ಶ್ರೀರಂಗಪಟ್ಟಣ: ಪಟ್ಟಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾ.ಬಾಬು ಜಗಜೀವನರಾಂ ಭವನ ಕಾಮಗಾರಿ ವಿಳಂಬಕ್ಕೆ ಆಕ್ರೋಷ ವ್ಯಕ್ತಪಡಿಸಿ ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಮಿನಿ ವಿಧಾನಸೌಧದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಭವನ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಸಂಬಂಧಿಸಿದವರು ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಯಾರನ್ನೋ ನೇಮಿಸಿ ಮಾದಿಗ ಜನಾಂಗಕ್ಕೆ ಸರ್ಕಾರ ಅನ್ಯಾಯ ಮಾಡಿದೆ. ಮಾದಿಗ ಜನಾಂಗಕ್ಕೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಮಾಡಬೇಕು. ವಸತಿ ರಹಿತರಿಗೆ ನಿವೇಶನ ನಿಡಿ ಮನೆ ನಿರ್ಮಿಸಿಕೊಳ್ಳಲು ನೆರವು ನೀಡಬೇಕು. ಮಾದಿಗರಿಗೆ ಜಾತಿ ದೃಢೀಕರಣ ಪತ್ರ ನೀಡುವಾಗ ಎಲ್ಲ ಉಪ ಜಾತಿಗಳಿಗೆ ಮಾದಿಗ ಎಂದು ನಮೂದಿಸಬೇಕು. ಗಂಗಾ ಕಲ್ಯಾಣ, ಐರಾವತ ಇತರ ಯೋಜನೆಗಳಿಗೆ ಮಾದಿಗರನ್ನು ಪ್ರ್ರತ್ಯೇಕವಾಗಿ ಗುರುತಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಒಕ್ಕೂಟದ ಅಧ್ಯಕ್ಷ ಆಲಗೂಡು ಸಿದ್ದಲಿಂಗಯ್ಯ, ನೆಲಮನೆ ನಿಂಗರಾಜು, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಕುಮಾರ್, ಕಾರ್ಯದರ್ಶಿ ಕೆಂಪಣ್ಣ, ಗೌರವಾಧ್ಯಕ್ಷ ಸಿದ್ದಯ್ಯ, ನಾಗರಾಜು, ಕುಬೇರಪ್ಪ, ಎಸ್. ಕುಮಾರ್, ಲೀಲಾವತಿ ಇತರರಿದ್ದರು.