ಹಿಂಸೆಯ ಬಣ್ಣ ಯಾವುದೆಂದರೆ ಕೆಂಪು ಎಂದಷ್ಟೇ ಹೇಳಬೇಕು. ರಕ್ತದ ಬಣ್ಣವೂ ಕೆಂಪೇ. ಆದರೆ ಹಿಂಸೆಯ ಬಣ್ಣವೂ ಕೆಂಪೇ. ಜನಾಂಗೀಯ ಹತ್ಯೆಗಳಂಥ ಅಪಸವ್ಯಗಳು ಇಂದಿಗೂ ಕೊನೆಗೊಂಡಿಲ್ಲ. ಅದು ಕಾಶ್ಮೀರದ ಒಂದು ನಿರ್ದಿಷ್ಟ ಸಮುದಾಯದವರ ಹತ್ಯೆ ಇರಬಹುದು, ಒಂದು ಜನಾಂಗದ ಹತ್ಯೆ ಇರಬಹುದು. ಪರಿಣಾಮ ಒಂದೇ-ಸಾವು ಮತ್ತು ಹಿಂಸೆ. ಜನಾಂಗೀಯ ಹತ್ಯೆ, ನರಮೇಧಗಳನ್ನು ಎಷ್ಟು ಖಂಡಿಸಿದರೂ ಕಡಿಮೆಯೇ.
ಹಾಗೆಯೇ ಹಿಂಸೆಯನ್ನು ತಡೆಯಲು ಪ್ರತಿಯೊಬ್ಬನೂ ತನ್ನ ತನ್ನ ಮಟ್ಟದಲ್ಲೂ ಪ್ರಯತ್ನಿಸಬೇಕು. ಅಂಥದೊಂದು ಪ್ರಯತ್ನದಿಂದ ಒಂದಿಷ್ಟು ಜೀವಗಳನ್ನು ಉಳಿಸಲೂ ಸಾಧ್ಯ. ಹಲವು ಬಾರಿ ಇಂಥ ಸಂಕಷ್ಟದ ಹೊತ್ತಿನಲ್ಲಿ ನಾವು ಅಸಹಾಯಕರಾಗಿ ಬಿಡುತ್ತೇವೆ. ಹಿಂಸಾಪೀಡಕರೂ ಅದನ್ನೇ ಬಯಸುತ್ತಿರುತ್ತಾರೆ. ಇಂಥ ಸಂದರ್ಭವನ್ನು ಬಳಸಿಕೊಂಡು ವಿಜೃಂಭಿಸಲೆತ್ನಿಸುತ್ತಾರೆ.
ಕ್ಲಿಷ್ಟ ಸನ್ನಿವೇಶದಲ್ಲೂ ಅಸಹಾಯಕತೆಗೆ ಬಲಿಯಾಗದೇ ತಮ್ಮ ಬುದ್ಧಿ ಮತ್ತು ಪರಿಶ್ರಮ ಬಳಸಿಕೊಂಡು ಪರಿಸ್ಥಿತಿಗೆ ಎದುರು ನಿಂತವರ, ಸೆಡ್ಡು ಹೊಡೆದವರ ಹಾಗೂ ಗೆದ್ದವರ ಹತ್ತಾರು ಸ್ಫೂರ್ತಿ ಕಥೆಗಳಿವೆ.
