ಬೀದರ: ಅತಿವೃಷ್ಟಿಯಿಂದಾಗಿ ಜಿಲ್ಲೆಯ ಹಲವೆಡೆ ಮನೆಗಳ ಕುಸಿತವಾಗಿದ್ದು, ಕೂಡಲೇ ಸಮೀಕ್ಷಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಶೀಘ್ರ ಪರಿಹಾರ ವಿತರಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ನಿರ್ದೇಶನ ನೀಡಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಅಧಿಕಾರಿಗಳ ತಂಡ ಮನೆ ಹಾನಿಯಾದವರಲ್ಲಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಸಮೀಕ್ಷೆ ಮಾಡಬೇಕು. ಪರಿಹಾರ ನೀಡಿಕೆಯಲ್ಲಿ ಅನ್ಯಾಯವಾದರೆ ಸಂಬಂಧಪಟ್ಟ ತಹಶೀಲ್ದಾರರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ವಿಷಯದಲ್ಲಿ ವೈಯಕ್ತಿಕ ಮುತುವರ್ಜಿ ವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳು ತಮ್ಮ ಕೆಳಹಂತದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅತಿವೃಷ್ಟಿಯಲ್ಲಿ ಮನೆ ಹಾನಿಯಾದವರು ದೂರವಾಣಿ ಮೂಲಕ ನೋವು ತೋಡಿಕೊಳ್ಳುತ್ತಿದ್ದಾರೆ. ಕೆಲಸ ಮಾಡದ ಕೆಳ ಹಂತದ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಹಶೀಲ್ದಾರರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡ ಯಾವುದೇ ಸಂಕಷ್ಟ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರಬೇಕು. ಪರಿಹಾರ ಕಾರ್ಯ ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ ವೇತನ, ವಿಕಲಚೇತನರು ಮತ್ತು ವಿಧವೆಯರಿಗೆ ನೀಡಲಾಗುವ ಮಾಸಿಕ ವೇತನ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಕೋವಿಡ್ ಸಂಕಷ್ಟ ಮತ್ತು ಅತಿವೃಷ್ಟಿಯಿಂದಾಗಿ ಈಗಾಗಲೇ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಜೀವನ ನಿರ್ವಹಣೆಗೆ ಯಾವುದೇ ರೀತಿಯ ಆದಾಯ ಮೂಲಗಳಿಲ್ಲದ ವಿಕಲಚೇತನರು, ವೃದ್ಧರಿಗೆ ಸಮಸ್ಯೆಯಾಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.
ಸಚಿವರ ನಿರ್ದೇಶನ ಮತ್ತು ನಿರಂತರ ಸಂಪರ್ಕದೊಂದಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ಎಲ್ಲ ತಾಲೂಕುಗಳಿಗೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಈಗಾಗಲೇ ಕಮಲನಗರ, ಔರಾದ, ಭಾಲ್ಕಿ, ಹುಮನಾಬಾದಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.