Advertisement

ಮನೆ ಕುಸಿತ: ಕುಟುಂಬಕ್ಕೆ ಪರಿಹಾರ ಮರೀಚಿಕೆ

10:43 AM Nov 26, 2018 | |

ಸುಬ್ರಹ್ಮಣ್ಯ: ಮಳೆಗೆ ಮನೆಯ ಗೋಡೆ ಬಿರುಕು ಬಿಟ್ಟಿತು. ಮರುದಿನವೇ ಮನೆಯ ಗೋಡೆಗಳು ಉರುಳಿಬಿದ್ದವು. ಜಡಿ ಮಳೆಯಲ್ಲೇ ಮನೆಯಿಂದ ಆಚೆ ಬಂದೆವು. ಅನಂತರ ಅಂಗಳದ ಬದಿಯಲ್ಲೇ ಜೋಪಡಿ ನಿರ್ಮಿಸಿ ವಾಸ ಮಾಡಿದೆವು. ಮನೆ ನಿರ್ಮಾಣಕ್ಕೆ ಸರಕಾರ ಪರಿಹಾರವನ್ನೂ ನೀಡಿಲ್ಲ.

Advertisement

ಗುತ್ತಿಗಾರು ಗ್ರಾ.ಪಂ. ವ್ಯಾಪ್ತಿಯ ನಾಲ್ಕೂರು ಗ್ರಾಮದ ನಿವಾಸಿ ಹೂವಪ್ಪ ಎರ್ದಡ್ಕ ಅವರ ನೋವಿನ ನುಡಿ ಇದು. ಕನಸಲ್ಲೂ ಯೋಚಿಸದ ಹಾಗೆ ಆಗಸ್ಟ್‌ನಲ್ಲಿ ಬಂದ ಮಳೆಗೆ ಈ ಭಾಗದಲ್ಲಿ ಹಲವೆಡೆ ಭೂಕುಸಿತ ಸಂಭವಿಸಿತ್ತು. ಇದೇ ವೇಳೆ ಅವರ ಮನೆಯೂ ಕುಸಿದಿತ್ತು.

ಎಲ್ಲವೂ ನೆಲಸಮ
ಬಡ ಕುಟುಂಬಕ್ಕೆ ಸೇರಿದ ಹೂವಪ್ಪ ಗೌಡ-ಪುಷ್ಪಾವತಿ ದಂಪತಿ ತಮ್ಮ ಮೂರು ಮಂದಿ ಪುತ್ರಿಯರನ್ನು ಮದುವೆ ಮಾಡಿಸಿಕೊಟ್ಟ ಬಳಿಕ ಅದೇ ಮನೆಯಲ್ಲೇ ವಾಸವಿದ್ದರು. ಕೂಲಿ ಕೆಲಸ ಮಾಡಿ ಅತ್ಯಲ್ಪ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಮನೆ ಕುಸಿತದಿಂದ ಛಾವಣಿಯ ಪೀಠೊಪಕರಣ, ಹೆಂಚು, ಮನೆಗೆ ಅಳವಡಿಸಿದ್ದ ಸೋಲಾರ್‌ – ಹೀಗೆ ಎಲ್ಲವೂ ನೆಲಸಮವಾಗಿತ್ತು.

ಪಂಚಾಯತ್‌ ವಾರ್ಡು ಸದಸ್ಯರು, ಪಿಡಿಒ, ಗ್ರಾಮ ಸಹಾಯಕರು ಬಂದು ಹಾನಿ ವೀಕ್ಷಿಸಿದ್ದರು. ಹಾನಿಯ ಲೆಕ್ಕ ಪಡೆದ ಗ್ರಾಮ ಸಹಾಯಕ 1.50 ಲಕ್ಷ ರೂ. ಅಂದಾಜುಪಟ್ಟಿ ಸಿದ್ಧಪಡಿಸಿ, ಪರಿಹಾರಕ್ಕೆ ಕಳುಹಿಸಿಕೊಟ್ಟಿದ್ದಾಗಿ ಮನೆಯವರಿಗೆ ತಿಳಿಸಿದ್ದರು. ಮೂರು ತಿಂಗಳ ಬಳಿಕ ಅವರು ಪ್ರಾಕೃತಿಕ ವಿಕೋಪ ಬೆಳೆ ನಷ್ಟ ವೀಕ್ಷಣೆಗೆಂದು ಈ ಭಾಗಕ್ಕೆ ಬಂದಿದ್ದಾಗ 4 ಸಾವಿರ ರೂ. ಮೊತ್ತವನ್ನು ಮನೆಯವರಿಗೆ ಕೊಟ್ಟು ಕೈ ತೊಳೆದುಕೊಂಡಿದ್ದರು.