ರುವಾಂಡಾದಲ್ಲಿ ನಡೆದ ಹತ್ಯಾಕಾಂಡದ ಸಂದರ್ಭ ಒಂದು ಹೋಟೆಲಿನ ವ್ಯವಸ್ಥಾಪಕ [ಮ್ಯಾನೇಜರ್ Paul Rusesabagina] ನೊಬ್ಬ ಕಠಿಣ ಪರಿಸ್ಥಿತಿಗೆ ಎದುರುನಿಂತು ಸುಆಮರು 1,200 ಮಂದಿಯ ಜೀವವನ್ನು ಉಳಿಸಿದ ಸತ್ಯಕಥೆಯೊಂದಿದೆ. 1994 ರ ಎಪ್ರಿಲ್ 7 ರಿಂದ ಜುಲೈ 15 ರವರೆಗೆ ರುವಾಂಡಾದಲ್ಲಿ ನಡೆದ ನರಮೇಧ ಒಂದು ಕರಾಳ ಅಧ್ಯಾಯ. ಈ ಅವಧಿಯಲ್ಲಿ ರುವಾಂಡನ್ ಪೇಟ್ರೀಯಾಟಿಕ್ ಫ್ರಂಟ್ ಎನ್ನುವ ಸಂಘಟನೆಯ ಬಂಡುಕೋರರು [ಬಹುತೇಕ ಟುಟ್ಸಿ ಜನಾಂಗಕ್ಕೆ ಸೇರಿದವರು] ಅಲ್ಪಸಂಖ್ಯಾತ ಸಮುದಾಯವಾದ ಟುಟ್ಸಿ ಜನಾಂಗದವರನ್ನು ಹುಡುಕಿ ಹುಡುಕಿ ಕೊಂದರು. ನೂರು ದಿನಗಳಲ್ಲಿ ಸುಮಾರು ಎಂಟು ಲಕ್ಷ ಮಂದಿ ಟುಟ್ಸಿ ಜನಾಂಗದವರನ್ನು ಕೊಲ್ಲಲಾಯಿತೆಂದು ಅಂದಾಜಿಸಲಾಗಿತ್ತು. ಇದರೊಂದಿಗೆ ಉದಾರ ನಿಲುವಿನ ಹುಟು ಜನಾಂಗದವರನ್ನೂ ಕೊಲ್ಲಲಾಯಿತು. ಒಟ್ಟೂ ಲೆಕ್ಕದ ಪ್ರಕಾರ ಈ ನರಮೇಧದಲ್ಲಿ ಹನ್ನೊಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಯಿತು. ಈ ಹಿನ್ನೆಲೆಯಲ್ಲಿ ಅರಳಿಕೊಂಡ ಕಿಗಾಲಿಯ ಹೋಟೆಲ್ ಮ್ಯಾನೇಜರ್ ನೊಬ್ಬನ ಶೌರ್ಯದ ಕಥೆಯನ್ನು 2004 ರಲ್ಲಿ ಸಿನಿಮಾವಾಗಿ ಬೆಳ್ಳಿ ತೆರೆಗೆ ಬಂದಿತು. ಹಾಗಾಗಿ ಹೋಟೆಲ್ ರುವಾಂಡಾ ಆ ನರಮೇಧದ ಕಥೆಯಲ್ಲ. ಆ ಕಾರ್ಮೋಡದಲ್ಲೂ ಭರವಸೆಯ ಬೆಳಕು ಬೀರಿದ ಹೋಟೆಲ್ ಮ್ಯಾನೇಜರ್ ನ ಕಥೆ.
ಟೆರ್ರಿ ಜಾರ್ಜ್ [Terry George) ನಿರ್ದೇಶಿಸಿದ ಸಿನಿಮಾವಿದು. ಚಿತ್ರಕಥೆ ಕೀರ್ ಪಿಯರಸನ್ [Kier Pearson) ಮತ್ತು ಟೆರ್ರಿ ಹೆಣೆದಿದ್ದರು. ಡೊನಾಲ್ಡ್ ಫ್ರಾಂಕ್ ಚೆದಲ್ [Donald Frank Cheadle), ಸೋಫಿ ಒಕೆನೊಡೊ [Sophie Okonedo), ಜಾಕ್ವಿನ್ ರಫೇಲ್ ಫೀನಿಕ್ಸ್ [Joaquin Rafeal phoenix) ಹಾಗೂ ನಿಕ್ ನೋಲ್ [Nicky Nolte) ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದರು. ಹೋಟೆಲ್ ಮ್ಯಾನೇಜರ್ Paul Rusesabagina ಆಗಿ ಪಾತ್ರವನ್ನು ನಿರ್ವಹಿಸಿದ್ದು ಡೊನಾಲ್ಡ್ ಫ್ರಾಂಕ್.
