ತಿರುವನಂತಪುರ: ವರದಕ್ಷಿಣ ಪಿಡುಗಿಗೆ ಕೊಲ್ಲಂ ಜಿಲ್ಲೆಯಲ್ಲಿ ಗೃಹಿಣಿಯೊಬ್ಬರು ದಾರುಣ ಸಾವನ್ನಪ್ಪಿದ್ದಾರೆ. ತಿಂಗಳುಗಟ್ಟಲೆ ಉಪವಾಸ ಹಾಗೂ ದೈಹಿಕ ಹಿಂಸೆಯನ್ನು ಅನುಭವಿಸಿರುವ ಅವರು, ಸಾಯುವಾಗ ಕೇವಲ 20 ಕೆ.ಜಿ.ಗೆ ಇಳಿದಿದ್ದು ಅವರು ಅನುಭವಿಸಿರುವ ಹಿಂಸೆಗೆ ಸಾಕ್ಷಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಗೃಹಿಣಿಯ ಹೆಸರು ತುಷಾರ (27). ಆರು ವರ್ಷಗಳ ಹಿಂದೆ ಕೊಲ್ಲಂ ಜಿಲ್ಲೆಯ ಒಯೂರ್‌ನ ಚಂಟು ಲಾಲ್ ಎಂಬ ನಿವಾಸಿಯೊಂದಿಗೆ ಅವರ ವಿವಾಹವಾಗಿತ್ತು. ವರದಕ್ಷಿಣೆಯ ಹುಚ್ಚು ಅಂಟಿಸಿಕೊಂಡಿದ್ದ ಚಂಟು ಲಾಲ್ ಹಾಗೂ ಆತನ ಅಪ್ಪ-ಅಮ್ಮ ಕೆಲವೇ ದಿನಗಳಲ್ಲಿ ತುಷಾರಾ ಅವರಿಗೆ ಕಿರುಕುಳ ಕೊಡಲಾರಂಭಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ತುಷಾರಾ ಹೊರಗೆ ಕಾಣಿಸಿಕೊಳ್ಳುವುದೇ ಅಪರೂಪವಾಗಿದ್ದು, ಕೆಲ ತಿಂಗಳಿಂದೀಚೆಗೆ ಆಕೆ ಮನೆಯಿಂದ ಹೊರಗೆ ಬಂದಿರಲಿಲ್ಲ. ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿ, ತಿಂಗಳುಗಟ್ಟಲೆ ಕೇವಲ ಸಕ್ಕರೆ ನೀರು ಹಾಗೂ ನೆನೆಸಿಟ್ಟ ಅಕ್ಕಿಯನ್ನು ನೀಡುತ್ತಿದ್ದರು ಎಂದು ತನಿಖೆಯ ವೇಳೆ ಬಹಿರಂಗವಾಗಿದೆ.
ತೀವ್ರ ಅಸ್ವಸ್ಥರಾಗಿದ್ದ ತುಷಾರಾರನ್ನು ಮಾ. 21ರಂದು ಕೊಲ್ಲಂ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆಸ್ಪತ್ರೆಗೆ ಸಾಗುವ ಮಾರ್ಗದಲ್ಲೇ ತುಷರಾ ಕೊನೆಯುಸಿರೆಳೆದಿದ್ದಾರೆ. ಆಕೆಯ ದೇಹ ಸ್ಥಿತಿಯನ್ನು ಕಂಡು ಅನುಮಾನಗೊಂಡ ವೈದ್ಯರು ಹೆಚ್ಚಿನ ತಪಾಸಣೆಗೆ ದೇಹವನ್ನು ತಿರುವಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದಾಗ ಆಕೆ ಪಟ್ಟಿದ್ದ ಕಿರುಕುಳ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ವೇಳೆ, ಚಂಟು ಲಾಲ್ ಹಾಗೂ ಆತನ ಮನೆಯವರು ಮಂತ್ರವಾದಿ ವಿದ್ಯೆಗಳ ಪ್ರಯೋಗಗಳನ್ನು ಮಾಡುತ್ತಿದ್ದುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.