ಬೆಂಗಳೂರು: ನಗರದಲ್ಲಿ ಬಿಸಿಗಾಳಿಯಂತೂ ಇಲ್ಲ; ಆದರೆ, ಅದರ ಅನುಭವಕ್ಕೆ ಮಾತ್ರ ಕೊರತೆ ಇಲ್ಲ!
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶುಕ್ರವಾರ ಗರಿಷ್ಠ ಉಷ್ಣಾಂಶ 36.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಇಡೀ ತಿಂಗಳಲ್ಲಿ (ಏಪ್ರಿಲ್) ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ. ವಾಡಿಕೆಗೆ ಹೋಲಿಸಿದರೆ, ಕೇವಲ 0.6 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಕಾಣಬಹುದು. ಆದರೆ, ಕಳೆದ ಒಂದು ವಾರದ ಅಂಕಿ-ಅಂಶಗಳನ್ನು ನೋಡಿದರೆ, 2ರಿಂದ 3 ಡಿಗ್ರಿ ವ್ಯತ್ಯಾಸ ಕಂಡುಬರುತ್ತದೆ.
ಈ ತಾಪಮಾನ ಏರಿಕೆ ಜತೆಗೆ ನಗರದಲ್ಲಿ ತಲೆಯೆತ್ತಿರುವ ಗಗನಚುಂಬಿ ಕಟ್ಟಡಗಳ ಕೊಡುಗೆ ಈಗ ನಗರದಲ್ಲಿ ಅನುಭವವಾಗುತ್ತಿರುವ “ಬಿಸಿ ಗಾಳಿ’ಯಲ್ಲಿ ಹೆಚ್ಚಿದೆ. ಸೂರ್ಯನಿಂದ ಬರುವ ಅಲ್ಪತರಂಗ ಕಿರಣಗಳು ನೂರಾರು ಅಡಿ ಎತ್ತರದ ಕಟ್ಟಡಗಳ ಮೇಲೆ ಬಿದ್ದು, ಬಹುವಿಧ ಪ್ರತಿಫಲನ ಆಗುತ್ತದೆ. ಇದಲ್ಲದೆ, ಹೊರವಲಯದಲ್ಲಿ ವಾತಾವರಣದಲ್ಲಿ ಒತ್ತಡ ಹೆಚ್ಚಿರುತ್ತದೆ. ಹೃದಯಭಾಗದಲ್ಲಿ ಕಡಿಮೆ ಇರುತ್ತದೆ. ಆಗ, ಹೆಚ್ಚು ಒತ್ತಡ ಇರುವ ಪ್ರದೇಶ ದಿಂದ ಕಡಿಮೆ ಒತ್ತಡದ ಕಡೆಗೆ ಗಾಳಿ ಬೀಸುತ್ತದೆ. ಆ ಗಾಳಿಯು ತನ್ನ ಜತೆ ವಾತಾವರಣದಲ್ಲಿನ ಇಂಗಾಲದ ಅಂಶಗಳನ್ನೂ ಹೊತ್ತು ತರುತ್ತದೆ. ಪರಿಣಾಮ ಜನರಿಗೆ ಬಿಸಿಗಾಳಿಯ ಅನುಭವ ಆಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.
ನಗರದಲ್ಲಿ ವಾಹನಗಳು ಮತ್ತು ಕೈಗಾರಿಕೆಗಳು ಉಗುಳುವ ಹೊಗೆ, ಹವಾನಿಯಂತ್ರಿತ ಯಂತ್ರ ಗಳಿಂದ ಹೊರಹೊಮ್ಮುವ ಅಂಶಗಳು ಸೇರಿದಂತೆ ಹಲವು ಕಾರಣಗಳಿಂದ ವಾತಾವರಣದಲ್ಲಿ ಇಂಗಾಲ ಆಮ್ಲದ ಅಂಶಗಳು ಹರಡಿಕೊಳ್ಳುತ್ತವೆ. ಇದೇ ಸಂದರ್ಭದಲ್ಲಿ ಹೆಚ್ಚು ಒತ್ತಡದ ಪ್ರದೇಶ ದಿಂದ ಕಡಿಮೆ ಒತ್ತಡದ ಪ್ರದೇಶಗಳ ಕಡೆಗೆ ಗಾಳಿ ಬೀಸುತ್ತದೆ. ಉದಾಹರಣೆಗೆ ಹಲಸೂರು, ಹೆಬ್ಟಾಳದಂತಹ ಕೆರೆಗಳ ಸುತ್ತಲಿನ ವಾತಾವರಣದಲ್ಲಿ ಉಷ್ಣಾಂಶ ಕಡಿಮೆ ಇದ್ದು, ಒತ್ತಡ ಹೆಚ್ಚಿರುತ್ತದೆ. ಆದರೆ, ಮೆಜೆಸ್ಟಿಕ್, ಶಿವಾಜಿನಗರ ಸೇರಿದಂತೆ ನಗರದ ಹೃದಯಭಾಗಗಳಲ್ಲಿ ಉಷ್ಣಾಂಶ ಹೆಚ್ಚಿದ್ದು, ಒತ್ತಡ ಕಡಿಮೆ ಇರುತ್ತದೆ. ಈ ಕೇಂದ್ರಭಾಗಗಳಲ್ಲಿ ಗಾಳಿಯು ಇಂಗಾಲದ ಅಂಶಗಳನ್ನು ಹೊತ್ತುಬರು ತ್ತದೆ ಎಂದು ಹವಾಮಾನ ತಜ್ಞ ಡಾ.ಎಂ.ಬಿ. ರಾಜೇಗೌಡ ವಿವರಿಸುತ್ತಾರೆ.