ಪೌಲ್ ಅತ್ಯಂತ ಧೈರ್ಯವಂತನಷ್ಟೇ ಅಲ್ಲ, ಚಾಣಾಕ್ಷ ಕೂಡ. ಯಾವುದು ಎಲ್ಲಿ ಕೆಲಸ ಮಾಡಬಲ್ಲದು? ಹೇಗೆ ಯಾರೊಂದಿಗೆ ವರ್ತಿಸಿದರೆ ಕೆಲಸವಾಗುತ್ತದೆ? ಎಲ್ಲಿ ತಾಳ್ಮೆ ಬೇಕು? ಎಲ್ಲಿ ಪೌರುಷ? – ಹೀಗೆ ಎಲ್ಲವನ್ನೂ ಅರಿತುಕೊಂಡು ವಾಸ್ತವದ ನೆಲೆಯಲ್ಲೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲಂಥ ಮ್ಯಾನೇಜರ್. ಅವನು ಹುಟು ಜನಾಂಗಕ್ಕೆ ಸೇರಿದವ. ಆದರೆ ಟುಟ್ಸಿ ಜನಾಂಗಕ್ಕೆ ಸೇರಿದ ಟಟಿಯಾನಳನ್ನು [Sophie okonedo) ಮದುವೆಯಾಗಿದ್ದ. ಬೇರೆ ದೇಶಗಳಲ್ಲಿ ತರಬೇತಿ ಪಡೆದು ಕಿಗಾಲಿಯ ಹೋಟೆಲ್ ನಲ್ಲಿ ಮ್ಯಾನೇಜರ್ ಆಗಿದ್ದ. ಜತೆಗೆ ದೇಶದ ಆಗುಹೋಗುಗಳನ್ನೂ ಚೆನ್ನಾಗಿ ಅರಿತಿದ್ದ. ರಾಜಕೀಯ ನೆಲೆಗಳಲ್ಲೂ ಅವನಿಗೆ ಆಸಕ್ತಿ ಮತ್ತು ಅರಿವಿತ್ತು. ಇವೆಲ್ಲವನ್ನೂ ಪರಿಸ್ಥಿತಿಗೆ ತಕ್ಕಂತೆ ಬಳಸಿಕೊಂಡು ಬದುಕಿದ್ದ.
ಒಂದು ದಿನ ಇದ್ದಕ್ಕಿದ್ದಂತೆ ಜನಾಂಗೀಯ ಕಲಹ ಮುಗಿಲು ಮುಟ್ಟಿತು. ಬಹಳ ವರ್ಷಗಳ ಮೇಲೆ ಅತಿರೇಕಕ್ಕೆ ಹೋಯಿತು. ಇವನು ಎಣಿಸಿದ್ದಕ್ಕಿಂತ ಭೀಕರವಾಗಿತ್ತು. ಬಂಡುಕೋರರು ಎಲ್ಲರನ್ನೂ ಕೊಲ್ಲತೊಡಗಿದ್ದರು. ಈ ಹೊತ್ತಿನಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿ [ನಿಕ್ ನೊಲೆ] ತಮ್ಮ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಎಲ್ಲವನ್ನೂ ವಿವರಿಸಿ ಸಹಾಯ ಕೋರಿದರೂ ಪ್ರಯೋಜನವಾಗಲಿಲ್ಲ. ಮ್ಯಾನೇಜರ್ ಸಹ ತನ್ನ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದ. ಆ ಕಡೆಯಿಂದ ಯಾವ ಉತ್ತರವೂ ಸಿಗಲಿಲ್ಲ. ಅನಿವಾರ್ಯವಾಗಿ ಇವರಿಬ್ಬರೇ [ಮ್ಯಾನೇಜರ್ ಮತ್ತು ವಿಶ್ವಸಂಸ್ಥೆಯ ಪ್ರತಿನಿಧಿ] ತಮ್ಮ ಕೈಲಾದದ್ದನ್ನು ಮಾಡಲೇಬೇಕಾದ ಅನಿವಾರ್ಯ ಸ್ಥಿತಿಗೆ ದೂಡಲ್ಪಟ್ಟರು.
