Advertisement

ಲೆಕ್ಚರರ್‌ಗೆ ಹೋಟೆಲ್‌ ಮಾಣಿಯ ಪಾಠ;ಸಣ್ಣವರ ಮಾತಿನಲ್ಲಿದೆ ದೊಡ್ಡತನ

06:15 AM Aug 08, 2017 | |

ಸೂಟು- ಬೂಟು ಧರಿಸಿದ ಲೆಕ್ಚರರೊಬ್ಬರು, ಸಾಮಾನ್ಯ ಬಸ್ಸಿನಲ್ಲಿ ಹುಬ್ಬಳ್ಳಿಯಿಂದ- ಮಂಗಳೂರಿಗೆ ಹೊರಡುತ್ತಾರೆ. ಆ ಪಯಣದಲ್ಲಿ ಅವರಿಗೆ ಜೀವನದ ಪಾಠವೊಂದು ಸಿಗುತ್ತೆ. ಜಗತ್ತಿನ ಯಾವ ಯೂನಿವರ್ಸಿಟಿ ಪಠ್ಯದಲ್ಲೂ ಇರದ ಪಾಠ ಅದು!

Advertisement

ಹುಬ್ಬಳ್ಳಿಯ ಪ್ರಾಧ್ಯಾಪಕರೊಬ್ಬರು ಕೆಲಸ ನಿಮಿತ್ತ ಒಂದು ದಿನದ ಮಟ್ಟಿಗೆ ಮಂಗಳೂರಿಗೆ ಹೊರಟಿದ್ದರು. ಸೂಟು- ಬೂಟು ಧರಿಸಿ, ತುಸು ಧಿಮಾಕಿನಲ್ಲಿಯೇ ಹೊರಟಿದ್ದ ಅವರಿಗೆ ಸಿಕ್ಕಿದ್ದು ಮಾಮೂಲಿ ಕೆಂಪು ಬಸ್ಸು. ಆ ಬಸೊ ಬಹುತೇಕ ಭರ್ತಿ. ಮೂಗು ಕೆಂಪಗೆ ಮಾಡಿಕೊಂಡು, ಸೀದಾ ಹಿಂಭಾಗಕ್ಕೆ ಹೋದರು. ಕೊನೆಯ ಸಾಲಿನ ಸೀಟಿನಲ್ಲಿ ಜೋಳದ ರೊಟ್ಟಿಯ ಚೀಲಗಳಿದ್ದವು. “ಥತ್‌… ಇದೆಂಥ ನರಕ’ ಎಂದಿತು ಮನಸ್ಸು. ಆ ಚೀಲಗಳೆಲ್ಲ ಪಕ್ಕದಲ್ಲಿ ಕುಳಿತಿದ್ದ ಚಿಕ್ಕ ಬಾಲಕನಿಗೆ ಸೇರಿದಂಥವು. ಆತ ಈ ಲೆಕ್ಟರರ್‌ ಅವರನ್ನು ನೋಡಿ, ಪ್ರೀತಿಯಿಂದ “ಬನ್ನಿ ಸರ್‌… ಇಲ್ಲೇ ಕೂತ್ಕೊಳ್ಳಿ’ ಎನ್ನುತ್ತಾ, ಅವರಿಗೆ ಸೀಟ್‌ ಆಫ‌ರ್‌ ಮಾಡಿದ. ಕೊನೆಯ ಸಾಲಿನ ಎಡ ಭಾಗದ ಕೊನೆಯಲ್ಲಿ ಇನ್ನೊಬ್ಬನು ಗುಟ್ಕಾ ಹಾಕಿಕೊಂಡು ಕುಳಿತಿದ್ದ. ಉತ್ತರ ಕರ್ನಾಟಕದಲ್ಲಿ ಅದೊಂಥರಾ ಗುಟ್ಕಾ ಪ್ರಿಯರ ಸೀಟು! ಜಗಿದು, ನುಣ್ಣಗಾದ ಗುಟ್ಕಾವನ್ನು ಹೊರಗೆ ಉಗಿಯಲು ಹಿಂಭಾಗದ ಕಿಟಕಿಯೇ ಪ್ರಶಸ್ತ ಸ್ಥಳ!

