Advertisement

ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ಏರಿಕೆ: ಅನಾರೋಗ್ಯ ಸಮಸ್ಯೆಗಳು ಉಲ್ಬಣ

09:24 PM Apr 03, 2022 | Team Udayavani |

ಬೆಂಗಳೂರು: ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ತಾರಕಕ್ಕೇರುತ್ತಿದ್ದು, ವಿವಿಧ ಜಿಲ್ಲೆಯಲ್ಲಿ ಜ್ವರ, ತಲೆ ನೋವು, ಕಣ್ಣಿನ ಸಮಸ್ಯೆ ಸೇರಿದಂತೆ ಇತರೆ ಅನಾರೋಗ್ಯದಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ.

Advertisement

ಮಾರ್ಚ್‌ ತಿಂಗಳ ಮಧ್ಯ ಭಾಗದಿಂದ ಉಷ್ಣಾಂಶ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕನಿಷ್ಠ 19.5 ರಿಂದ ಗರಿಷ್ಠ 40.18ಡಿಗ್ರಿ ಸೆಲ್ಸಿಯಸ್‌ ವರೆಗೆ ಉಷ್ಣಾಂಶ ದಾಖಲಾಗುತ್ತಿದೆ. ಕರಳುಬೇನೆ, ನಿರ್ಜಲೀಕರಣ, ವಾಂತಿ-ಭೇದಿ, ಕಣ್ಣಿನ ಉರಿ, ಚಿಕನ್‌ ಫಾಕ್ಸ್, ಟೈಫಾಯ್ಡ್, ಬಿಸಿಲಿನಿಂದ ತಲೆ ಸುತ್ತು, ಮೈಗ್ರೇನ್‌, ಸನ್‌ ಸ್ಟ್ರೋಕ್‌, ಮೂಗಿನಲ್ಲಿ ರಕ್ತ ಸುರಿಯುವುದು, ಅತಿಯಾದ ಸೂರ್ಯ ಕಿರಣಗಳಿಂದ ಚರ್ಮ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ಬಿಸಿಲಿನಿಂದ ಉಂಟಾಗುವ ಕಾಯಿಲೆಗಳ ಪ್ರಮಾಣ ತೀವ್ರಗೊಳ್ಳುರುವ ಬಗ್ಗೆ ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆಗಳಿಗೆ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸುತ್ತೋಲೆಯನ್ನು ಹೊರಡಿಸಿದೆ.

1.35ಲಕ್ಷ ಮಂದಿ ಕರಳುಬೇನೆ :

ಕಳೆದ ವರ್ಷ ರಾಜ್ಯಾದ್ಯಂತ 1.35ಲಕ್ಷ ಮಂದಿ ಕರಳುಬೇನೆ, 47137 ಮಂದಿ ವಿಷಮಶೀತ ಜ್ವರ, 3917 ಮಂದಿಯಲ್ಲಿ ವೈರಲ್‌ ಹೆಪಟೈಟಿಸ್‌ ವರದಿಯಾಗಿದೆ. ಬಿಸಿಲು ಹೆಚ್ಚಾದಂತೆ ಮಲೇರಿಯಾ, ಜ್ವರ, ವಾಂತಿ, ಕಾಲರಾ, ಡೆಂಗೆ ಮತ್ತು ಚಿಕೂನ್‌ ಗುನ್ಯಾ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ, ಹಬ್ಬ, ಹರಿದಿನ, ಜಾತ್ರೆ, ಮದುವೆ ಸೇರಿದಂತೆ ಹೆಚ್ಚಿನ ಜನ ಸೇರುವ ಕಡೆಗಳಲ್ಲಿ ನೀರು ಮತ್ತು ಆಹಾರದ ವ್ಯತ್ಯಾಸದಿಂದ ಈ ರೋಗಗಳು ಬರುವ ಸಾಧ್ಯತೆಗಳಿರುತ್ತವೆ.

ನಿಯಂತ್ರಣಕ್ಕೆ ಕ್ರಮ :

Advertisement

ಕರಳುಬೇನೆ, ಕಾಲರಾ, ಜಂಡೀಸ್‌ ಸೇರಿದಂತೆ ಇತರೆ ಸಾಂಕ್ರಾಮಿಕಗಳು ಸಂಭವಿಸಿದ್ದಲ್ಲಿ ಕ್ಷಿಪ್ರ ಪ್ರತಿಕ್ರಿಯಾ ತಂಡವನ್ನು ತಕ್ಷಣ ಕಾಯಿಲೆ ಪೀಡಿತ ಸ್ಥಳಕ್ಕೆ ಕಳುಹಿಸಿ, ಗ್ರಾಮದಲ್ಲಿ ಒಂದು ತಾತಾಲ್ಕಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗುತ್ತದೆ. ರೋಗವು ಸಂಪೂರ್ಣ ನಿಯಂತ್ರದ ಬರುವವರೆಗೆ 24ಗಂಟೆಯೂ ನಿರ್ವಹಣೆ. ಗಂಭೀರ ಸ್ವರೂಪದ ರೋಗಿಗಳಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ತಾಲೂಕು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಪೀಡಿತ ಪ್ರದೇಶದಲ್ಲಿ ಸಕ್ರಿಯ ರೋಗ ಸಮೀಕ್ಷೆ ಕಾರ್ಯವನ್ನು ರೋಗುವು ಹತೋಟಿಗೆ ಬಂದ 10ದಿನಗಳವರೆಗೆ ಮುಂದುವರೆಯಲಿದೆ.