ಆಗ ಅವರಿಬ್ಬರೂ, ಅದರಲ್ಲೂ ಮ್ಯಾನೇಜರ್ ಹೇಗೆ ಒಂದು ಸಾವಿರದ ಇನ್ನೂರಕ್ಕೂ ಹೆಚ್ಚು ಮಂದಿಯನ್ನು ಉಳಿಸಲು ಹೆಣಗಾಡಿದರು ಎಂಬುದೇ ಸಿನಿಮಾ. ಇದು ಸತ್ಯಘಟನೆಯಾದ ಕಾರಣ ಕಥೆ ಹೇಳಿದರೆ ಅಷ್ಟೊಂದು ಪ್ರಯೋಜನವಾಗದು. ಆ ಕ್ಷಣಗಳನ್ನು ನೋಡಿಯೇ ತಿಳಿಯಬೇಕು.
ಟೊರೊಂಟೊದಲ್ಲಿ ಈ ಸಿನಿಮಾವನ್ನು ಮೊದಲ ಬಾರಿಗೆ ಪ್ರದರ್ಶಿಸಿದಾಗ ಕೆಲವರು ಟೀಕಿಸಿದ್ದೂ ಉಂಟು. ಅವರ ಟೀಕೆಯ ಪ್ರಮುಖ ಕೇಂದ್ರ ಏನಾಗಿತ್ತು ಎಂದರೆ, ‘ಈ ಸಿನಿಮಾ ಒಟ್ಟೂ ಜನಾಂಗೀಯ ಹತ್ಯೆ ಕುರಿತು ಏನನ್ನೂ ಹೇಳುವುದಿಲ್ಲ. ಚಿತ್ರ ಪೂರ್ತಿ ಇಬ್ಬರ, ಮುಖ್ಯವಾಗಿ ಹೋಟೆಲ್ ಮ್ಯಾನೇಜರ್ ನ ಸುತ್ತ ಆವರಿಸಿಕೊಂಡಿದೆ. ಅತ್ಯಂತ ಕ್ರೂರವಾದ ಹತ್ಯಾಕಾಂಡದ ಕುರಿತು ಸಣ್ಣದಾಗಿ ತೋರಿಸಲಾಗಿದೆ’ ಎಂಬುದು.
ಆದರೆ ಸಿನಿಮಾ ಬಹಳಷ್ಟು ಜನರಿಗೆ ಇಷ್ಟವಾಗಿದ್ದು ಒಂದೇ ಕಾರಣಕ್ಕೆ. ಅದೆಂದರೆ, ’ಸಿನಿಮಾ ನಡೆದ ಪರಿ ಸರಿಯಾಗಿದೆ. ಹತ್ಯಾಕಾಂಡದ ಬಗ್ಗೆ ಹೇಳುವುದಕ್ಕಿಂತಲೂ ಆ ಕ್ಲಿಷ್ಟ ಪರಿಸ್ಥಿತಿಯಲ್ಲಿ ಯಾರು ಹೇಗೆ ನಡೆದುಕೊಂಡರು, ಪ್ರತಿಕ್ರಿಯಿಸಿದರು, ಸ್ಪಂದಿಸಿದರು’ ಎನ್ನುವುದೇ ಮುಖ್ಯ ಎಂಬುದು ಹಲವರ ವಾದವಾಗಿತ್ತು.
ಹೌದು, ಹಲವು ಬಾರಿ ಇಂಥ ಚಿತ್ರಗಳನ್ನು ಸಾಕ್ಷ್ಯಚಿತ್ರದ ಮಾದರಿಯಲ್ಲಿ ಮಾಡಿ ಮುಗಿಸುವುದಿದೆ. ಆಗ ಕಾರ್ಮೋಡದ ಮಧ್ಯೆಯೂ ಕಂಡ ಭರವಸೆಯ ಗೆರೆಗಳು ಕಾಣುವುದೇ ಇಲ್ಲ. ಅವೂ ಆ ಕಪ್ಪಿನ ಗಾಢತೆಯಲ್ಲಿ ಮುಳುಗಿ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ನೋಡುವಾಗ ನಿರ್ದೇಶಕ ಟೆರ್ರಿಯ ಆಯ್ಕೆ ಸಮಂಜಸವಾಗಿಯೇ ತೋರುತ್ತದೆ.
