ನವದೆಹಲಿ:ಮಾವೋವಾದಿಗಳ ಜತೆ ನಂಟು ಹೊಂದಿರುವ ಆರೋಪದಲ್ಲಿ ಬಂಧಿತರಾಗಿರುವ ಐವರು ಎಡಪಂಥೀಯ ಹೋರಾಟಗಾರರಿಗೆ ಸುಪ್ರೀಂಕೋರ್ಟ್ ಬುಧವಾರ ಮಧ್ಯಂತರ ರಿಲೀಫ್ ನೀಡಿದ್ದು, ಮುಂದಿನ ವಿಚಾರವರೆಗೆ ಗೃಹ ಬಂಧನದಲ್ಲಿ ಇರಿಸುವಂತೆ ಆದೇಶ ನೀಡಿದೆ. ಅಲ್ಲದೇ ಬಂಧನದ ಬಗ್ಗೆ ವಿವರಣೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಬಂಧಿತ ಹೋರಾಟಗಾರರನ್ನು ಸೆಪ್ಟೆಂಬರ್ 5ರವರೆಗೆ ಗೃಹ ಬಂಧನದಲ್ಲಿ ಇರಿಸಿ, ಸೆಪ್ಟೆಂಬರ್ 6ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ಸುಪ್ರಿಂ ಪೀಠ ತಿಳಿಸಿದೆ.
ಭಿನ್ನಾಭಿಪ್ರಾಯ ಎಂಬುದು ಪ್ರಜಾಪ್ರಭುತ್ವದ ರಕ್ಷಣೆಯ ಮೌಲ್ಯ ಇದ್ದಂತೆ. ಒಂದು ವೇಳೆ ಪ್ರತಿರೋಧಕ್ಕೆ ಅವಕಾಶ ಇಲ್ಲದೆ ಹೋದಲ್ಲಿ ಅದು ಪ್ರೆಶರ್ ಕುಕ್ಕರ್ ರೀತಿ ಸ್ಪೋಟಗೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಸುಧಾ ಭಾರದ್ವಾಜ್ ವರವರ ರಾವ್, ಅರುಣ್ ಪಿರೇರಾ. ಗೌತಮ್ ನವಲ್ಖಾ ಮತ್ತು ವೆರ್ನೊನ್ ಗೋನ್ಸಾಲ್ವೆಸ್ ಸೇರಿದಂತೆ ಐವರನ್ನೂ ಕೂಡಲೇ ಬಿಡುಗಡೆ ಮಾಡಬೇಕು ಹಾಗು ಪ್ರತ್ಯೇಕ ತನಿಖೆಗೆ ಆದೇಶಿಸಬೇಕೆಂದು ಕೋರಿ ಖ್ಯಾತ ಇತಿಹಾಸ ತಜ್ಞೆ ರೋಮಿಲಾ ಥಾಪರ್ ಸೇರಿದಂತೆ ಐದು ಮಂದಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಪುಣೆಯಲ್ಲಿ 2017ರಲ್ಲಿ ನಡೆದಿದ್ದ ಕೋರೆಗಾಂವ್-ಭೀಮಾ 200ನೇ ವರ್ಷಾಚರಣೆ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗೋವಾ, ಮುಂಬೈ, ಫರೀದಾಬಾದ್, ಛತ್ತೀಸ್ ಗಢ, ಹೊಸದಿಲ್ಲಿ ಹಾಗೂ ಹೈದರಾಬಾದ್ ನಲ್ಲಿ ಪುಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದರು.