ಹುಮನಾಬಾದ: ಹಾಡಹಗಲೇ ಮನೆಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಮನಾಬಾದ ಪೊಲೀಸ್ ತನಿಖಾ ತಂಡ ಮೂರು ಜನ ಆರೋಪಿಗಳನ್ನು ಬಂಧಿಸಿದ್ದು, 8.75 ಲಕ್ಷದ ಬಂಗಾರ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದ ವಿಠೊಬಾ ಗುರುನಾಥ, ಶೇಖ ಆಸೀಫ್ ಮುಲ್ಲಾನೋರ, ಸಂಜೀವಕುಮಾರ ಗಡಿಗೌಡಗಾಂವ ಬಂಧಿತ ಆರೋಪಿಗಳು. ಬಂಧಿತರಿಂದ ಈ ಹಿಂದೆ ಕಲಬುರಗಿ ಜಿಲ್ಲೆಯಲ್ಲಿ ವಾಹನ ಕಳ್ಳತನದಲ್ಲಿ ಭಾಗಿ ಯಾಗಿರುವ ಕುರಿತು ಪೊಲೀಸರು ತಿಳಿಸಿದ್ದಾರೆ.
ಹಣಕ್ಕಾಗಿ ಈ ಪ್ರಕರಣ ನಡೆದಿರುವುದು ತಿಳಿದು ಬಂದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು ಮಾಹಿತಿ ನೀಡಿದ್ದಾರೆ.
ಘಟನೆ ವಿವಿರ: ಪಟ್ಟಣದ ವಿದ್ಯುತ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅರವಿಂದ ಧುಮಾಳೆ ಮನೆಯಲ್ಲಿ ಜು.19ರಂದು ಮಧ್ಯಾಹ್ನ ಆರೋಪಿಗಳು ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆಯರಿಗೆ ಚಾಕು ತೋರಿಸಿ ಸುಮಾರು 17 ತೊಲೆಯ ಬಂಗಾರದ ಆಭರಣಗಳನ್ನು ದೋಚಿದ್ದರು. ಈ ಘಟನೆ ಪಟ್ಟಣದ ಜನರಲ್ಲಿ ಆತಂಕ ಮೂಡಿಸಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ಎಸ್. ಪಿ ಕಿಶೋರ್ ಬಾಬು, ಎಎಸ್‌ಪಿ ಶಿವಾಂಶು ರಾಜಪೂತ್ ಮಾರ್ಗದರ್ಶನದಲ್ಲಿ ಸಿಪಿಐ ಶರಣಬಸಪ್ಪ ಕೋಡ್ಲಾ, ಸಿಪಿಐ ಸುರೇಶ ಹಜ್ಜರ್ಗೆ, ಠಾಣೆ ಪಿಎಸ್‌ಐ ಮಂಜನಗೌಡ ಪಾಟೀಲ, ಸಂಚಾರ ಪಿಎಸ್‌ಐ ಬಸವರಾಜ, ಇಬ್ಬಂದಿಗಳಾದ ರಮಶ, ಭಗವಾನ ಬಿರಾದರ, ಬಾಬುರಾವ, ಷಣ್ಮುಕಯ್ನಾ, ವಿವೇಕ, ರಾಘವೇಂದ್ರ, ನವೀನ್, ಇರ್ಫಾನ್, ಆರಿಫ್ ಅವರ ಒಳಗೊಂಡ ತಂಡ ಆರೋಪಿಗಳ ಬಂಧನಕ್ಕೆ ಶ್ರಮಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.