Advertisement
ಹೊಟೇಲ್‌ಗಳ ಮೇಲೆ ವಿಧಿಸಲಾಗುತ್ತಿದ್ದ ಜಿಎಸ್‌ಟಿ ಪ್ರಮಾಣದಲ್ಲಿ ಇಳಿಕೆಯಾದ ಬಳಿಕ ಮಂಗಳೂರು ನಗರದಲ್ಲಿ ಗ್ರಾಹಕರಿಗೆ ಎಷ್ಟರಮಟ್ಟಿಗೆ ಪ್ರಯೋಜನವಾಗುತ್ತಿದೆ? ಹೊಟೇಲ್‌ಗಳು ಈಗ ಗ್ರಾಹಕರಿಂದ ಎಷ್ಟು ಹಣ ವಸೂಲಿ ಮಾಡುತ್ತಿವೆ ಎಂಬ ಬಗ್ಗೆ ಉದಯವಾಣಿ “ಸುದಿನ’ವು ರಿಯಾಲಿಟಿ ಚೆಕ್ ನಡೆಸಿದೆ. ಸರಕಾರವು ಜಿಎಸ್‌ಟಿ ದರ ಕಡಿಮೆ ಮಾಡಿದರೂ, ನಗರದ ಕೆಲ ಹೊಟೇಲ್‌ಗಳು ಇನ್ನೂ ಪಾಲನೆ ಮಾಡುತ್ತಿಲ್ಲ ಎಂಬ ವಾಸ್ತವಾಂಶ ಬೆಳಕಿಗೆ ಬಂದಿದೆ. ನಗರದ ಕೆಲವು ಹೊಟೇಲ್‌ಗಳಿಗೆ ಖುದ್ದು ಭೇಟಿ ನೀಡಿದಾಗ, ಶೇ. 18 ಹಾಗೂ ಶೇ. 12 ಜಿಎಸ್‌ಟಿ ಇದ್ದಾಗ ವಸೂಲಿ ಮಾಡುತ್ತಿದ್ದಷ್ಟೇ ದರವನ್ನು ಜಿಎಸ್‌ಟಿ ಇಳಿಕೆಯಾದ ಮೇಲೂ ವಸೂಲಿ ಮಾಡು ತ್ತಿದ್ದವು. ಬಿಲ್‌ನಲ್ಲಿ ಮಾತ್ರ ಜಿಎಸ್‌ಟಿ ಕ್ರಮ ವಾಗಿ ಶೇ. 12 ಹಾಗೂ ಶೇ. 5 ಎಂದು ನಮೂದಾಗುತ್ತಿದ್ದರೂ ಒಟ್ಟು ದರದಲ್ಲಿ ಯಾವುದೇ ಇಳಿಕೆಯಾಗಿಲ್ಲ.
Related Articles
ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ ಈ ಬಗ್ಗೆ ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ‘ಜಿಎಸ್‌ಟಿ ಹೇರಿಕೆಯಾದಾಗಿನಿಂದ ಹೊಟೇಲ್ ವಹಿವಾಟು ಶೇ. 25ರಷ್ಟು ಕಡಿಮೆಯಾಗಿದೆ. ವ್ಯಾಪಾರ ಇನ್ನೂ ಸಮತೋಲನಕ್ಕೆ ಬಂದಿಲ್ಲ. ಈ ಹಿಂದೆ ಜಿಎಸ್‌ಟಿ ಜಾರಿಯಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಕೆಲವು ಹೊಟೇಲ್‌ಗಳಲ್ಲಿ ಹಳೇ ಜಿಎಸ್‌ಟಿ ಮಾದರಿಯಲ್ಲೇ ಗ್ರಾಹಕರಿಂದ ದರ ವಸೂಲಿ ಮಾಡುತ್ತಿರಬಹುದು. ಆದರೆ, ಜಿಎಸ್‌ಟಿ ಇಳಿಕೆಯಾಗಿರಬೇಕಾದರೆ, ಕಾಫಿ -ತಿಂಡಿ ಹಾಗೂ ಎಲ್ಲ ಆಹಾರ ಪದಾರ್ಥಗಳ ದರಗಳಲ್ಲೂ ಸ್ವಲ್ಪ ವ್ಯತ್ಯಾಸವಾಗುತ್ತದೆ. ಹೀಗಿರುವಾಗ, ಹೊಸ ಜಿಎಸ್‌ಟಿ ಪ್ರಮಾಣದ ಆಧಾರದಲ್ಲೇ ಹೊಟೇಲ್ ಮಾಲಕರು ದರ ಪಟ್ಟಿಯನ್ನು ಪರಿಷ್ಕರಿಸಬೇಕು’ ಎಂದರು.
Advertisement
ಸುದಿನ ಕಾಳಜಿಗ್ರಾಹಕರು ಯಾವುದೇ ಹೊಟೇಲ್‌ಗಳಿಗೆ ಹೋದರೂ ಹಣ ಪಾವತಿಸುವ ಮೊದಲು ತಮ್ಮ ಬಿಲ್‌ನಲ್ಲಿ ನಮೂದಿಸಿರುವ ಜಿಎಸ್‌ಟಿ ಪ್ರಮಾಣ ಮತ್ತು ಅದಕ್ಕೆ ವಸೂಲಿ ಮಾಡುವ ಮೊತ್ತವನ್ನು ಪರಿಶೀಲಿಸಬೇಕು. ಒಂದುವೇಳೆ, ಜಿಎಸ್‌ಟಿ ಪ್ರಮಾಣದಲ್ಲಿ ಇಳಿಕೆ ತೋರಿಸಿದ್ದರೂ ಬಿಲ್ ಮೊತ್ತದಲ್ಲಿ ಎಷ್ಟು ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಕೂಡ ಪರಿಶೀಲಿಸಬೇಕು. ಆ ಮೂಲಕ, ಜಿಎಸ್‌ಟಿ ಹೆಸರಿನಲ್ಲಿ ಮೋಸ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದರೆ ಉತ್ತಮ. ಉಢಾಪೆ ಉತ್ತರ
ಕೇಂದ್ರ ಸರಕಾರವು ಜಿಎಸ್‌ಟಿ ಶೇಕಡದಲ್ಲಿ ಕಡಿಮೆ ಮಾಡಿದರೂ, ತಿಂಡಿ ತಿನಿಸುಗಳಿಗೆ ನೀಡುವ ಬೆಲೆಯಲ್ಲಿ ಇಳಿಕೆಯಾಗಲಿಲ್ಲ. ಈ ಬಗ್ಗೆ ಹೊಟೇಲ್ ಮಾಲಕರಲ್ಲಿ ಕೇಳುವಾಗ, ಈ ಹಿಂದೆ ಜಿಎಸ್‌ಟಿ ಆಧರಿತ ಬಿಲ್ ನೀಡುತ್ತಿರಲಿಲ್ಲ. ಗ್ರಾಹಕರಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡುತ್ತಿದ್ದೆವು ಎಂಬ ಉಢಾಪೆ ಮಾತನಾಡುತ್ತಾರೆ.
– ಪ್ರದೀಪ್ ಕುಮಾರ್, ಹೊಟೇಲ್ ಗ್ರಾಹಕ ವಂಚನೆ ಸರಿಯಲ್ಲ
ನಗರದಲ್ಲಿರುವ ಎಲ್ಲ ಹೊಟೇಲ್‌ಗಳು ಸಾರ್ವಜನಿಕರಿಗೆ ಸೇವೆ ನೀಡಬೇಕೇ ವಿನಃ ವಂಚಿಸಬಾರದು. ಕೇಂದ್ರ ಸರಕಾರವು
ಜಿಎಸ್‌ಟಿ ದರ ಪರಿಷ್ಕರಣೆ ಮಾಡಿದ ಬಳಿಕ ಯಾವುದೇ ಹೊಟೇಲ್‌ಗಳು ಗ್ರಾಹಕರಿಗೆ ವಂಚಿಸುತ್ತಿದ್ದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸದ್ಯದಲ್ಲೇ ಈ ಬಗ್ಗೆ ಹೊಟೇಲ್ ಮಾಲಕರಿಗೆ ಮನವರಿಕೆ ಮಾಡಿಕೊಡುವೆ.
– ಕುಡ್ಪಿ ಜಗದೀಶ ಶೆಣೈ, ಹೊಟೇಲ್
ಮಾಲಕರ ಸಂಘದ ಅಧ್ಯಕ್ಷ, ಮಂಗಳೂರು ಅನುಕೂಲ ಮಾಡಿಕೊಡಿ
ಹೊಟೇಲ್‌ಗಳ ತಿಂಡಿ-ತಿನಿಸುಗಳಲ್ಲಿ ಹೆಚ್ಚಿನ ಏರಿಕೆಯಾಗಿದೆ. ಜಿಎಸ್‌ಟಿ ಬರುವುದಕ್ಕೂ ಮೊದಲು 10 ರೂಪಾಯಿಗೆ ಸಿಗುತ್ತಿದ್ದ ಟೀ, ಕಾಫಿ ಏಕಾಏಕಿ 12ರಿಂದ 25 ರೂ.ವರೆಗೆ ಏರಿದೆ. ಇದೀಗ ಕೇಂದ್ರ ಸರಕಾರ ಜಿಎಸ್‌ಟಿ ದರ ಇಳಿಸಿದ್ದರೂ ಕೆಲವು ಹೊಟೇಲ್‌ಗಳಲ್ಲಿ ದರ ವ್ಯತ್ಯಾಸ ಮಾಡಲಿಲ್ಲ. ಕೆಲ ಹೊಟೇಲ್‌ಗಳಲ್ಲಿ ಖಾದ್ಯಗಳಿಗೆ ನಾಮ ಫಲಕಗಳಲ್ಲಿ ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ವಸೂಲಿ ಮಾಡುತ್ತಿದ್ದಾರೆ. ಜಿಎಸ್‌ಟಿ ಹೆಸರಿನಲ್ಲೂ ಕೆಲವು ಹೊಟೇಲ್‌ಗಳಲ್ಲಿ ಹೆಚ್ಚಿನ ದರವಿದ್ದು, ಕೂಡಲೇ ಹೊಟೇಲ್‌ಗಳು ಹೊಸ ಜಿಎಸ್‌ಟಿ ಪ್ರಮಾಣಕ್ಕೆ ತಕ್ಕಂತೆ ತಮ್ಮ ದರ ಪಟ್ಟಿಯನ್ನು ಪರಿಷ್ಕರಿಸಿ ಜನರಿಗೆ ಅನುಕೂಲ ಮಾಡಬೇಕು.
– ಚಂದ್ರಶೇಖರ ಪೂಜಾರಿ, ಗ್ರಾಹಕ ನವೀನ್ ಭಟ್ ಇಳಂತಿಲ