ಇಡೀ ಚಿತ್ರದಲ್ಲಿ ಒಂದು ಓಘವನ್ನು ಕಾದುಕೊಳ್ಳಲು ಮಹತ್ವ ಕೊಟ್ಟಿರುವುದು ಸ್ಪಷ್ಟ. ತಾಂತ್ರಿಕವಾಗಿ ಛಾಯಾಗ್ರಹಣ [ರಾಬರ್ಟ್ ಫ್ರೈಸ್] ವೂ ಗಮನ ಸೆಳೆಯುತ್ತದೆ. ಸಂಕಲನ ಮತ್ತು ಸಂಗೀತವೂ ಸಿನಿಮಾದ ಯಶಸ್ವಿಗೆ ಸಹಾಯ ಮಾಡುತ್ತದೆ. ಡೊನಾಲ್ಡ್ ಮತ್ತು ಸೋಫಿಯ ಅಭಿನಯ ನೈಜತೆಯ ಬಣ್ಣದಲ್ಲಿ ಮಿಂದಿದೆ. ಇಬ್ಬರ ಅಭಿನಯದ ನಡುವಿನ ಪೈಪೋಟಿ ಸಿನಿಮಾವನ್ನು ಮುನ್ನಡೆಸುತ್ತದೆ. ಡೊನಾಲ್ಡ್ ರ ಅಭಿನಯ ಚಿತ್ರವನ್ನು ಹಿಡಿದಿಡುವಂಥದ್ದು. ಇವರಿಬ್ಬರ ನಟನೆ ಆಸ್ಕರ್ ಪ್ರಶಸ್ತಿಗೂ ನಾಮ ನಿರ್ದೇಶನ ಗೊಂಡಿತ್ತು.
ಚಿತ್ರವೆಂಬುದು ಭೀಕರತೆಯ ಗಡಿಯನ್ನು ಅಷ್ಟಾಗಿ ದಾಟುವುದಿಲ್ಲ. ನರಮೇಧದ ವಿವರಗಳನ್ನು ನಮ್ಮ ಮುಂದೆ ಸುರಿಯುವ ಚಿತ್ರದಂತಾಗದಿರುವುದು, ಮಾನವೀಯ ಕಳಕಳಿಯ ಬಣ್ಣ ಇಡೀ ಚಿತ್ರದಲ್ಲಿ ಉಳಿಯುವಂತೆ ಮಾಡಿದೆ. ಇದರರ್ಥ ನರಮೇಧವನ್ನು ಹೆಚ್ಚಾಗಿ ಚಿತ್ರಿಸದಿದ್ದುದು ಅಥವಾ ಕಥೆಯ ಎಳೆ ಸಂಪೂರ್ಣ ಅದರ ಹಿಡಿತಕ್ಕೆ ಹೋಗದಿದ್ದುದು ಒಳ್ಳೆಯದಾಯಿತು ಎಂದಲ್ಲ. ಆದರೆ, ಸಿನಿಮಾದಲ್ಲಿನ ಹೇಳಬಹುದಾದ ಮತ್ತೊಂದು ಕೋನ ಹಾಗೂ ಹೇಳಲೇಬೇಕಾದ ಮನುಷ್ಯ ಪ್ರಯತ್ನಕ್ಕೆ ಕೇಂದ್ರೀಕರಿಸಿದ್ದು ಸಿನಿಮಾ ಇಷ್ಟವಾಗುವಂತೆ ಮಾಡುತ್ತದೆ.
ಒಂದು ಒಳ್ಳೆಯ ಚಿತ್ರ. ವಿವಿಧ ವಿಭಾಗಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಚಿತ್ರ ಬಿಡುವುದಾಗ ನೋಡಿ.
– ಅರವಿಂದ ನಾವಡ