ಮುಂಬೈ: 2023ರ ಸೀಸನ್ ನ ಐಪಿಎಲ್ ಕೂಟದ ಪ್ರಸಾರವನ್ನು ಜಿಯೋ ಸಿನಿಮಾ ಉಚಿತವಾಗಿ ನೀಡಿದ ಬಳಿಕ ಇದೀಗ ಹಾಟ್ ಸ್ಟಾರ್ ಕೂಡಾ ಇದೇ ತಂತ್ರದ ಮೊರೆ ಹೋಗಿದೆ. ಈ ವರ್ಷದ ಪ್ರಮುಖ ಕ್ರಿಕೆಟ್ ಕೂಟಗಳಾದ ಏಷ್ಯಾ ಕಪ್ ಮತ್ತು ವಿಶ್ವಕಪ್ ಕೂಟದ ನೇರಪ್ರಸಾರವನ್ನು ಹಾಟ್ ಸ್ಟಾರ್ ಉಚಿತವಾಗಿ ನೀಡಲಿದೆ.
ಪ್ರಸ್ತುತ ಋತುವಿಗೆ 3.04 ಬಿಲಿಯನ್ ಡಾಲರ್ ಪಾವತಿಸಿದ ನಂತರ ಡಿಸ್ನಿ-ಸ್ಟಾರ್ ಐಸಿಸಿ ಪಂದ್ಯಾವಳಿಗಳ ಡಿಜಿಟಲ್ ಮತ್ತು ಟಿವಿ ಹಕ್ಕುಗಳನ್ನು ಹೊಂದಿದೆ. ಐಪಿಎಲ್ ನಲ್ಲಿ ಜಿಯೋ ಸಿನಿಮಾ ಗಳಿಸಿದ ಯಶಸ್ಸಿನ ನಂತರ ವೀಕ್ಷಕರನ್ನು ಆಕರ್ಷಿಸಲು, ಡಿಸ್ನಿ- ಸ್ಟಾರ್ ಮೊಬೈಲ್ ಬಳಕೆದಾರರಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲು ಮುಂದಾಗಿದೆ. ಆದರೆ ಟಿವಿ ವೀಕ್ಷಕರಿಗೆ, ಈ ಎರಡೂ ಪಂದ್ಯಾವಳಿಗಳು ಉಚಿತವಾಗಿ ಇರುವುದಿಲ್ಲ.
ಇದನ್ನೂ ಓದಿ:ವರ್ಗಾವಣೆಗೊಂಡ ಫಾರ್ಮಸಿ ಅಧಿಕಾರಿ ಹಾಗೂ ಆಂಬುಲೆನ್ಸ್ ಚಾಲಕ ಸೋಮನಗೌಡ.ಸಿ.ಎಂ ಅವರಿಗೆ ಸನ್ಮಾನ
“ಡಿಸ್ನಿ+ ಹಾಟ್ ಸ್ಟಾರ್ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಓಟಿಟಿ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ವೀಕ್ಷಕರ ಅನುಭವವನ್ನು ಹೆಚ್ಚಿಸುವುದನ್ನು ಮುಂದುವರಿಸಲು ನಾವು ಪರಿಚಯಿಸಿದ ವಿವಿಧ ಆವಿಷ್ಕಾರಗಳು ಪ್ರದೇಶದಾದ್ಯಂತ ನಮ್ಮ ಪ್ರೇಕ್ಷಕರನ್ನು ಸಂತೋಷಪಡಿಸಲು ನಮಗೆ ಅವಕಾಶ ಮಾಡಿಕೊಟ್ಟಿವೆ. ಏಷ್ಯಾ ಕಪ್ ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಹೆಚ್ಚಿನ ಪ್ರೇಕ್ಷಕರಿಗೆ ಲಭ್ಯವಾಗುವಂತೆ ಮಾಡುವುದು, ಒಟ್ಟಾರೆ ವ್ಯವಸ್ಥೆಯನ್ನು ಬೆಳೆಸಲು ನಮಗೆ ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ” ಎಂದು ಡಿಸ್ನಿ+ ಹಾಟ್ ಸ್ಟಾರ್ ಮುಖ್ಯಸ್ಥ ಸಜಿತ್ ಶಿವಾನಂದನ್ ಹೇಳಿದ್ದಾರೆ.
ಈ ಬಾರಿಯ ಏಕದಿನ ವಿಶ್ವಕಪ್ ಕೂಟವು ಭಾರತದಲ್ಲಿ ನಡೆಯಲಿದೆ. ಅಕ್ಟೋಬರ್ 5ರಿಂದ ವಿಶ್ವಕಪ್ ಕೂಟ ಆರಂಭವಾಗಲಿದೆ. ಟಿವಿಯಲ್ಲಿ ಈ ಕೂಟ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದೆ. ಇದು ಉಚಿತವಾಗಿ ಇರುವುದಿಲ್ಲ.