Advertisement

ಮನೆಗೆ ಹೊಸಿಲೇ ಭೂಷಣ

05:05 PM Feb 26, 2018 | Harsha Rao |

ಕಟ್ಟಡ ವಿನ್ಯಾಸದಲ್ಲಿ ಪಟ್ಟಿಗಳಿಗೆ  ವಿಶೇಷ ಸ್ಥಾನವಿದೆ.  ಇದು ಒಂದು ರೀತಿ  ಲಕ್ಷ್ಮಣ ರೇಖೆಯಂತಿದ್ದರೂ ಅನೇಕ ಬಾರಿ ಅಲಂಕಾರಿಕವಾಗಿಯೂ ಬಳಕೆಗೆ ಬರುತ್ತದೆ. ಒಟ್ಟಾರೆ, ಪಟ್ಟಿ ಇಲ್ಲದೆ ಮನೆಯೇ ಇಲ್ಲ.  

Advertisement

ಮನೆ ಕಟ್ಟಿಸುವಾಗ ಬಹಳ ಎಚ್ಚರಿಕೆ ಬೇಕು. ಕರಣೆ ಹಿಡಿದು ನಿಲ್ಲುವ ಮೊದಲು ಗುತ್ತಿಗೆದಾರರು ಬೆಣ್ಣೆಯಂತೆ ಮಾತನಾಡುತ್ತಾರೆ. ಹೇಳಿದ್ದಕ್ಕೆಲ್ಲ ತಲೆ ಆಡಿಸುತ್ತಾರೆ.

ಮುಂಬಾಗಿಲಿಗೆ ಸಾಮಾನ್ಯವಾಗಿ ಹಾಕುವ ಹೊಸ್ತಿಲು ಒಂದು ರೀತಿ ಲಕ್ಷ್ಮಣ ರೇಖೆಯೇ.  ಹೊರಗಿನ ಅಂತ್ಯವಾಗಿ ಮನೆಯ
ಸುರಕ್ಷಿತ ವಾತಾವರಣದ ಶುರುವನ್ನು ಬಿಂಬಿಸುವ ಕಾರಣ ಅದು ನಮ್ಮೊಂದಿಗೆ ಭಾವುಕ ಸಂಬಂಧವನ್ನು ಹೊಂದಿದೆ. ಸಣ್ಣ ಪುಟ್ಟ ಕೀಟಗಳು ಹೊರಗಿನಿಂದ ನೆಲದಲ್ಲಿ ಸಾಗುತ್ತ ಬರುವುದನ್ನು ತಡೆಯುವುದು ಇದರ ಮುಖ್ಯ ಕಾರಣವಾದರೂ ಮಳೆಯ ಎರಚಲು ನೀರು ಒಳಗೆ ಬರುವುದನ್ನೂ ಹೊಸ್ತಿಲು ತಡೆಯುತ್ತದೆ .

ಸುರಕ್ಷತೆಯೂ ಇದರಲ್ಲಿ ಅಡಗಿದೆ. ಬಾಗಿಲ ಚೌಕಟ್ಟಿನ ಕೆಳಭಾಗದ ಈ ಪಟ್ಟಿ  ಕಳ್ಳಕಾಕರು ಸುಲಭದಲ್ಲಿ “ಜೆಮ್ಮಿ’ ಸರಳು ಬಳಸಿ ಕದ ಮುರಿಯದಂತೆಯೂ ತಡೆಯಲು ಸಹಕಾರಿ.

ಹೊಸ್ತಿಲು ಸಾಮಾನ್ಯವಾಗಿ ಮೂರು ಇಂಚು ಅಗಲ ಹಾಗೂ ನಾಲ್ಕು ಇಂಚು ದಪ್ಪ ಇರುತ್ತದೆ.  ನಿಮಗೇನಾದರೂ ವಿಶೇಷ ವಿನ್ಯಾಸ ಮಾಡಿಸ ಬೇಕೆಂದಿದ್ದರೆ, ಅಗಲವಾಗಿ ಮಾಡಿಸಿಕೊಳ್ಳಬಹುದು.  ಮನೆಯ ಹೊಸ್ತಿಲು ಅನೇಕ ಶುಭಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುವ ಕಾರಣ ಅದು ಎದ್ದು ಕಾಣಲಿ ಎಂಬ ಕಾರಣಕ್ಕೆ ತೀರ ಎತ್ತರವಾಗಿಯೂ ಇಡಬಾರದು ಎನ್ನುವುದು ಗೊತ್ತಿರಲಿ.  ಆರು ಇಂಚಿಗಿಂತ ಅಗಲ ಹಾಗೂ ಎತ್ತರ ಇದ್ದರೆ ದಾಟುವುದು ಕಷ್ಟವಾಗಿ ಪದೇಪದೇ ಕಾಲಿಗೆ ತಗುಲಿ ಮುಗ್ಗರಿಸುವ ಸಾಧ್ಯತೆಯಿರುತ್ತದೆ.