ಪ್ರಾಧ್ಯಾಪಕರು ವಿಧಿಯಿಲ್ಲದೆ, ಆತನ ಪಕ್ಕ ಕೂರಬೇಕಾಯಿತು. ಮಾತುಕತೆ ಶುರುವಾಯಿತು. “ಎಲ್ಲಿಗೆ ಹೋಗ್ಬೇಕು? ಏನ್‌ ಕೆಲಸ ಮಾಡ್ತಾ ಇದ್ದೀ?’ ಅಂತ ಪ್ರಾಧ್ಯಾಪಕರು, ಬಾಲಕನಿಗೆ ಕೇಳುವಷ್ಟರಲ್ಲಿ, “ಸರ್‌… ನಾನು ಓದಿಲ್ಲ. ಮಂಗಳೂರಿನ ಹೋಟೆಲ… ಒಂದರಲ್ಲಿ ಮಾಣಿಯಾಗಿದ್ದೇನೆ. 8 ಸಾವಿರ ರೂ. ಸಂಬಳ ಕೊಡ್ತಾರೆ’ ಎಂದು ಆತ ಮುಗ್ಧನಂತೆ ಹೇಳಿದ. ಆಗ ಪ್ರಾಧ್ಯಾಪಕರು ಉಡಾಫೆಯಿಂದ “ಅಲ್ಲೋ… ಅಷ್ಟು ದೂರ ಹೋಗೋದಕ್ಕಿಂತ ಹುಬ್ಬಳ್ಳಿಯಲ್ಲೇ ಈ ಕೆಲಸಕ್ಕೆ 5 ಸಾವಿರ ರೂ. ಕೊಡ್ತಾರಲ್ಲ’ ಅಂತ ಬಾಲಕನಿಗೆ ಮಾತಿನಲ್ಲಿ ಚುಚ್ಚಿದರು. ಅದಕ್ಕೆ ಬಾಲಕ ಹೇಳಿದ; “ಸರ್‌, ಹೆಚ್ಚಿನ ಆ 3 ಸಾವಿರ ರೂ.ನಿಂದ ಏನೆಲ್ಲಾ ಮಾಡಬಹುದು! ಉಪ್ಪಿಟ್ಟು ಚೊಲೋ ಅಂತ ಊಟ ಬಿಡಬಾರದು. ಜಾಸ್ತಿ ದುಡಿಯೋ ಕಡೆ, ಜಾಸ್ತಿ ಸಂಬಳ ತಗೋ ಹಾಗೆ ಇರಬೇಕು’. ಇದನ್ನು ಕೇಳಿದ ಪ್ರಾಧ್ಯಾಪಕರಿಗೆ, ಕಡಿಮೆ ಕಾಲ ದುಡಿದು, ಜಾಸ್ತಿ ಸಂಬಳ ತೆಗೆದುಕೊಳ್ಳುವ ಪ್ರಾಧ್ಯಾಪಕ ಹುದ್ದೆಯ ಬಗ್ಗೆಯೇ ಜಿಗುಪ್ಸೆ ಹುಟ್ಟಿತು. ಈತನ ಬಳಿ ಮಾತಾಡುವುದಕ್ಕಿಂತ, ಮೌನವಾಗಿರೋದೇ ಲೇಸು ಎಂದು, ನಿದ್ರೆಗೆ ಜಾರಿದರು.

ಬೆಳಗ್ಗೆ 4 ಗಂಟೆಗೆ ಸುರತ್ಕಲ್‌  ಸಮೀಪದಲ್ಲಿ ಟೀ ಕುಡಿಯಲು ಬಸ್‌ ನಿಲ್ಲಿಸಲಾಯಿತು. “ಏಳಿ ಸರ್‌, ಚಾ ಕುಡಿಯೋಣ’ ಎನ್ನುತ್ತಾ ಬಾಲಕನು ನಿದ್ದೆಗಣ್ಣಿನಲ್ಲಿದ್ದ ಪ್ರಾಧ್ಯಾಪಕರನ್ನು ಎಬ್ಬಿಸಿದನು. ಬಸ್‌ ಹೊರಗಡೆ ನೋಡಿದರೆ, ಜಡಿ ಮಳೆಯ ಅಬ್ಬರ. ಬಾಲಕನು ಜಾದೂಗಾರನಂತೆ ಛಕ್ಕನೆ ಕೊಡೆ ಬಿಡಿಸಿದ. ಇಬ್ಬರೂ ಟೀ ಕುಡಿದ ಮೇಲೆ, ಬಾಲಕನೇ ಹಣ ಕೊಟ್ಟನು.

ಮತ್ತೆ ಬಸ್ಸಿನಲ್ಲಿ ಮಾತುಗಳ ಮಳೆ ಆರಂಭ. “ಸರ್‌, ಹುಬ್ಬಳ್ಳಿಯಲ್ಲಿ ನನ್ನಂಥ ಓದಲಾರದ ಹುಡುಗರು ಮಂಗಳೂರಿಗೆ ಬರುತ್ತಾರೆ. ಇಲ್ಲಿ ಬಹಳ ಹೋಟೆಲ್ಲುಗಳಿವೆ. ನಮ್ಮ ಕಡೆಯೇ ಇದ್ದರೆ, 10 ರೂಪಾಯಿಯಲ್ಲಿ 5 ಜನ ಬಿಸಿ ನೀರು ಸಕ್ಕರೆಯ ಟೀ ಕುಡಿಯುವುದು, ಪಂಟು ಹೊಡಕೋತಾ ಹುಲಿ ಮನೆ ಆಡೋದು ಮಾಡುತ್ತೇವೆ…’ ಎಂದ. ಹಾಗೆ ಅನ್ನುವಾಗ ಅವನ ಮಾತುಗಳಲ್ಲಿ ಹುಬ್ಬಳ್ಳಿ ನೆಲದ ಮೇಲೆ ಪ್ರೀತಿಯೂ ಇತ್ತು. ಮಾತು ಮುಗಿಯುವಷ್ಟರಲ್ಲಿ, 20 ರೂಪಾಯಿಯನ್ನು ಬಾಲಕನು ಟೀ ಅಂಗಡಿಯವನಿಗೆ ನೀಡಿದ್ದ! ಪ್ರಾಧ್ಯಾಪಕರಿಗೆ ಮತ್ತೆ ಕಸಿವಿಸಿ. ಅವರ ಪಾಕೆಟ್‌ನಲ್ಲಿದ್ದ ನೂರರ ಕಟ್ಟು, ಮುಸಿ ಮುಸಿ ನಗುತ್ತಿತ್ತು.

