Advertisement

ಸೂರಿಲ್ಲದ 24 ಸಾವಿರ ಕುಟುಂಬಕ್ಕೆ ಮನೆ ಭಾಗ್ಯ

03:31 PM Jul 03, 2022 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿರುವ ಕೊಳಚೆ ಪ್ರದೇಶಗಳು, ಪೌರಕಾರ್ಮಿಕರ ಕಾಲೋನಿಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಶನಿವಾರ ಹಮ್ಮಿಕೊಂಡಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕರಿನಂಜನಪುರ ರಸ್ತೆ ಪೌರಕಾರ್ಮಿಕರ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 21 ಕೊಳಚೆ ಪ್ರದೇಶಗಳಿದ್ದು, 3 ಸರ್ಕಾರಿ ಸ್ಥಳದಲ್ಲಿದೆ. ಸೂರಿಲ್ಲದವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ 24 ಸಾವಿರ ಕುಟುಂಬಗಳನ್ನು ಗುರುತಿಸಿ, ಅವರಿಗೆ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರ ಮುಂದಾಗುತ್ತಿದೆ ಎಂದು ತಿಳಿಸಿದರು.

ರೈತರು, ಜೀತಮುಕ್ತರೊಂದಿಗೆ ಸಭೆ: ಜಿಲ್ಲೆಯ ಉಳಿದ ಕೊಳಚೆ ಪ್ರದೇಶಗಳಲ್ಲಿಯೂ ಮುಂಬರುವ ದಿನಗಳಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ವಸತಿ, ನಿವೇಶನ ರಹಿತರಿಗೆ ಸೂರು ವ್ಯವಸ್ಥೆ ಮಾಡಲಾಗುವುದು. ರೈತರು, ಜೀತಮುಕ್ತರು ಹಾಗೂ ಇತರರ ಸಂಬಂಧ ಸಭೆ ಕರೆಯಲಾಗುತ್ತಿದೆ. ಪೌರಕಾರ್ಮಿಕರ ಸಮಸ್ಯೆಗಳನ್ನು ಸಹ ಚರ್ಚಿಸಲಾಗುವುದು ಎಂದು ವಿವರಿಸಿದರು.

ಹಕ್ಕುಪತ್ರ ವಿತರಣೆ: ಕರಿನಂಜನಪುರ ರಸ್ತೆಯಲ್ಲಿರುವ 88 ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ತಮ್ಮ ಮನೆಗಳಿಗೆ ದಾಖಲೆ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದ ಈ ಕುಟುಂಬಗಳಿಗೆ ನಮ್ಮ ಸರ್ಕಾರ ಕೈಗೊಂಡ ಕ್ರಮಗಳಿಂದ ಹಕ್ಕುಪತ್ರ ದೊರೆಯುತ್ತಿದೆ ಎಂದು ವಿವರಿಸಿದರು.

ಕಡಿಮೆ ಜಾಗದಲ್ಲಿ ಎರಡ್ಮೂರು ಕುಟುಂಬ ವಾಸ: ಮಹಿಳೆಯರ ಹೆಸರಿನಲ್ಲೇ ಹಕ್ಕುಪತ್ರ ನೀಡಬೇಕು. ಅವರು ಜವಾಬ್ದಾರಿಯಿಂದ ತಮ್ಮ ಸ್ವತ್ತನ್ನು ರಕ್ಷಿಸಿಕೊಳ್ಳುತ್ತಾರೆ. ಇಂದಿಗೂ ಕಡಿಮೆ ಜಾಗದಲ್ಲಿ ಪೌರಕಾರ್ಮಿಕರ ಎರಡು ಮೂರು ಕುಟುಂಬಗಳು ವಾಸಮಾಡುತ್ತಿವೆ ಎಂದರೆ ತುಂಬಾ ನೋವಿನ ಸಂಗತಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರದ ಕರಿನಂಜನಪುರ ರಸ್ತೆ ಪೌರ ಕಾರ್ಮಿಕರ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು.

Advertisement

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್‌.ಮಹೇಶ್‌, ಸಿ.ಎಸ್‌.ನಿರಂಜನ್‌ಕುಮಾರ್‌, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭಾಧ್ಯಕ್ಷೆ ಆಶಾ ನಟರಾಜು, ಸದಸ್ಯ ಎಂ.ಮಹೇಶ್‌, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ನಿರ್ದೇಶಕ ನಾಗರಾಜ ಎಂ. ಬಿರಾದಾರ್‌, ನಗರಸಭೆ ಸದಸ್ಯರಾದ ಮನೋಜ್‌ ಪಟೇಲ್‌, ಚಂದ್ರು, ನಗರಸಭಾ ಆಯುಕ್ತ ಕರಿಬಸವಯ್ಯ, ಇತರರು ಉಪಸ್ಥಿತರಿದ್ದರು.

ಸಭೆ ಆರಂಭದಲ್ಲಿ ಪ್ರಾರ್ಥನೆ ಮಾಡಿದ ಪೌರಕಾರ್ಮಿಕರ ಸಮುದಾಯದ ವಿದ್ಯಾರ್ಥಿನಿಯನ್ನು ಸಚಿವ ವಿ.ಸೋಮಣ್ಣ ಅವರು ಹತ್ತಿರಕ್ಕೆ ಕರೆದು ಆತ್ಮೀಯವಾಗಿ ಮಾತನಾಡಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ನಮ್ಮ ಸರ್ಕಾರ ಕ್ರಮ ವಹಿಸಿದೆ. ಪೌರಕಾರ್ಮಿಕರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಬಡ ಕುಟುಂಬಗಳು ಮುಂದೆಯೂ ಬಡವರಾಗಿ ಉಳಿಯಬೇಕು ಎಂಬುದಿಲ್ಲ. ಅವರನ್ನು ಮುನ್ನೆಲೆಗೆ ತಂದು ಅಭಿವೃದ್ಧಿ ಪರ ಕೆಲಸಗಳನ್ನು ಮಾಡೋಣ. ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next