Advertisement

ಹೊಸ್ತಿಲು ಎತ್ತರದ ಬಗ್ಗೆ ಎಚ್ಚರವಿರಲಿ
ಸಾಮಾನ್ಯವಾಗಿ ಮನೆಯ ಮುಂಬಾಗಿಲಿನ ಚೌಕಟ್ಟನ್ನು ನೆಲಹಾಸು ಹಾಕುವ ಮೊದಲು ಕೂರಿಸುವ ಕಾರಣ ಕೆಲವೊಮ್ಮೆ ಮಟ್ಟದಲ್ಲಿ ಎಡವಟ್ಟಾದರೆ ಮುಚ್ಚಿಹೋಗುವ ಸಾಧ್ಯತೆಯಿರುತ್ತದೆ.  ಹಾಗಾಗಿ ಟೈಲ್ಸ್‌ ಹಾಕುವ ಮೊದಲು ಇಡೀ ಮನೆಯ ಫ್ಲೋರ್‌ಮಟ್ಟವನ್ನು ನಿಗಧಿ ಮಾಡಿ, ಹೊಸ್ತಿಲುಗಳು ನೆಲಹಾಸಿನಲ್ಲಿ ಮುಚ್ಚಿಹೋಗುವುದಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ನಂತರವೇ ಮುಂದುವರಿಯುವುದು ಉತ್ತಮ.

ಮನೆಯ ಲಿಂಟಲ್‌ ಮಟ್ಟ ಸಾಮಾನ್ಯವಾಗಿ ಎಳು ಅಡಿ ಎಂದಿದ್ದರೂ, ಒಂದೆರಡು ಇಂಚು, ಅದರಲ್ಲೂ ಮುಂಬಾಗಿಲಿನ ಲಿಂಟಲ್‌ ಮಟ್ಟವನ್ನು ಸ್ವಲ್ಪ ಎತ್ತರ ಇಟ್ಟುಕೊಳ್ಳುವುದು ಒಳಿತು. ಫ್ಲೋರ್‌ನಲ್ಲಿ ಏನಾದರೂ ಏರುಪೇರಿದ್ದರೆ,  ಫ್ರೆàಮ್‌ ಅನ್ನು ಮೇಲೆತ್ತಿ, ಹೊಸ್ತಿಲು ಕಾಣುವಂತೆ ಹೊಂದಿಸಿಕೊಂಡು ಹೋಗಲು ಸುಲಭವಾಗುತ್ತದೆ.

ಟಾಯ್ಲೆಟ್‌ ಪಟ್ಟಿ
ಸ್ನಾನ ಹಾಗೂ ಶೌಚಗೃಹದ ನೀರು ಹೊರಬರದಂತೆ ತಡೆಯಲು ಪಟ್ಟಿ ಕೊಡಬೇಕಾಗುತ್ತದೆ.  ನೆಲಹಾಸಿನ ಮಟ್ಟಗಳನ್ನು ಮೊದಲೇ ಸೂಕ್ತರೀತಿಯಲ್ಲಿ ನಿರ್ಧರಿಸಿದ್ದರೆ, ಒಂದು ಇಂಚು ಅಥವಾ ಕಡೇಪಕ್ಷ ಅರ್ಧ ಇಂಚಿನಷ್ಟಾದರೂ ಕೆಳಗೆ ಬರುವಂತೆ ಮಾಡಿದರೆ, ನಮ್ಮ ಮನೆಯ ಟಾಯ್ಲೆಟ್‌ ನೀರು ಸ್ನಾನ ಮಾಡಿದಾಗ/ ನೀರು ಚೆಲ್ಲಿದಾಗ ಹೊರಗೆ ಹೋಗದಂತೆ ತಡೆಯುತ್ತದೆ.  

