Advertisement

ಸದನಕ್ಕೆ ತಲುಪಿದ ಕಾಡ್ಗಿಚ್ಚು!

12:41 PM Mar 17, 2017 | Team Udayavani |

ಉಡುಪಿ: ವಿಪರೀತ ಬರಗಾಲ ಮತ್ತು ಬಿಸಿಲಿನ ಝಳವೂ ಸೇರಿದಂತೆ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಕಾಡ್ಗಿಚ್ಚಿನ ಅನಾಹುತ ಸಂಭವಿಸಿದೆ. ಇದನ್ನು ನಿಯಂತ್ರಿಸುವಲ್ಲಿ ಸರಕಾರ ನಿಷ್ಕ್ರಿಯವಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಶೂನ್ಯ ವೇಳೆಯಲ್ಲಿ ಸದನದ ಗಮನ ಸೆಳೆದರು.

Advertisement

ಕಾಡ್ಗಿಚ್ಚಿನಿಂದ ಅಮೂಲ್ಯ ಮರಮಟ್ಟು, ಔಷಧ ಸಸ್ಯಗಳು ಮತ್ತು ಜೀವಸಂಕುಲಗಳು ನಾಶವಾಗುತ್ತಿದ್ದರೂ ಅರಣ್ಯ ಇಲಾಖೆ ಕೈಚೆಲ್ಲಿ ಕುಳಿತ ಸುದ್ದಿ ಪ್ರಕಟವಾಗುತ್ತಿದೆ. ತಜ್ಞರ ಅನುಭವದ ಪ್ರಕಾರ ನಶಿಸಿ ಹೋದ ಕಾಡನ್ನು ಮತ್ತೆ ಸೃಷ್ಟಿಸಲು ಮುನ್ನೂರು ವರ್ಷಗಳಲ್ಲೂ ಸಾಧ್ಯವಿಲ್ಲ. ಅರಣ್ಯ ಸಂರಕ್ಷಣೆಯಲ್ಲಿ ನಿರ್ಧಾರ ಕೈಗೊಳ್ಳಬೇಕಾದ ಹಿರಿಯ ಅಧಿಕಾರಿಗಳು, ರಾಜಧಾನಿಯಲ್ಲಿ ಕುಳಿತು ಒಣ ಆದೇಶ ನೀಡುತ್ತಿದ್ದಾರೆ ಎಂದು ಮಾಧ್ಯಮಗಳು ತಿಳಿಸುತ್ತಿವೆ.

ಸ್ವತಃ ಅರಣ್ಯ ಸಚಿವ, ಮುಖ್ಯಮಂತ್ರಿ ನಿಭಾಯಿಸಲು ಸಾಧ್ಯವಿಲ್ಲದ ಪರಿಸ್ಥಿತಿ ತಲುಪಿದ್ದಾರೆ. ಕಾಡ್ಗಿಚ್ಚನ್ನು ನಿಯಂತ್ರಿಸಲು ಗಮನ ಕೊಡುವಷ್ಟು ಶಕ್ತಿ ಹೊಂದಿಲ್ಲ ಎಂಬ ವರದಿ ಭಯಾನಕ ರೂಪ ತಾಳುತ್ತಿದೆ. ಕೆಳಮಟ್ಟದ ಅಧಿಕಾರಿಗಳು ಕಾಡ್ಗಿಚ್ಚನ್ನು ನಿಯಂತ್ರಿಸಲು ಅವಶ್ಯ ಸೌಕರ್ಯಗಳಿಲ್ಲದೆ ಬೆಂಕಿ ನಂದಿಸುವ ಭರದಲ್ಲಿ ಕಾಡ್ಗಿಚ್ಚಿಗೆ ಆಹುತಿಯಾದ ಸುದ್ದಿಗಳು ಬಂದಿವೆ. ಗಸ್ತು ತಿರುಗಲು ಸಿಬಂದಿ, ವಾಹನಗಳ ಸಮಸ್ಯೆ ಕಿರಿಯ ಅಧಿಕಾರಿಗಳನ್ನು ಸಂಕಷ್ಟಕ್ಕೆ ದೂಡಿದೆ.

ಬಜೆಟ್‌ನಲ್ಲಿ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಯೋಜನೆ ರೂಪಿಸಿದ ಸುದ್ದಿಯಿಲ್ಲ. ಈ ಮಧ್ಯೆ ಸಿಐಡಿ ತನಿಖೆಗೆ ಸರಕಾರ ಆದೇಶ ನೀಡಿದೆ. ಮೃತಪಟ್ಟ ಬಂಡೀಪುರ ಅರಣ್ಯ ರಕ್ಷಕ 26 ವರ್ಷದ ಮುರುಗೇಶನ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕಲ್ಲದೆ ಕಾಡ್ಗಿಚ್ಚಿಗೆ ಸಂಬಂಧಿಸಿ ಸರಕಾರ ಏನೇನು ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಬೇಕು ಎಂದು ಪೂಜಾರಿ ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next