Advertisement
ಎ. 30ರ ವರೆಗೆ ಹೊಟೇಲ್, ಬಾರ್, ರೆಸ್ಟೊರೆಂಟ್‌ಗಳನ್ನು ಮುಚ್ಚುವ ರಾಜ್ಯ ಸರಕಾರದ “ಹೊಟೇಲ್ ಉದ್ಯಮ ವಿರೋಧಿ ನೀತಿ’ಯ ವಿರುದ್ಧ ಗುರುವಾರ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ಮುಂಬಯಿಯ 25 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಸಹಿತ ರಾಜ್ಯಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಹೊಟೇಲಿಗರು ಕೈಜೋಡಿಸಿದ್ದರು.
Related Articles
Advertisement
ರಾಜ್ಯದ ಎಲ್ಲ ಹೊಟೇಲ್ ಸಂಘಟನೆಗಳ ಬಲ :
ನಗರದ ಹೊಟೇಲಿಗರ ಪ್ರಮುಖ ಸಂಘಟನೆಯಾಗಿರುವ “ಆಹಾರ್’ ಸಂಘಟನೆಯು ಅಧ್ಯಕ್ಷ ಶಿವಾನಂದ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ಎಲ್ಲ ಹೊಟೇಲ್ ಸಂಘಟನೆಗಳನ್ನು ಒಗ್ಗೂಡಿಸಿ ಎ. 6ರಂದು ಬಂಟರ ಸಂಘದಲ್ಲಿ ಸಭೆ ನಡೆಸಿದ್ದು, ವಿವಿಧ ನಗರಗಳ ಸುಮಾರು 25 ಹೊಟೇಲ್ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ಗುರುವಾರದ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿ ಯಶಸ್ಸನ್ನು ಕಂಡಿದ್ದಾರೆ. ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಹೊಟೇಲಿಗರು ಶೀಘ್ರದಲ್ಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ. ಹಲವು ಹೊಟೇಲ್ ಉದ್ಯಮಿಗಳು ಸರಕಾರದ ಮಲತಾಯಿ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರು-ಹೊಟೇಲಿಗರ ಸಮಸ್ಯೆಗಳಿಗೆ ಯಾರು ಹೊಣೆ :
ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೊಟೇಲಿಗರು ವ್ಯವಹಾರ ನಡೆಸುತ್ತಿದ್ದರು. ಈ ಮಧ್ಯೆ ಏಕಾಏಕಿ ಮತ್ತೆ ಹೊಟೇಲ್‌ಗಳನ್ನು ಮುಚ್ಚುವಂತೆ ಸರಕಾರ ಆದೇಶಿಸಿರುವುದು ಹೊಟೇಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಲಾಕ್‌ಡೌನ್ ಮುನ್ನ ಹೊಟೇಲ್ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸರಕಾರ ಸಂವಹನ ನಡೆಸಿಲ್ಲ. ಹೊಟೇಲ್ ಕಾರ್ಮಿಕರಿಗೆ ವೇತನ, ಬಾಡಿಗೆ ಶುಲ್ಕ, ಲೈಸನ್ಸ್ ಶುಲ್ಕ ಭರಿಸುವುದು ಯಾರು ಎಂಬುದನ್ನು ಸರಕಾರ ಸೂಚಿಸಿಲ್ಲ. ಹಿಂದಿನ ಲಾಕ್‌ಡೌನ್ ಸಂದರ್ಭದಲ್ಲೂ ಹೊಟೇಲಿಗರು ಮತ್ತು ಕಾರ್ಮಿಕ ವರ್ಗಕ್ಕೆ ತುಂಬಾ ಅನ್ಯಾಯವಾಗಿದ್ದು, ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ ತಿಳಿಸಿದ್ದಾರೆ.
ಸರಕಾರಿ ನೌಕರರಿಗೆ ವೇತನ ನೀಡಬೇಡಿ :
ಲಾಕ್‌ಡೌನ್ ಸಂದರ್ಭ ಹೊಟೇಲಿಗರಿಂದ ಎಲ್ಲ ರೀತಿಯ ಶುಲ್ಕಗಳನ್ನು ಸರಕಾರ ಕಡ್ಡಾಯವಾಗಿ ಪಡೆದು ಸರಕಾರಿ ನೌಕರರಿಗೆ ವೇತನ ನೀಡುತ್ತಿದೆ. ಸರಕಾರಿ ನೌಕರರ ವೇತನವನ್ನು 6-7 ತಿಂಗಳುಗಳ ಕಾಲ ನೀಡುವುದನ್ನು ನಿಲ್ಲಿಸಿ. ಆಗ ಅವರಿಗೂ ಲಾಕ್‌ಡೌನ್ ಕಷ್ಟ ಏನು ಎಂಬುವುದು ಅರಿವಾಗುತ್ತದೆ. ಕೊರೊನಾ ಹೆಸರಿನಲ್ಲಿ ಹೊಟೇಲ್ ಮತ್ತು ವ್ಯಾಪಾರಿ ವರ್ಗದವರ ಮೇಲೆ ದಬ್ಟಾಳಿಕೆ ನಡೆಸುವುದು ಸುಲಭವಾಗಿದೆ. ಕೊರೊನಾ ಬಗ್ಗೆ ನಮಗೂ ಭಯವಿದೆ. ನಾವು ಮನೆಯಲ್ಲಿದ್ದು ಕೊರೊನಾ ಚಿಕಿತ್ಸೆ ಪಡೆದಿದ್ದೇವೆ. ಒಂದು ಕಡೆ ಹೊಟೇಲಿಗರಿಗೆ ಸರಕಾರ ಯಾವುದೇ ರಿಯಾಯಿತಿ ನೀಡುವುದಿಲ್ಲ. ಇನ್ನೊಂದೆಡೆ ವ್ಯವಹಾರ ಮಾಡುವ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಅನ್ಯಾಯವಾಗಿದೆ ಎಂದು ಹೊಟೇಲ್ ಉದ್ಯಮಿ ಸಂತೋಷ್ ಪುತ್ರನ್ ಹೇಳಿದ್ದಾರೆ.
