ಕನಕಗಿರಿ: ಸಮೀಪದ ಜೀರಾಳ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದ್ದರಿಂದ ನವಜಾತ ಶಿಶು ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ನಿವಾಸಿ ಕನಕಮ್ಮ ಎಂಬುವವರು ಇತ್ತೀಚಿಗೆ ಮಗುವಿಗೆ ಜನ್ಮ ನೀಡಿದ್ದರು. ಮನೆಯ ಒಳಗಡೆ ಮಲಗಿದ್ದ ಕನಕಮ್ಮನ ತಾಯಿ ಫಕೀರಮ್ಮ ತಿಮ್ಮಣ್ಣ ಬೋವಿ (60) ಸ್ಥಳದಲ್ಲಿಯೇ ಮೃತಪಟಿದ್ದು ಶಿಶು ಆಸ್ಪತ್ರೆ ಕರೆದುಕೊಂಡು ಹೋಗುವಾಗ ರಸ್ತೆಯಲ್ಲಿ ಮೃತ ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಕನಕಮ್ಮನ ಕಾಲು ಮುರಿದಿದ್ದು ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಕನಕಮ್ಮನ ಪತಿ ಮನೆಯ ಹೊರಗಡೆ ಮಲಗಿದ್ದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಎರಡು ದಿನ ಸುರಿದ ಮಳೆಯಿಂದಾಗಿ ಮನೆಯ ಗೋಡೆಗಳು ನೆಂದು ಹೋಗಿದ್ದವು.
ಮಂಗಳವಾರ ಬೀಸಿದ ಜೋರಾದ ಗಾಳಿಯಿಂದಾಗಿ ಮನೆಯ ಚಾವಣಿಗೆ ಹಾಕಲಾಗಿದ್ದ ಸಿಮೆಂಟ್ ಸೀಟುಗಳೊಂದಿಗೆ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿ ಇರುವ ಗೃಹ ಬಳಕೆ ವಸ್ತುಗಳು, ಸೇರಿದಂತೆ ಅನೇಕ ಸಾಮಾನುಗಳಿಗೆ ಹಾನಿಯಾಗಿದೆ. ಆಘಾತಕಾರಿ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದು ಕುಟುಂಬಕ್ಕೆ ಸಾಂತ್ವನ ನೀಡುತ್ತಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒ ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡರು.