Advertisement

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

08:22 PM May 20, 2024 | Team Udayavani |

ಹುಣಸೂರು:ತಾಲೂಕಿನಾದ್ಯಂತ ಮಳೆ ಸೋಮವಾರವೂ ಮುಂದುವರೆದಿದ್ದು, ತಂಬಾಕು ಹದ ಮಾಡುವ ಎರಡು ಬ್ಯಾರನ್ ಹಾಗೂ ಮನೆಯೊಂದು ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ.

Advertisement

ಮಳೆಯ ಅಬ್ಬರಕ್ಕೆ ಕೆರೆಯೊಂದರ ಕೋಡಿ ಒಡೆದಿದೆ. ತಂಬಾಕು ಹಾಗೂ ಶುಂಠಿ ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ಬೆಳೆಗಳು ಕೊಳೆಯುವ ಭೀತಿ ಎದುರಾಗಿದೆ.

ಹನಗೋಡು ಹೋಬಳಿಯ ಕಚುವಿನಹಳ್ಳಿ ಗ್ರಾಮದ ಲೇ.ಜವರೇಗೌಡರ ಪತ್ನಿ ಜಯಮ್ಮ ಮತ್ತು ಹರೀನಹಳ್ಳಿಯ ರುದ್ರಾರಾಧ್ಯರ ಪತ್ನಿ ಲಲಿತಮ್ಮರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಕಟ್ಟಡದ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಅರಸುಕಲ್ಲಹಳ್ಳಿಯ ಕುಮಾರ್‌ರಿಗೆ ಸೇರಿದ ಮನೆ ಬಿದ್ದು ಹೋಗಿದೆ.

ಹಾರಿ ಹೋದ ಮೇಲ್ಛಾವಣಿ:
ಚಿಲ್ಕುಂದದಲ್ಲಿ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ರಾಮಶೆಟ್ಟರ ಮನೆ ಮೇಲ್ಛಾವಣಿ ಹಾಗೂ ಚಂದ್ರುರವರ ಕೊಟ್ಟಿಗೆಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿ ಹೋಗಿದ್ದು ಮನೆಯೊಳಗಿದ್ದ ದವಸ, ಧಾನ್ಯ, ಬಟ್ಟೆ, ಮತ್ತಿತರ ಪದಾರ್ಥಗಳು ನೀರಿನಲ್ಲಿ ತೋಯ್ದು ಹಾಳಾಗಿದೆ.

ಜೋಳದ ಬಿತ್ತನೆ ನಾಶ:
ಗುರುಪುರ ಗ್ರಾ.ಪಂ.ವ್ಯಾಪ್ತಿಯ ಕಾಳೇನಹಳ್ಳಿಯ ತಗ್ಗುಪ್ರದೇಶದ ಜಮೀನುಗಳಲ್ಲಿ ಅಪಾರ ಪ್ರಮಾಣದ ಮಳೆ ನೀರು ನಿಂತಿದ್ದು, ಇತ್ತೀಚೆಗೆ ಬಿತ್ತನೆ ಮಾಡಿದ್ದ ನಟೇಶ್, ಶ್ರೀನಿವಾಸ್, ಆನಂದ, ಕಲೀಂ ಮತ್ತಿತರ ರೈತರಿಗೆ ಸೇರಿದ ಮುಸುಕಿನ ಜೋಳ ಹಾಗೂ ರಸಗೊಬ್ಬರ ಸಹಿತ ನೀರುಪಾಲಾಗಿದೆ.

Advertisement

ಕೋಡಿ ಒಡೆದ ಅತ್ತಿಕುಪ್ಪೆ ಕೆರೆ:
ಅತ್ತಿಕುಪ್ಪೆಯ 7ಎಕರೆ ವಿಸ್ತೀರ್ಣದ ಸರಕಾರಿ ಕೆರೆಯ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಜಮೀನಿನ ಮೇಲೆ ಹರಿದಿದ್ದು, ಕೆರೆ ಕೆಳಬಾಗದ ಅಡಿಕೆ, ತೆಂಗಿನ ತೋಟ, ಶುಂಠಿ, ತಂಬಾಕು ಜಮೀನು ಜಲಾವೃತವಾಗಿದ್ದು, ಕಣ್ಣು ಹಾಯಿಸಿದೆಲ್ಲೆಡೆ ಜಮೀನು ಕೆರೆಗಳಂತೆ ಗೋಚರಿಸುತ್ತಿವೆ.

ಕಂದಾಯಾಧಿಕಾರಿಗಳ ಭೇಟಿ:
ಹನಗೋಡು ನಾಡಕಚೇರಿಯ ರಾಜಸ್ವ ನಿರೀಕ್ಷಕ ಪ್ರಶಾಂತರಾಜೇಅರಸ್, ಗ್ರಾಮ ಆಡಳಿತಾಧಿಕಾರಿಗಳಾದ ಸುನಿಲ್ ಅಂತೋಣಿರಾಜ್, ಮಲ್ಲೇಶ್, ಸುಮಂತ್‌ರವರು ಅತ್ತಿಕುಪ್ಪೆಯ ಕೆರೆ ಕೋಡಿ ಒಡೆದು ಹಾನಿಗೊಳಗಾಗಿರುವ ಪ್ರದೇಶ ಹಾಗೂ ಕಲ್ಲಹಳ್ಳಿ, ತಟ್ಟೆಕೆರೆ, ಹೊಸಕೋಟೆ, ಕಚುವಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ, ಮನೆ, ಬ್ಯಾರನ್‌ ಹಾನಿ ಪರಿಶೀಲಿಸಿದರು.

ಇಷ್ಟೊಂದು ಬೆಳೆ ನಷ್ಟವಾಗಿದ್ದರೂ ಯಾವುದೇ ಜನಪ್ರತಿನಿಧಿಗಳಾಗಲಿ ಹಿರಿಯ ಅಧಿಕಾರಿಗಳಾಗಲಿ ಹಾನಿ ಪ್ರದೇಶಕ್ಕೆ ಭೇಟಿ ನೀಡದಿರುವುದು ರೈತರಲ್ಲಿ ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next