ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ಪೌರಕಾರ್ಮಿಕರಿಗೆ ಕೇವಲ 400 ಚ. ಅಡಿಯ ಮನೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಬೆನ್ನಿಗೆ ಎಚ್ಚೆತ್ತುಕೊಂಡಿರುವ ಪಾಲಿಕೆಯು ಅನುದಾನ ಹೆಚ್ಚಿಸುವಂತೆ ಆಗ್ರಹಿಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಖಾಯಂ ಪೌರ ಕಾರ್ಮಿಕರಿಗೆ ವಾಸಯೋಗ್ಯ ವಸತಿ ಸೌಲಭ್ಯವನ್ನು ಕಲ್ಪಿಸುವ “ಪೌರ ಕಾರ್ಮಿಕರ ಗೃಹಭಾಗ್ಯ’ ಯೋಜನೆಗೆ ಕೆಲವು ಷರತ್ತುಗಳನ್ನು ವಿಧಿಸಿ ಅವಕಾಶ ನೀಡಲಾಗಿತ್ತು. ಇದರಂತೆ ಮಂಗಳೂರು ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು ಗ್ರಾಮದ ಮಹಾಕಾಳಿಪಡು³ವಿನಲ್ಲಿ ಜಿ+3 ಮಾದರಿಯ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. 32 ಮನೆಗಳ ಒಂದು ಬ್ಲಾಕ್‌ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಆದರೆ ನಿರ್ಮಿಸಿರುವ ಮನೆಗಳು ಕೇವಲ 300ರಿಂದ 400 ಚದರ ಅಡಿ ವಿಸ್ತೀರ್ಣದವು. ಇಷ್ಟು ಅಲ್ಪ ಅವಕಾಶದಲ್ಲಿ ವಾಸ ಮಾಡುವುದು ಹೇಗೆ ಎಂಬ ಆತಂಕ ಪೌರಕಾರ್ಮಿಕರನ್ನು ಕಾಡುತ್ತಿದ್ದು, ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತೀ ಮನೆಯನ್ನು 7.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರಕಾರ 6 ಲಕ್ಷ ರೂ. ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ 1.50 ಲಕ್ಷ ರೂ. ಭರಿಸಲಾಗುತ್ತದೆ. ಸಾಮಾನ್ಯವಾಗಿ ಇಷ್ಟು ಮೊತ್ತದಲ್ಲಿ 400 ಚ.ಅಡಿಯಷ್ಟು ವಿಸ್ತೀರ್ಣದ ಮನೆ ಮಾತ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಅನುದಾನವನ್ನು ಹೆಚ್ಚಿಸುವಂತೆ ಕೋರಿ ಸರಕಾರಕ್ಕೆ ಮನಪಾ ಪತ್ರ ಬರೆದಿದೆ. ಸದ್ಯ 32 ಮನೆಗಳ ಒಂದು ಬ್ಲಾಕ್ ಮಾತ್ರ ನಿರ್ಮಾಣವಾಗಿದ್ದು, ಮುಂದೆ ಇನ್ನೂ ಮೂರು ಬ್ಲಾಕ್‌ಗಳು ನಿರ್ಮಾಣವಾಗಬೇಕಾದ್ದರಿಂದ ಆ ಮನೆಗಳನ್ನು ಹೆಚ್ಚುವರಿ ಅನುದಾನದಲ್ಲಿ ವಿಸ್ತರಿಸಲು ಸಾಧ್ಯ ಎಂದು ಪತ್ರದಲ್ಲಿ ಉಲ್ಲೇಖೀಸಿದೆ.
ಮುಂದೆ ನಿರ್ಮಿಸಲಿ ರುವ 3 ಬ್ಲಾಕ್‌ಗಳ ಪ್ರತೀ ಮನೆಯನ್ನು ಕನಿಷ್ಠ 600 ಚ.ಅಡಿಗಳಷ್ಟು ವಿಸ್ತರಿಸಲು ಅನುದಾನ ಒದಗಿಸುವಂತೆ ಸರಕಾರವನ್ನು ಕೋರಲಾಗಿದೆ.
ಮೊಹಮ್ಮದ್ ನಝೀರ್, ಆಯುಕ್ತರು, ಮಂಗಳೂರು ಮನಪಾ