ಆರೋಗ್ಯ ಇಲಾಖೆ ಸಿದ್ಧತೆ :

ಎಲ್ಲ ಆಸ್ಪತ್ರೆಯಲ್ಲೂ ಸೂಕ್ತ ಚಿಕಿತ್ಸೆಗೆ ಅಗತ್ಯವಾದ ಜೀವ ರಕ್ಷಕ ಔಷಧ, ಕ್ರಿಮಿ-ಕೀಟ ನಾಶ ಲಭ್ಯವಿರಬೇಕು. ಹೆಚ್ಚಿನ ಅವಶ್ಯಕತೆ ಇದ್ದರೆ ಔಷಧಗಳನ್ನು ಕರ್ನಾಟಕ ರಾಜ್ಯ ಡ್ರಗ್ ಆ್ಯಂಡ್‌ ಲಾಜಿಸ್ಟಿಕ್‌ ವೇರ್‌ ಹೌಸ್‌ ಸೊಸೈಟಿಯಿಂದ ಖರೀದಿ ಆದೇಶಿಸಲಾಗಿದೆ. ನಿರ್ಜಲೀಕರಣ ಸಮಸ್ಯೆ ಹಾಗೂ ನೀರಿನಿಂದ ಉಂಟಾಗುವ ಕಾಯಿಲೆಗಳ ನಿರ್ಮೂಲನೆಗಾಗಿ ಓಆರ್‌ಎಸ್‌ ಹಾಗೂ ಹಾಲೋಜೋನ್‌ ಮಾತ್ರೆಗಳು ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರ ಬಳಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರುವಂತೆ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಮುನ್ನೆಚ್ಚರಿಕೆ ಸಲಹೆ :

ಬೆವರು ರೂಪದಲ್ಲಿ ದೇಹದ ನೀರು ಹೊರ ಹೋಗುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುವುದರಿಂದ ಹಲವು ಸಮಸ್ಯೆ ಸೃಷ್ಟಿಯಾಗುತ್ತದೆ. ಹೀಗಾಗಿ ನೀರಿನ ಜತೆಗೆ, ದೇಹಕ್ಕೆ ಶಕ್ತಿ, ಚೈತನ್ಯ ತುಂಬುವಂತಹ ಹಣ್ಣಿನ ರಸ, ಪಾನೀಯ ಸೇವನೆ ಮೂಲಕ ನೀರಿನಂಶ ಹೆಚ್ಚಿಸಿಕೊಳ್ಳಬೇಕು. ಕಾಟನ್‌ ಉಡುಪು, ಬಿಸಿಲಿಗೆ ಹೋಗುವಾಗ ತಂಪು ಕನ್ನಡಕ, ಛತ್ರಿ ಬಳಕೆ ಸೇರಿದಂತೆ ಇತರೆ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮ ಪಾಲಿಸಬೇಕು.

ಸಲಹೆಗಳು? :

  • ನೀರಿನ ಅಂಶದ ಆಹಾರ ಸೇವನೆ
  • ಕುದಿಸಿ ಆರಿಸಿದ ನೀರು ಸೇವಿಸಬೇಕು.
  • ಬಿಸಿಯಾದ ಊಟ, ಶುದ್ಧವಾದ ಆಹಾರ ಸೇವೆನೆ
  • ಮಲ ವಿಸರ್ಜನೆಗೆ ಶೌಚಗೃಹ ಬಳಸಬೇಕು
  • ತೆರೆದಿಟ್ಟ ತಿಂಡಿ ಹಾಗೂ ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ತಿನ್ನಬಾರದು
  • ಕೈ ಸ್ವಚ್ಛತೆ ಕಾಪಾಡಿಕೊಳ್ಳಬೇಕು

ಪ್ರಸ್ತುತ ಆಸ್ಪತ್ರೆಗೆ ಬರುವಲ್ಲಿ ಹೆಚ್ಚಾಗಿ ತಲೆ ನೋವು, ಜ್ವರ, ಆಯಾಸ, ಕಣ್ಣಿ ಸಮಸ್ಯೆ ಸಂಬಂಧಿಸಿದ ಪ್ರಕರಣಗಳು ಅಧಿಕವಾಗಿ ವರದಿಯಾಗುತ್ತಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು.ನೀರಿನಾಂಶ ಆಹಾರ ಹಾಗೂ ಸುತ್ತಮುತ್ತಲಿನ ಸ್ವತ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಡಾ. ಎಸ್‌.ಎನ್‌. ಅರವಿಂದ  ಆಂತರಿಕ ಔಷಧ ವಿಭಾಗ ಆಸ್ಟರ್‌ ಆರ್‌ ಆಸ್ಪತ್ರೆ.

Advertisement

Udayavani is now on Telegram. Click here to join our channel and stay updated with the latest news.

Next