Advertisement
3-5 ವರ್ಷ ವಯೋಮಾನದಲ್ಲಿಯೇ ಮಕ್ಕಳು, ಲಿಂಗ ಭೇದವನ್ನು ಗುರುತಿಸಬಲ್ಲರಂತೆ. ಹಾಗಾಗಿ, ಅಆಇಈ, ಎಬಿಸಿಡಿ ಕಲಿಸುವುದಕ್ಕೂ ಮುಂಚೆ, ನಿಮ್ಮ ಮಗ/ಮಗಳಲ್ಲಿ ಲಿಂಗ ಸಮಾನತೆಯ ಬೀಜ ಬಿತ್ತಬೇಕು. ಗಂಡು-ಹೆಣ್ಣು ಸಮಾನರು ಅಂತ ಅವರಲ್ಲಿ ತಿಳಿವಳಿಕೆ ಮೂಡಿಸಬೇಕು.ಅಷ್ಟು ಚಿಕ್ಕ ಮಕ್ಕಳಿಗೆ ಅವನ್ನೆಲ್ಲ ಹೇಗೆ ಕಲಿಸುವುದು ಅಂತೀರಾ? ಕಲಿಸುವುದು ಅಂದರೆ ಬೆತ್ತ ಹಿಡಿದು ಬೋಧಿಸುವುದಿಲ್ಲ, ಸ್ಲೇಟು-ಬಳಪ ಹಿಡಿಸಿ ತಿದ್ದಿಸುವುದೂ ಅಲ್ಲ. ನಿಮ್ಮ ನಡವಳಿಕೆ, ನೀವಾಡುವ ಮಾತು, ನೋಡುವ ಕಾರ್ಯಕ್ರಮಗಳಿಂದಲೂ ಮಕ್ಕಳು ಕಲಿಯುತ್ತವೆ…
ತಂದೆಯಾದವನು, ಅಮ್ಮ ಮಾಡುವ ಕೆಲಸ ಕೀಳು ಅಂತ ಭಾವಿಸಿದರೆ ಮಕ್ಕಳ ಮನಸ್ಸಿನಲ್ಲಿಯೂ ಅದೇ ಭಾವನೆ ಬರುತ್ತದೆ. ಹೆಂಡತಿಯ ಸಲಹೆ-ಅಭಿಪ್ರಾಯಗಳನ್ನು ಕಡೆಗಣಿಸುವುದು, ನಿನಗೇನೂ ಗೊತ್ತಿಲ್ಲ ಅಂತ ಮಕ್ಕಳೆದುರು ಹೀಯಾಳಿಸುವುದು, ನೀನು ಅಡುಗೆ ಕೆಲಸಕ್ಕೇ ಲಾಯಕ್ಕು ಅನ್ನುವುದು…ಇತ್ಯಾದಿ ನಡವಳಿಕೆಗಳನ್ನು ಮಕ್ಕಳು ನೋಡಿ ಕಲಿಯುತ್ತವೆ. ಅಪ್ಪನ ಕೆಲಸ ಶ್ರೇಷ್ಠ. ಅಮ್ಮನ ಕೆಲಸ ಕನಿಷ್ಠ ಎಂಬ ಭಾವನೆ ಮಕ್ಕಳಲ್ಲಿ ಮೂಡದಂತೆ, ಹೆತ್ತವರು ಮಾದರಿಯಾಗಬೇಕು. ಮನೆಯ ಕೆಲಸಗಳನ್ನು ಇಬ್ಬರೂ ಹಂಚಿಕೊಂಡು ಮಾಡುವುದು, ಪರಸ್ಪರರ ಮಾತಿಗೆ ಬೆಲೆ ನೀಡುವುದು, ಗಂಡು-ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣುವುದು ಲಿಂಗ ಸಮಾನತೆಯ ಮೊದಲ ಮೆಟ್ಟಿಲು. -ಆಟವೂ ಪಾಠವೇ
ಮೊದಲ ಐದಾರು ವರ್ಷಗಳಲ್ಲಿ ಮಕ್ಕಳು ಕಲಿಯುವುದೆಲ್ಲವೂ ಆಟದ ಮೂಲಕವೇ. ಹಾಗಾಗಿ, ಆಟದ ಮೂಲಕವೇ ಅವರಿಗೆ ಬದುಕಿನ ಪಾಠ ಹೇಳುವುದು ಉತ್ತಮ. ಹುಡುಗರು ಗೊಂಬೆಗಳ ಜೊತೆ ಆಟವಾಡಬಾರದು, ಅಡುಗೆ ಆಟ ಆಡಬಾರದು, ಕಾರು, ಬೈಕು, ಗನ್, ಬ್ಯಾಟು-ಬಾಲ್‌ಗಳಂಥ ಆಟಿಕೆಗಳು ಹುಡುಗಿಯರಿಗಲ್ಲ… ಇತ್ಯಾದಿ ನಿಯಮಗಳು ಮಕ್ಕಳಲ್ಲಿ ಲಿಂಗ ತಾರತಮ್ಯದ ಭಾವನೆ ಸೃಷ್ಟಿಸುತ್ತವೆ. ಗಂಡು-ಹೆಣ್ಣಿನ ಕುರಿತಾದ ಪೂರ್ವಗ್ರಹದ ಯೋಚನೆಗಳು ಮಕ್ಕಳ ಮನಸ್ಸಿಗೆ ತಾಕದಂತೆ ಎಚ್ಚರ ವಹಿಸಿ.
