯಲ್ಲಿ ತಮ್ಮನ್ನೂ ಪ್ರತಿವಾದಿಯನ್ನಾಗಿ ಮಾಡುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘ ವಾಪಸ್‌ ಪಡೆದಿದೆ.

Advertisement

ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠ ಸಲ್ಲಿಸಿರುವ ತಕರಾರು ಅರ್ಜಿಯಲ್ಲಿ ತಮ್ಮ ವಾದವನ್ನೂ ಆಲಿಸುವಂತೆ ಕೋರಿ ಗೃಹ ನಿರ್ಮಾಣ ಸಂಘ ಸಲ್ಲಿಸಿದ್ದ ಮೇಲ್ಮನವಿ ನ್ಯಾ. ಎಲ್‌. ನಾರಾಯಣ ಸ್ವಾಮಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತು.

ಈ ವೇಳೆ ಮೇಲ್ಮನವಿದಾರರ ಪರ ವಕೀಲರು, ಅರ್ಜಿ ಹಿಂಪಡೆಯುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು.

“ಪುನರ್ವಸು ಭವನ’ ನಿರ್ಮಾಣಕ್ಕಾಗಿ ನಕ್ಷೆ ಮಂಜೂರು ಮಾಡಲು ಹಾಗೂ ಖಾತೆ ನೋಂದಣಿ ಮಾಡಿಕೊಡಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಬಿಬಿಎಂಪಿ ಆಯುಕ್ತರ ಕ್ರಮ ಪ್ರಶ್ನಿಸಿ ರಾಮಚಂದ್ರಾಪುರ ಮಠ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯಲ್ಲಿ ತಮ್ಮನ್ನೂ ಪ್ರತಿವಾದಿಯನ್ನಾಗಿಸಲು ಕೋರಿ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ಮಧ್ಯಂತರ ಅರ್ಜಿಯನ್ನು 2018ರ ಸೆ.25ರಂದು ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಹಾಕರ ಸಂಘ ಮೇಲ್ಮನವಿ ಸಲ್ಲಿಸಿತ್ತು.

Advertisement

ಪ್ರಕರಣವೇನು?: ಗಿರಿನಗರದಲ್ಲಿ ನಿವೇಶನವೊಂದನ್ನು ಖರೀದಿಸಿದ್ದ ರಾಮಚಂದ್ರಪುರ ಮಠ, ಅಲ್ಲಿ ಕಟ್ಟಡ ನಿರ್ಮಾಣ ಮಾಡಲು ಬಿಬಿಎಂಪಿಯಿಂದ 2010ರಲ್ಲಿ ನಕ್ಷೆ ಮಂಜೂರಾತಿ ಪಡೆದುಕೊಂಡಿತ್ತು. ಆದರೆ, ಮಠ ಕಟ್ಟಡ ನಿರ್ಮಾಣ ಮಾಡುತ್ತಿರುವ ಜಾಗವು ಸಿಎ ನಿವೇಶನವಾಗಿದ್ದು, ಉದ್ಯಾನಕ್ಕೆ ಮೀಸಲಿರಿಸಿದ್ದ ಸ್ಥಳದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿ, ಮಠಕ್ಕೆ ಮಂಜೂರು ಮಾಡಿದ್ದ ನಕ್ಷೆಯನ್ನು ಬಿಬಿಎಂಪಿ ರದ್ದುಪಡಿಸಿತ್ತು.

ಇದನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ ತೀರ್ಮಾನಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿತ್ತು. ಹೈಕೋರ್ಟ್‌ ನಿರ್ದೇಶನದಂತೆ ನಕ್ಷೆ ಮಂಜೂರಾತಿ ಮತ್ತು ಖಾತೆ ನೋಂದಣಿಗೆ ಕೋರಿ ರಾಮಚಂದ್ರಾಪುರ ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ಆದರೆ, ಅದನ್ನು ಬಿಬಿಎಂಪಿ ಆಯುಕ್ತರು ವಜಾಗೊಳಿಸಿದ್ದರು.

ಅದನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಿದ್ದ ಏಕಸದಸ್ಯ ಪೀಠ, ಕಟ್ಟಡ ನಿರ್ಮಾಣವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುವುದಾಗಿ ಸ್ಪಷ್ಟಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next