ಅಂದು ನಡೆದ ಭೂಕುಸಿತದ ತೀವ್ರತೆಗೆ ಮನೆ ಸಹಿತ 1.5 ಎಕ್ರೆರೆ ಜಾಗ ಅರ್ಧ ಅಡಿಯಷ್ಟು ಕೆಳಕ್ಕೆ ಜಾರಿತ್ತು. ಮನೆ ಪಕ್ಕದ ಗುಡ್ಡವೂ ಕುಸಿದಿತ್ತು. ಪರಿಹಾರದ ಕುರಿತು ತಾಲೂಕು ಕಚೇರಿಯಲ್ಲಿ ವಿಚಾರಿಸಿದಾಗ, ಹೆಚ್ಚಿನ ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ ಎನ್ನುವ ಮಾಹಿತಿಯನ್ನು ಕುಟುಂಬದವರಿಗೆ ನೀಡಿದ್ದಾರೆ.

Advertisement

ಮನೆಗೆ ಅವಕಾಶವಿದೆ 94ಸಿ ಯೋಜನೆಯಲ್ಲಿ ಜಾಗ ಮಂಜೂರುಗೊಂಡಿದೆ. ಸರಕಾರದ ಯಾವುದಾದರೊಂದು ಯೋಜನೆಯ ಉಪಯೋಗ ಪಡೆದು ಮನೆ ನಿರ್ಮಿಸಲು ಅವಕಾಶವಿದೆ. ಭೂಕುಸಿತಕ್ಕೆ ಈಗಿನ ಮನೆ ಇರುವ ಸ್ಥಳ ಹಾಗೂ ಭೂಮಿ ಬಿರುಕು ಬಿಟ್ಟು ಬಾಯ್ದೆರೆದು ನಿಂತಿರುವುದರಿಂದ ಹೊಸ ಮನೆ ನಿರ್ಮಿಸುವ ಉದ್ದೇಶಕ್ಕೂ ಹಿನ್ನಡೆಯಾಗಿದೆ. ಭೂಕುಸಿದಿಂದ ಹಾನಿಗೆ ಒಳಗಾದ ಕುಟುಂಬಗಳಿಗೆ ಸರಕಾರದ ಪರಿಹಾರ ವ್ಯವಸ್ಥೆಗಳು ಸರಿಯಾಗಿ ದೊರಕಿಲ್ಲ. ಅತ್ತ ಪರಿಹಾರವೂ ಸಿಗದೆ ಇತ್ತ ಮನೆ ನಿರ್ಮಿಸಿಕೊಳ್ಳುವ ಧೈರ್ಯವೂ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿದೆ ಈ ಬಡ ಕುಟುಂಬ.

ಶೀಘ್ರ ಮನೆ ನಿರ್ಮಾಣ
ಮನೆ ನಿರ್ಮಾಣಕ್ಕೆ ದೊಡ್ಡ ಮೊತ್ತದ ಹಣ ಪಾವತಿಸಲು ಸ್ಥಳೀಯಾಡಳಿತಕ್ಕೆ ಅವಕಾಶವಿಲ್ಲ. ಅತಿವೃಷ್ಟಿ ವೇಳೆ ಸಂಭವಿಸಿದ ಹಾನಿಗೆ ಸರಕಾರ ವಿಶೇಷ ಅನುದಾನ ಒದಗಿಸಿದಲ್ಲಿ ಉತ್ತಮ. ಗ್ರಾ.ಪಂ. ವ್ಯಾಪ್ತಿಯ ಯಾವುದಾದರೂ ಯೋಜನೆಗಳಲ್ಲಿ ಫಲಾನುಭವಿಯಾಗಿ ಸೇರಿಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಅತಿವೃಷ್ಟಿಗೆ ಮನೆ ಕಳಕೊಂಡ ಕುಟುಂಬಕ್ಕೆ ದಾನಿಯೊಬ್ಬರು ಮನೆ ನಿರ್ಮಿಸಲು ಜಾಗ ಕೊಡುವುದಾಗಿ ಭರವಸೆ ನೀಡಿದ್ದಾರೆ. ಸ್ಥಳೀಯಾಡಳಿತದಿಂದ ಲಭ್ಯ ನೆರವು ನೀಡಲಾಗುವುದು. ನಿಗಮವೊಂದರ ಅಧಿಕಾರಿಗಳೂ ಭರವಸೆ ನೀಡಿದ್ದಾರೆ.
– ಅಚ್ಯುತ ಗುತ್ತಿಗಾರು
ಗ್ರಾ.ಪಂ. ಅಧ್ಯಕ್ಷರು ಗುತ್ತಿಗಾರು

ನಮ್ಮ ಸಹಾಯಕ್ಕೆ ಬನ್ನಿ
ಮನೆಯಲ್ಲಿ ನಾವಿಬ್ಬರು ವಾಸಿಸುತ್ತಿದ್ದೇವೆ. ಆರ್ಥಿಕವಾಗಿ ಸುದೃಢರಲ್ಲ. ಸರಕಾರದಿಂದ ನಮಗೆ ಹೆಚ್ಚಿನ ಪರಿಹಾರ ದೊರೆತಲ್ಲಿ ನಮ್ಮ ಮುಂದಿನ ಜೀವನಕ್ಕೆ ದಾರಿಯಾಗುತ್ತದೆ.
– ಹೂವಪ್ಪ ಗೌಡ
ಸಂತ್ರಸ್ತರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next