ಕೆಲವೊಮ್ಮೆ ಟಾಯ್ಲೆಟ್‌ನ ಫ್ಲೋರ್‌ ಮಟ್ಟ ಮನೆಯ ನೆಲಹಾಸಿನ ಮಟ್ಟಕ್ಕಿಂತ ಮೇಲಿದ್ದರೆ, ಆಗ ಅನಿವಾರ್ಯವಾಗಿ ಒಂದು ಪಟ್ಟಿಯನ್ನು ಕಟ್ಟಬೇಕಾಗುತ್ತದೆ.  ಇದನ್ನು ಗ್ರಾನೈಟ್‌, ಮಾರ್ಬಲ್‌ಗ‌ಳಿಂದಲೇ ಮಾಡಬಹುದು. ಇದರ ಅಗಲ,  ಬಾಗಿಲ ಚೌಕಟ್ಟಿನಷ್ಟಿದ್ದು, ಎತ್ತರ ಮುಕ್ಕಾಲು ಇಂಚಿನಿಂದ ಒಂದು ಇಂಚಿದ್ದರೆ ಸಾಕಾಗುತ್ತದೆ.

ಪ್ರೊಜೆಕ್ಷನ್‌ ಕೆಳಗಿನ ಪಟ್ಟಿ
ಸೂರು ಗೋಡೆಯಿಂದ ಹೊರಗೆ ಚಾಚಿದ್ದರೆ ಭಯವಿಲ್ಲ. ಅದಕ್ಕೆ ಹಾಗೂ ಬಾಲ್ಕನಿ ಸಜಾjಗಳಿಗೆ ಮಳೆಯ ನೀರು ಕೆಳಗೆ ಹರಿದು ಗೋಡೆಯತ್ತ ಬಂದು ಕಲೆಗಳು ಬೀಳಬಾರದು ಎಂಬಕಾರಣಕ್ಕೆ,  ಪಟ್ಟಿಗಳನ್ನು ಕಟ್ಟಲಾಗುತ್ತದೆ.

ಇದು ಸಾಮಾನ್ಯವಾಗಿ ಒಂದರಿಂದ ಎರಡಿಂಚು ಅಗಲವಿದ್ದು, ಎಲ್ಲೆಲ್ಲಿ ಮಳೆಯ ನೀರು ಕೆಳಗಿಳಿದು, ಗೋಡೆಯತ್ತ ಬರುವ ಸಾಧ್ಯತೆ ಇರುವುದೋ ಅಲ್ಲೆಲ್ಲ ಪಟ್ಟಿ ಕಟ್ಟಬೇಕಾಗುತ್ತದೆ.  

ಮಳೆ ಬರುವವರೆಗೂ ಅಡ್ಡಗೋಡೆಗಳ ಮೇಲುಭಾಗ ಧೂಳು ಕೂರುವ ತಾಣವಾಗಿದ್ದು, ನೀರು ಬಿದ್ದಕೂಡಲೆ ಕೆಳಗೆ ಸಾಗುವಾಗ ಮುಖ್ಯವಾಗಿ ಮೇಲು ಮುಖ ಹಾಗೂ ಎದುರುಮುಖ ಸೇರುವ ಮೂಲೆಗಳಲ್ಲಿ  ಕಲೆ ಬೀಳುವ ಕಾರಣ ಪಟ್ಟಿ ಕಟ್ಟುವುದು ಒಳ್ಳೆಯದು. ಇದು ಸಾಮಾನ್ಯವಾಗಿ ಒಂದರಿಂದ ಎರಡಿಂಚು ಅಗಲವಿರುತ್ತದೆ ಹಾಗೂ ಅರ್ಧದಿಂದ ಒಂದಿಂಚು ದಪ್ಪವಿರುತ್ತದೆ.

ಈ ಪಟ್ಟಿಯನ್ನು ಗೋಡೆಯ ಎರಡೂ ಕಡೆಯೂ ಕಟ್ಟಬಹುದು. ಯಾವುದೇ ಗೋಡೆಯ ಬಣ್ಣ ಮಾಸುವುದಕ್ಕೆ ಮುಖ್ಯಕಾರಣ ನೀರು ಹರಿದುಹೋಗುವುದು. ಹಾಗಾಗಿ ಪಟ್ಟಿಗಳನು °ಕಟ್ಟುವಾಗಲೂ ಸಹ ಎಚ್ಚರವಿರಬೇಕು.  ನೀರು ಪಟ್ಟಿಯನ್ನು ದಾಟಿ, ಗೋಡೆಯ ಮೇಲೆ ಹರಿಯದೆ, ನೆಲಕ್ಕೆ ತೊಟ್ಟಿಕ್ಕುವಂತೆ ಈ ಪಟ್ಟಿಗಳನ್ನು ಸ್ವಲ್ಪ ಕೆಳಗೆ ಬಾಗಿದಂತೆ  ಫಿನಿಶ್‌ ಮಾಡಿದರೆ ಉತ್ತಮ.