ಮಿಷನ್ ರೋಜಿ ರೋಟಿ ಅಭಿಯಾನ :
ಸರಕಾರದ ಮಲತಾಯಿ ಧೋರಣೆಯಿಂದ ಕೆಲಸ ಕಳೆದುಕೊಂಡಿರುವ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಲು ಪ್ರಾರಂಭಿಸಿದ್ದು, ಇದು 2020ರ ಪುನರಾವರ್ತನೆಯಾದಂತಾಗಿದೆ. ಲಕ್ಷಾಂತರ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದಾರೆ. ಹೊಟೇಲಿಗರು ಕಾರ್ಮಿಕರಿಗೆ ಮನೆ ಮತ್ತು ನಿಯಮಿತ ವೇತನ ನೀಡುವ ಸ್ಥಿತಿಯಲ್ಲಿಲ್ಲ. ಕಳೆದ ವರ್ಷ ಏಳು ತಿಂಗಳ ಲಾಕ್‌ಡೌನ್ ಬಳಿಕ ಅನೇಕ ಹೊಟೇಲಿಗರು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಸಾಲ ಪಡೆದಿದ್ದು, ಅದನ್ನು ಮರುಪಾವತಿ ಮಾಡಲು ಹರಸಾಹಸ ಪಡುವುದರೊಂದಿಗೆ ಈ ವರೆಗೆ 15ಕ್ಕೂ ಹೆಚ್ಚು ಹೊಟೇಲ್ ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಸ್ತುತ ಹೊಟೇಲ್ ಉದ್ಯಮವನ್ನು ಉಳಿಸಲು “ಯುನೈಟೆಡ್ ಹಾಸ್ಪಿಟಾಲಿಟಿ ಫೋರಂ ಆಫ್ ಮಹಾರಾಷ್ಟ್ರ’ ಸಂಘಟನೆಯು “ಮಿಷನ್ ರೋಜಿ ರೋಟಿ ಅಭಿಯಾನ’ ವನ್ನು ಪ್ರಾರಂಭಿಸಲು ಮುಂದಾಗಿದೆ.
ಹೊಟೇಲ್ ಉದ್ಯಮಿ ಮೇಲೆ ಪೊಲೀಸರ ಹಲ್ಲೆಗೆ ಖಂಡನೆ :
ಮಂಗಳವಾರ ದಹಿಸರ್ ಪೂರ್ವದ ಹನುಮಾನ್ ಹೊಟೇಲ್‌ಗೆ ನುಗ್ಗಿ ಹೊಟೇಲ್ ಮಾಲಕ ಧೀರಾಜ್ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆಗೈದ ಪಾನಮತ್ತ ಪೋಲಿಸ್ ಜಗ್‌ತಪ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ್ ಆಗ್ರಹಿಸಿದೆ. ವಲಯ 10ರ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಮತ್ತು ಮಾಜಿ ಕಾರ್ಯಾಧ್ಯಕ್ಷರಾದ ಎರ್ಮಾಳ್ ಹರೀಶ್ ಶೆಟ್ಟಿ ಮತ್ತು ರವೀಂದ್ರ ಎಸ್. ಶೆಟ್ಟಿ ನಿಯೋಗವು ಜಿಲ್ಲಾಧಿಕಾರಿ ಮಿಲಿಂದ್ ಬೋರೆಕರ್, ಹೆಚ್ಚುವರಿ ಪೋಲಿಸ್ ಆಯುಕ್ತ ದಿಲೀಪ್ ಸಾವಂತ್, ವಲಯ 12ರ ಉಪ ಪೋಲಿಸ್ ಆಯುಕ್ತ ಡಿ.ಎಸ್. ಸ್ವಾಮಿ ಇವರಿಗೆ ಮನವಿ ಸಲ್ಲಿಸಿದೆ. ಉತ್ತರ ಮುಂಬಯಿ ಸಂಸದ ಗೋಪಾಲ್ ಸಿ. ಶೆಟ್ಟಿ, ಶಾಸಕ ಸುನೀಲ್ ರಾಣೆ ಇವರು ಹೊಟೇಲ್ ಮಾಲಕರ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ. ಸಮವಸ್ತ್ರವಿಲ್ಲದೆ ಜಗ್‌ತಪ್ ಹೊಟೇಲ್‌ನ ಶಟರ್ ಮೇಲೆತ್ತಿ ಏಕಾಏಕಿ ಒಳನುಗ್ಗಿ ಮಾಲಕನ ಕಾಲರ್‌ಪಟ್ಟಿ ಹಿಡಿದು ಹೊರಕ್ಕೆಳೆದು ಕಪಾಳಮೋಕ್ಷ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.