Related Articles
“ಹುಡುಗನಾಗಿ, ಹುಡುಗೀರ ಥರ ಅಳ್ಳೋಕೆ ನಾಚಿಕೆಯಾಗಲ್ವಾ?’, “ಗಂಡುಬೀರಿ ಥರಾ ಆಡಬೇಡ’, “ಹುಡುಗಿಯಾದವಳು ತಗ್ಗಿ ಬಗ್ಗಿ ನಡೆಯಬೇಕು’… ಮಕ್ಕಳೆದುರು ಆಡುವ ಇಂಥ ಮಾತುಗಳು ಅವರ ಮೇಲೆ ಬಹಳ ಪರಿಣಾಮ ಬೀರುತ್ತವೆ. ಹುಡುಗನಾದವನು ಅಳಲೇಬಾರದು, ಹುಡುಗಿಯಾದವಳು ಎಲ್ಲರಿಗೂ ಅಂಜಿ ನಡೆಯಬೇಕು ಅಂತ ಅವರು ಭಾವಿಸಿಬಿಡುತ್ತಾರೆ. ಅಪ್ಪಿತಪ್ಪಿಯೂ ಈ ಯೋಚನೆಗಳನ್ನು ಅವರ ತಲೆಗೆ ತುಂಬಬೇಡಿ.
Advertisement
-ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಅರಿವುಲಿಂಗ ಸಮಾನತೆಯ ಪಾಠ ಹೇಳುವ ಜೊತೆಜೊತೆಗೆ, ಗಂಡು-ಹೆಣ್ಣಿನ ದೇಹ ರಚನೆಯಲ್ಲಿರುವ ವ್ಯತ್ಯಾಸವನ್ನೂ ಅವರಿಗೆ ತಿಳಿಸಿ ಹೇಳಬೇಕು. ಮನೆಯ ಸುರಕ್ಷಿತ ವಾತಾವರಣದಿಂದ ಮಕ್ಕಳನ್ನು ಹೊರಜಗತ್ತಿಗೆ ಕಳಿಸುವ ಮುನ್ನವೇ, ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ವಿವರಿಸಬೇಕು. “ನಿನ್ನ ದೇಹದ ಮೇಲೆ ನಿನಗಲ್ಲದೆ ಬೇರೆ ಯಾರಿಗೂ ಅಧಿಕಾರವಿಲ್ಲ’ ಎಂದು ಹುಡುಗಿಯರಿಗಷ್ಟೇ ಅಲ್ಲ, ಹುಡುಗರಿಗೂ ಹೇಳಿ. -ಮಗಳಲ್ಲಿ ಆತ್ಮವಿಶ್ವಾಸ ತುಂಬಿ
ಹೆಣ್ಣುಮಕ್ಕಳ ಹೆತ್ತವರನ್ನು ಕಾಡುವ ಭಯ-ಆತಂಕಗಳು ನೂರಾರು. ಸ್ವತಂತ್ರವಾಗಿ ಬಿಟ್ಟರೆ ಎಲ್ಲಿ ಮಗಳು ಕೈ ಮೀರಿ ಹೋಗಿಬಿಡುತ್ತಾಳ್ಳೋ ಅಂತ ಹೆದರಿ, ಅವಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವವರಿದ್ದಾರೆ. ಅದು ತಪ್ಪಲ್ಲದಿದ್ದರೂ, ಹುಡುಗಿಯಾದವಳು ಹೀಗೆ ಮಾಡಬಾರದು, ಹಾಗೆ ನಡೆಯಬಾರದು ಅಂತೆಲ್ಲಾ ನಿರ್ಬಂಧ ಹೇರುವುದರಿಂದ ಮಗಳ ಆತ್ಮವಿಶ್ವಾಸ ಕುಂದಬಹುದು. ತಾನು ಅಬಲೆ ಎಂಬ ಕಲ್ಪನೆ ಮೂಡಬಹುದು. ಬದಲಿಗೆ, ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಿನ ಅಂತರವನ್ನು ಅರ್ಥ ಮಾಡಿಸಿ, ಆತ್ಮರಕ್ಷಣೆಯ ವಿಧಾನಗಳನ್ನು ಕಲಿಸಿ. – ಗಂಡುಮಕ್ಕಳಲ್ಲಿ ಅರಿವು ಮೂಡಿಸಿ
ಮಗಳಿಗೆ ಹೇಗಿರಬಾರದು ಎಂದು ನೀತಿಪಾಠ ಹೇಳುವುದಕ್ಕಿಂತ, ಮಗನಿಗೆ ಹೇಗಿರಬೇಕು ಎಂದು ಕಲಿಸುವುದು ಹೆತ್ತವರ ಮೊದಲ ಜವಾಬ್ದಾರಿ. ಮನೆಯಲ್ಲಿ ಅಕ್ಕ-ತಂಗಿ, ಅಮ್ಮನನ್ನು ಗೌರವಿಸುವ ಹುಡುಗ ಮುಂದೆ ಹೆಂಡತಿಯನ್ನು ಗೌರವಿಸುತ್ತಾನೆ.