ಬೆಂಗಳೂರು: ಸಿಲಿಕಾನ್ ಸಿಟಿಯ ಕೆಲವು ಹೋಟೆಲ್ ಮಾಲೀಕರು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಮಾಡಿದ ನಂತರ ಗ್ರಾಹಕರು ಹೋಟೆಲ್ ನತ್ತ ಬಾರದೆ ಇದ್ದರೆ ಎಂಬ ಆತಂಕ ಕಾಡುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ಹೋಟೆಲ್ ಉದ್ಯಮ ಕಷ್ಟದಲ್ಲಿದೆ. ಇದರ ಮಧ್ಯೆ ಊಟ, ತಿಂಡಿ, ಟೀ, ಕಾಫಿ ಬೆಲೆ ಏರಿಕೆ ಮಾಡಿದರೆ ಗ್ರಾಹಕರು ಹಿಂದೇಟು ಹಾಕಬಹುದು ಎಂಬ ದಿಗಿಲು ಹೋಟೆಲ್ ಉದ್ಯಮಿಗಳಲ್ಲಿದೆ. ಹೀಗಾಗಿ, ತಕ್ಷಣಕ್ಕೆ ಬೆಲೆ ಹೆಚ್ಚಳಕ್ಕೆ ಕೈ ಹಾಕದೆ ಮತ್ತಷ್ಟು ದಿನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಾಜಿ ನಗರದ ವಿನಿತ್ ಹೋಟೆಲ್‌ನ ಮಾಲೀಕರು “ನಾವಿನ್ನೂ ಬೆಲೆ ಹೆಚ್ಚಳ ಬಗ್ಗೆ ಆಲೋಚಿಸಿಲ್ಲ. ಹೋಟೆಲ್ ಮಾಲೀಕರ ಸಂಘ ಬೆಲೆ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ದರ ಏರಿಕೆ ಮಾಡುವ ನಿರೀಕ್ಷೆ ಇದೆ’ ಎಂದು ಹೇಳಿದರು.
ಅಡುಗೆ ಎಣ್ಣೆ , ಗ್ಯಾಸ್ ದರದಲ್ಲಿನ ಹೆಚ್ಚಳ ಇದರ ಜತೆಗೆ ವಿದ್ಯುತ್ ಬೆಲೆ ಏರಿಕೆ ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೋಟೆಲ್ ಉದ್ಯಮ ಉಳಿಯಬೇಕಾದರೆ ಬೆಲೆ ಏರಿಕೆ ಅನಿವಾರ್ಯ ಎಂದರು.
ಟೀ, ಕಾಫಿ ಮಾತ್ರ ಹೆಚ್ಚಳ ಮಾಡಿಲ್ಲ: ಈಗಾಗಲೇ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಕೆಲವು ಹೋಟೆಲ್ ಮಾಲೀಕರು ಶುಕ್ರವಾರ ಸಂಜೆಯೇ ಬೆಲೆ ಹೆಚ್ಚಳ ಮಾಡಿದ್ದಾರೆ. ಈ ಹಿಂದೆ ಶಿವಾಜಿನಗರದ ಜ್ಯೋತಿ ಕೆಫೆಯಲ್ಲಿ 1 ಪ್ಲೇಟ್ ರವೆ ಇಡ್ಲಿ 30 ರೂ.ಗೆ ದೊರೆಯುತ್ತಿತ್ತು. ಇದೀಗ ಅದರ ಬೆಲೆ ಈಗ 35 ರೂ. ಆಗಿದೆ. ಜತೆಗೆ ಸೆಟ್ ದೋಸೆ 1 ಪ್ಲೆಟ್‌ಗೆ 45 ರೂ.ಆಗಿತ್ತು. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇದರ ಬೆಲೆ 50 ರೂ.ಆಗಿದೆ. ಈ ಬಗ್ಗೆ ಮಾಹಿತಿ ನೀಡಿದ ಜ್ಯೋತಿ ಕೆಫೆ ಹೋಟೆಲ್ ಮ್ಯಾನೇಜರ್, ಟೀ-ಕಾಫಿ ಬೆಲೆಯಲ್ಲಿ ಮಾತ್ರ ಹೆಚ್ಚಳ ಮಾಡಿಲ್ಲ. ಆದರೆ ಊಟ, ತಿಂಡಿ ಸೇರಿದಂತೆ ಇನ್ನಿತರ ಬೆಲೆಗಳಲ್ಲಿ 5 ರೂ.ಏರಿಕೆ ಮಾಡಲಾಗಿದೆ ಎಂದು ಹೇಳಿದರು.
ಬೆಲೆ ಏರಿಕೆಗೆ ಒತ್ತಾಯವಿಲ್ಲ: ಅಡುಗೆ ಎಣ್ಣೆ, ಅನಿಲದರಗಳಲ್ಲಿನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಕ್ಕೆ ಅನುಕೂಲ ಆಗಲಿ ಎಂಬ ಕಾರಣದಿಂದಾಗಿ ಬೆಂಗಳೂರು ಹೋಟೆಲ್‌ಗಳ ಮಾಲೀಕರ ಸಂಘ ಶೇ.10ರಷ್ಟು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಹೋಟೆಲ್ ಮಾಲೀಕರು ಬೆಲೆ ಏರಿಕೆ ಮಾಡಲೇ ಬೇಕು ಎಂಬ ಒತ್ತಾಯವಿಲ್ಲ. ಬೆಲೆ ಏರಿಕೆ ಮಾಡುವುದು ಅವರ ನಿಲುವಿಗೆ ಬಿಟ್ಟಿದ್ದು ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಹೇಳುತ್ತಾರೆ. ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ಸೇವೆ ನೀಡಲು ಆಗುವುದಿಲ್ಲ. ಆ ಹಿನ್ನೆಲೆಯಲ್ಲಿ ಈಗಾಗಲೇ ಕೆಲವರು ಬೆಲೆ ಏರಿಕೆ ಮಾಡಿದ್ದಾರೆ. ಸೋಮವಾರದಿಂದ ಮತ್ತಷ್ಟು ಹೋಟೆಲ್‌ಗಳಲ್ಲಿ ಬೆಲೆ ಏರಿಕೆ ಜಾರಿಗೆ ಬರುವ ನಿರೀಕ್ಷೆಯಿದೆ ಎಂದಿದ್ದಾರೆ.
ಕೆಲ ಹೋಟೆಲ್ ಮಾಲೀಕರು ಈಗಾಗಲೇ ಆಹಾರ ಪದಾರ್ಥಗಳ ದರವನ್ನು ಏರಿಸಿದ್ದಾರೆ. ಇನ್ನೂ ಕೆಲವರು ಹಾಲಿನ ಬೆಲೆ ಅಧಿಕವಾಗಬಹುದು ಅದನ್ನು ನೋಡಿ ಮುಂದಿನ ಹೆಜ್ಜೆ ಇರಿಸೋಣ ಎಂಬ ಆಲೋಚನೆಯಲ್ಲಿ ಇದ್ದಾರೆ. ಆದರೆ ದರ ಹೆಚ್ಚಳ ಮಾಡಲೇ ಬೇಕು ಎಂಬ ಒತ್ತಾಯ ಅಂತೂ ಇಲ್ಲವೆ ಇಲ್ಲ. ಬೆಲೆ ಏರಿಕೆ ಮಾಡುವುದು ಅಥವಾ ಬಿಡುವುದು ಆಯಾ ಹೋಟೆಲ್ ಮಾಲೀಕರಿಗೆ ಬಿಟ್ಟಿದ್ದು.
– ಪಿ.ಸಿ.ರಾವ್, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