ಈ ರೀತಿಯ ಪಟ್ಟಿಗಳಿಗೆ ಗೋಡೆಯ ಬಣ್ಣಕ್ಕಿಂತ ಸºಲ್ಪ ಗಾಢವಾದ ಬಣ್ಣವನ್ನು ಹಾಕುವುದು ಉತ್ತಮ. ಈ ಅಂಚುಗಳು ಗಾಳಿ, ಮಳೆಗೆ ಅತಿ ಹೆಚ್ಚು ತೆರೆದುಕೊಳ್ಳುವಕಾರಣ ಪಟ್ಟಿಗೆ ಬಳಿಯುವ ತೆಳು ಬಣ್ಣಗಳು ಬೇಗ ಮಾಸುತ್ತದೆ.

ಗೋಡೆ ಸೂರು ಸೇರುವ ಕಡೆ ಪಟ್ಟಿ
ರೂಫ್ ಹಾಗೂ ಗೋಡೆ ಸೇರುವ ಕಡೆ ಪಟ್ಟಿ ಕಟ್ಟುವ ಹಳೆ ಸಂಪ್ರದಾಯ ಈಗಲೂ ಅಲಂಕಾರಿಕವಾಗಿ ಮುಂದುವರಿದಿದೆ. ಇದು ಸರಳವಾಗಿ ಒಂದೆರಡು ಇಂಚು ಅಗಲ ಹಾಗೂ ಒಂದರ್ಧ ಇಂಚು ದಪ್ಪವಿದ್ದರೆ ಸೂರು ಹಾಗೂ ಗೋಡೆಗಳ ಕೂಡುವಿಕೆಯನ್ನು ಡಿಫೈನ್‌ ಮಾಡಿ ಮನೆಯ ಒಳಾಂಗಣ ಎತ್ತರವಾಗಿರುಂತೆ ಕಾಣಲು ಉಪಯೋಗಿಸಲಾಗುತ್ತದೆ.

ಇದನ್ನೇ ಸ್ವಲ್ಪ ಸುಂದರವಾಗಿ, ಅರ್ಧ ರೌಂಡ್‌ ಅಥವಾ ಮೆಟ್ಟಿಲುಮೆಟ್ಟಿಲಾಗಿ ಮಾಡಿದರೆ ಅದೇ “ಕಾನೀìಸ್‌’ ಆಗಿ ರೂಪುಗೊಳ್ಳುತ್ತದೆ. ಜೇಡರ ಹಾಗೂ ಇತರೆ ಕೀಟಗಳು ಸಾಮಾನ್ಯವಾಗಿ ಮೂಲೆಗಳನ್ನು ಬಯಸುವ ಕಾರಣ, ಮೂಲೆಗಳನ್ನು ಗುಂಡಗೆ ತಿರುಗಿಸಿದರೆ ಅವಕ್ಕೆ ಗೂಡುಕಟ್ಟಲೂ ಸಹ ಸುಲಭವಾಗುವುದಿಲ್ಲ. ಈ ಕಾನೀìಸ್‌ಗಳಿಗೆ ಗೋಡೆಗಿಂತ ಗಾಢವಾದ ಬಣ್ಣ ಬಳಿದರೆ ಒಳ್ಳೆಯ ಕಾಂಟ್ರಾಸ್ಟ್‌ ಕೂಡ ಸಿಗುತ್ತದೆ. ಗೋಡೆಯ ಬಣ್ಣ ಈ ಪಟ್ಟಿಯಿಂದಾಗಿ ಮತ್ತೂ ಸುಂದರವಾಗಿ ಕಾಣುತ್ತದೆ.

ಅನೇಕ ಬಾರಿ ರೂಫ್ ಹಾಕುವಾಗ ಸೆಂಟ್ರಿಂಗ್‌ನಲ್ಲಿ ಏರುಪೇರಾಗಿ ಸೀಲಿಂಗ್‌ ಫಿನಿಶ್‌ ಸರಿಯಾಗಿ ಆಗದೆ ಇರಬಹುದು. ಆಗಲೂ ಕೂಡ ಈ ಅಲಂಕಾರಿಕ ಕಾನೀìಸ್‌ಗಳು ಲೋಪಗಳನ್ನು ಮುಚ್ಚಿ ಹಾಕಲು ಸಹಾಯಕಾರಿಯಾಗುತ್ತದೆ. ಈ ಪಟ್ಟಿಗಳ ಗಾತ್ರ ಇಡಿ ಮನೆಗೆ ಹೋಲಿಸಿದೆ ಸಣ್ಣದಿದ್ದರೂ “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬಂತೆ ಇವು ಮನೆಯ ಸೌಂದರ್ಯ, ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಬಲ್ಲದು.

ಮಾಹಿತಿಗೆ: 9844132826

– ಆರ್ಕಿಟೆಕ್ಟ್  ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next