ಸಿದ್ದಾಪುರ: ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ನಗರ, ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಕೆಂಡ ಮೈಮೆಲೆ ಸುರಿದುಕೊಂಡ ಉರಿ ಬಿಸಿಲಿನ (ಕಾವು)ತಾಪ ಏರುತ್ತಿದೆ. ಬಿಸಿಲ ತಾಪದಿಂದ ಬೆಂದು ಹೋಗುತ್ತಿರುವ ಜನ ತಂಪು ಪಾನೀಯ, ಎಳನೀರು, ಹಣ್ಣುಗಳು ಸೇರಿದಂತೆ ಜ್ಯೂಸ್ ಹಾಗೂ ಐಸ್‌ಕ್ರೀಮ್ ಮೊರೆ ಹೋಗುತ್ತಿದ್ದಾರೆ.
ಬಿಸಿಲಿನ ಝಳಕ್ಕೆ ತತ್ತರಿಸಿರುವ ಸಾಕಷ್ಟು ಜನ ಎಳನೀರು ಸೇವಿಸಿದರೆ ಮತ್ತಷ್ಟು ಮಂದಿ ಹಣ್ಣು, ಹಂಪಲು, ತಂಪು ಪಾನೀಯ ಅಂಗಡಿಗಳಿಗೆ ಲಗ್ಗೆ ಇಡುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಬಿಸಿಲಿನ ತಾಪಮಾನ 30ರಿಂದ 39 ಡಿಗ್ರಿ ಸೆಲ್ಸಿಯಸ್ ಇದೆ. ಇನ್ನೂ ಈ ಬಿಸಿಲಿನ ದಾಹ ತಣಿಸಿಕೊಳ್ಳಲು ಕೆಲವೆಡೆ ವಯಸ್ಸಾದ ಹಿರಿಯರು ಮರದ ನೆರಳು, ಶಾಲೆಯ ಆವರಣ, ದೇವಸ್ಥಾನ ಆವರಣದಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ.
ಎಳನೀರಿಗೆ ಬೇಡಿಕೆ ಹೆಚ್ಚುತ್ತಿದ್ದು, ದೊಡ್ಡ ವ್ಯಾಪಾರಿಗಳು ದೂರದ ಮಂಡ್ಯ, ಮೈಸೂರು, ತಿಪಟೂರು, ಮದ್ದೂರಿನಿಂದ ಎಳನೀರು ತರಿಸುತ್ತಿದ್ದಾರೆ. ಇನ್ನು ಸಣ್ಣಪುಟ್ಟ ವ್ಯಾಪಾರಿಗಳು ಸ್ಥಳೀಯವಾಗಿ ಸಿಗುವ ತೆಂಗಿನ ಕಾಯಿಗಳನ್ನು ತಂದು ಸೈಕಲ್, ತಳ್ಳುಬಂಡಿಯಲ್ಲಿ ತಂದು ಮಾರಾಟ ಮಾಡುತ್ತಾರೆ. ಇನ್ನು ಗಂಗಾವತಿ-ರಾಯಚೂರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಬದಿಯ ಗಿಡದ ನೆರಳಲ್ಲಿ ಅರ್ಧ ಕಿ.ಮೀ ಒಬ್ಬರಂತೆ ಎಳ ನೀರು ಮಾರಾಟಗಾರರು ಸಿಗುತ್ತಾರೆ.
ಈ ಹಿಂದೆ 25ರಿಂದ 30 ರೂ. ಗೆ ಮಾರಾಟವಾಗುತ್ತಿದ್ದ ಎಳನೀರು ಇದೀಗ 35ರಿಂದ 40 ರೂ. ವರೆಗೂ ಹೆಚ್ಚಳವಾಗಿದೆ. ಬೆಲೆ ಹೆಚ್ಚಾದರೂ ಜನ ಎಳನೀರು ಕುಡಿಯುವುದನ್ನು ಬಿಟ್ಟಿಲ್ಲ. ದುಬಾರಿಯಾದರು ಸರಿ ನಮಗೆ ಬಿಸಿಲಿನ ತಾಪ ಕಡಿಮೆಯಗಬೇಕು ಎಂಬುದು ನಾಗರಿಕರ ಅನಿಸಿಕೆ.
ಇನ್ನು ತಂಪುಪಾನೀಯ, ಜ್ಯೂಸ್, ಹಣ್ಣುಗಳಿಗೂ ಬೇಡಿಕೆ ಹೆಚ್ಚುತ್ತಿದೆ. ರಸ್ತೆಯ ಹೆದ್ದಾರಿ ಬದಿಯಲ್ಲಿ ಅಲ್ಲಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನುಹಾಕಿಕೊಂಡು ಲಸ್ಸಿ, ಮಜ್ಜಿಗೆ, ಕಬ್ಬಿನ ಹಾಲು, ಗೋಲಿಸೋಡಾ, ಬಾದಾಮಿ ಹಾಲು, ಕಲ್ಲಂಗಡಿ ಹಣ್ಣು ಹೀಗೆ ಇನ್ನಿತರ ಹಣ್ಣುಗಳನ್ನು ಹಾಗೂ ಐಸ್‌ಕ್ರೀಮ್‌ಗಳನ್ನು ಸಹ ವ್ಯಾಪಾರಿಗಳು ಮರಾಟ ಮಾಡುತ್ತಿದ್ದಾರೆ.
ಬೈಕ್‌ನಲ್ಲಿ ಸಂಚರಿಸುವಾಗ ಬಿಸಿಲು ಹಾಗೂ ಡಾಂಬರ್ ರಸ್ತೆಯ ಝಳ ಹೆಚ್ಚಿರುತ್ತದೆ. ಹಾಗಾಗಿ ಬಿಸಿಲಿನಿಂದ ದೇಹದ ಆರೋಗ್ಯ ರಕ್ಷಿಸಿಕೊಳ್ಳಲು ಮತ್ತು ಧಣಿವಾದಾಗ ಹೆದ್ದಾರಿ ಬದಿಯಲ್ಲಿ ಸಿಗುವ ಎಳನೀರು, ಜ್ಯೂಸ್ ಕುಡಿಯುವು ಅನಿವಾರ್ಯ.
ನಾಗರಾಜ, ಬೈಕ್ ಸವಾರ