Advertisement

ಮಂಗಳೂರು ಬಸ್‌ ನಿಲ್ದಾಣ ಬಂತು. ಪ್ರಾಧ್ಯಾಪಕರು ಅವನಿಗೆ ಬೈ ಹೇಳಿ, ಸ್ಟಾರ್‌ ಹೋಟೆಲ್‌ ಒಂದಕ್ಕೆ ಹೋದರು. ಅಲ್ಲಿಯೇ ಫ್ರೆಶ್‌ಅಪ್‌ ಆಗಿ, ತಿಂಡಿ ತಿನ್ನಲು ಹೋಟೆಲ್‌ಗೆ ಹೋದರು. ಅದೇ ಬಾಲಕ ಮಾಣಿಯು, ನೀರು ತರುತ್ತಾ ಇರೋದು ಸಿನಿಮಾದ ಹೀರೋ ಎಂಟ್ರಿ ಕೊಟ್ಟ ರೀತಿಯಲ್ಲಿತ್ತು. ಆಗಲೂ ಆತ ಪ್ರೀತಿಯಿಂದ ಮಾತಾಡಿಸಿದ. ಹೋಟೆಲ್‌  ಮಾಲೀಕ, ಬಾಲಕನ ಮನವಿಯಂತೆ ಹಣ ತೆಗೆದುಕೊಳ್ಳಲಿಲ್ಲ. ಆಗ ಮತ್ತೆ ಪ್ರಾಧ್ಯಾಪಕರ ಪಾಕೆಟ್‌ನಲ್ಲಿದ್ದ ನೋಟುಗಳು ನಕ್ಕವು.

ಪ್ರಾಧ್ಯಾಪಕರು ಮಂಗಳೂರಿಗೆ ಬಂದಿದ್ದ ಕೆಲಸ ಮುಗಿಸಿ, ಬಸ್ಸನ್ನೇರಿದರು. ಮತ್ತೆ ಸಿಕ್ಕಿದ್ದೂ ಅದೇ ಕೊನೆಯ ಸೀಟು. ಅಲ್ಲಿ ಗುಟ್ಕಾ ಹಾಕಿಕೊಂಡು ಒಬ್ಬನು ಕುಳಿತಿದ್ದ. ಮಧ್ಯದಲ್ಲಿ ಒಬ್ಬರು ಯಜಮಾನರು ಕುಳಿತಿದ್ದರು. ಅವರೊಟ್ಟಿಗೆ ಮಾತಾಡಿದಾಗ ತಿಳಿಯಿತು, ಅವರು ತಾನು ಬೆಳಗ್ಗೆ ತಿಂಡಿ ತಿಂದಿದ್ದ ಸ್ಟಾರ್‌ ಹೋಟೆಲ್‌ನ ಮಾಲೀಕರೆಂದು! ಅವರೂ ಹುಬ್ಬಳ್ಳಿಯವರೇ! ಸಣ್ಣವರಿದ್ದಾಗ ಹೋಟೆಲ್‌   ಮಾಣಿಯಾಗಿ ಕೆಲಸ ಮಾಡಿದ್ದವರಂತೆ.

ಆಗ ಪ್ರಾಧ್ಯಾಪಕರಿಗೆ ಆ ಬಾಲಕನ ಮಾತುಗಳು ನೆನಪಾದವು. ಯಾರಿಗೆ ಗೊತ್ತು? ಆತನೂ ಒಂದು ದಿನ ಸ್ಟಾರ್‌ ಹೋಟೆಲ್‌ ಮಾಲೀಕ ಆದರೂ ಆದಾನು? ಅಂತನ್ನಿಸಿ, ತಮ್ಮ ಮಾತುಗಳಲ್ಲಿದ್ದ ಹಗುರತನಗಳ ಬಗ್ಗೆ ಅಸಹ್ಯ ಪಟ್ಟುಕೊಂಡರು.

– ಪ್ರೊ. ಭಾರ್ಗವ ಎಚ್‌.ಕೆ. ಲಕ್ಷ್ಮೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next