ಇಷ್ಟೇ ಅಲ್ಲ, ಕಾರ್ಬನ್, ಮಿಥೇನ್, ಈಥೇನ್, ಸಲ್ಫರ್‌ನಂತಹ ಈ ಇಂಗಾಲ ಅಂಶಗಳು ವಾತಾವರಣದ 200-300 ಅಡಿ ಮೇಲ್ಪದರದಲ್ಲಿ ಹೋಗಿ ಸಂಗ್ರಹವಾಗುತ್ತವೆ. ಸಂಜೆ ಸೂರ್ಯಾಸ್ತದ ನಂತರ ದೀರ್ಘ ತರಂಗ ಕಿರಣಗಳು ವಾಪಸ್ ಹೋಗುವಾಗ, ಶೀಲ್ಡ್‌ನಂತೆ ಮೇಲ್ಪದರದಲ್ಲಿ ಸಂಗ್ರಹಗೊಂಡ ಅಂಶಗಳು ಅಡ್ಡಿಪಡಿಸುತ್ತವೆ. ಇದರಿಂದ ರಾತ್ರಿ ವೇಳೆಯಲ್ಲೂ ಸೆಕೆಯಾಗುತ್ತದೆ. ಕನಿಷ್ಠ ತಾಪಮಾನ ಹೆಚ್ಚಳಕ್ಕೂ ಇದೇ ಕಾರಣ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿಯ ಅಧಿಕಾರಿ ಪ್ರಸಾದ್ ತಿಳಿಸುತ್ತಾರೆ.
ಗರಿಷ್ಠ ತಾಪಮಾನ: 2016ರ ಏಪ್ರಿಲ್ 25ರಂದು 39.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದು ಈವರೆಗಿನ ಅತ್ಯಧಿಕ ತಾಪಮಾನ. 2021ರ ಏಪ್ರಿಲ್ 1ರಂದು 37.2 ಡಿಗ್ರಿ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಎರಡು ದಿನಗಳಲ್ಲಿ ಮಳೆ ಸಾಧ್ಯತೆ : ತಾಪಮಾನ ಹೆಚ್ಚಿರುವುದರಿಂದ ಮುಂದಿನ ಎರಡು ದಿನಗಳಲ್ಲಿ ಗುಡುಗು ಮಿಂಚು ಸಹಿತ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆಗ, ತಾಪಮಾನ ಕಡಿಮೆ ಆಗಬಹುದು. ಸದ್ಯಕ್ಕಂತೂ ಶುಕ್ರವಾರದ ದಾಖಲಾದ ಗರಿಷ್ಠ ಉಷ್ಣಾಂಶ ಈ ತಿಂಗಳ ಮಟ್ಟಿಗೆ ಅತಿ ಹೆಚ್ಚು ಎಂದು ಹೇಳಬಹುದು. ವರ್ಷದ ಗರಿಷ್ಠ ಉಷ್ಣಾಂಶ ಎಂದು ಹೇಳುವುದು ಕಷ್ಟ. ಯಾಕೆಂದರೆ ಇನ್ನೂ ಬೇಸಿಗೆ ಮುಗಿಯಲು ಒಂದು ತಿಂಗಳು ಬಾಕಿ ಇದೆ ಎಂದು ಅವರು ಹೇಳಿದರು