ಕೆ.ಆರ್.ಪೇಟೆ: ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ತಯಾರು ಮಾಡಲು ಕಳೆದ ಮೂರು ತಿಂಗಳಿಂದ ಶಾಲೆಗಳಿಗೆ ಅಕ್ಕಿ ಸರಬರಾಜು ಮಾಡದೇ ಇರುವುದರಿಂದ ಈಗ ಬಹುತೇಕ ಶಾಲೆಗಳಲ್ಲಿ ಬಿಸಿಯೂಟವನ್ನು ಸ್ಥಗಿತ ಮಾಡಲಾಗಿದೆ.
ಮಕ್ಕಳು ಖಾಲಿ ಹೊಟ್ಟೆಯಲ್ಲಿ ಪಾಠ ಕಲಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ, ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ. ಜೊತೆಗೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ಊಟವನ್ನು ಸ್ಥಗಿತ ಮಾಡಬಾರದು ಎಂಬ ಸೂಚನೆಯನ್ನು ಸಹ ನೀಡಲಾಗಿದೆ. ಆದರೆ, ಈಗ ಇಲಾಖೆಯಿಂದ ಅಕ್ಕಿಯನ್ನು ಶಾಲೆಗಳಿಗೆ ಸರಬರಾಜು ಮಾಡಿ, ನಾಲ್ಕು ತಿಂಗಳ ಕಳೆಯುತ್ತಿರುವುದರಿಂದ ಬಹುತೇಕ ಶಾಲೆಗಳಲ್ಲಿ ಅಕ್ಕಿ ಖಾಲಿಯಾಗಿ ಬಿಸಿಯೂಟ ಸ್ಥಗಿತವಾಗಿದೆ.
ಹಸಿವಿನಿಂದ ಪಾಠ ಕೇಳುತ್ತಿರುವ ಮಕ್ಕಳು: ಶಾಲೆಯಲ್ಲಿ ಅಕ್ಕಿ ಖಾಲಿಯಾಗಿ ಬಿಸಿಯೂಟ ಸ್ಥಗಿತವಾಗಿರುವುದು ತಿಳಿಯದೇ ಮನೆಯಿಂದ ಊಟದ ಡಬ್ಬಿಯನ್ನೂ ಸಹ ಮಕ್ಕಳು ತರುತ್ತಿಲ್ಲ. ಹಾಗೆ ಬರುವ ಕೆಲವು ಮಕ್ಕಳು ದಿನಪೂರ್ತಿ ಖಾಲಿ ಹೊಟ್ಟೆಯಲ್ಲಿ ಶಾಲೆಯಲ್ಲಿ ಕುಳಿತು ಪಾಠ ಕೇಳುವಂತಾಗಿದೆ. ಆದರೆ, ಕಡಿಮೆ ಮಕ್ಕಳ ಸಂಖ್ಯೆ ಇರುವ ಶಾಲೆಗಳಲ್ಲಿ ಕೆಲವು ಮುಖ್ಯ ಶಿಕ್ಷಕರು ಹೇಗೋ ಅಕ್ಕಿಯನ್ನು ಹೊಂದಿಸಿಕೊಂಡು, ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುತ್ತಾರೆ. ಆದರೆ, ಕೆಲವು ಶಾಲೆಗಳಲ್ಲಿ 500ರಿಂದ 1000 ಮಕ್ಕಳಿರುವ ಶಾಲೆಗಳಲ್ಲಿ ಯಾವುದೇ ಬದಲಿ ವ್ಯವಸ್ಥೆ ಮಾಡಲಾಗದೆ. ಕೈಚೆಲ್ಲಿ ಮಕ್ಕಳಿಗೆ ಮನೆಯಿಂದಲೇ ಊಟವನ್ನು ತರುವಂತೆ ಹೇಳುವುದು ಶಾಲಾ ಶಿಕ್ಷಕರಿಗೆ ಅನಿವಾರ್ಯವಾಗಿದೆ ಎಂಬುದು ಕೆಲವು ಶಿಕ್ಷಕರ ಮಾತಾಗಿದೆ.
ಅಕ್ಕಿ ಸರಬರಾಜು ಮಾಡಲು ವಾಹನವಿಲ್ಲ: ಈಗ ಒಂದರೆಡು ದಿನಗಳಲ್ಲಿ ಅಕ್ಕಿ ತಾಲೂಕಿನ ಗೋಡಾನ್‌ಗೆ ಬಂದರೂ ಅಲ್ಲಿಂದ ತಾಲೂಕಿನ ಶಾಲೆಗಳಿಗೆ ಸರಬರಾಜು ಮಾಡಲು ವಾಹನದ ವ್ಯವಸ್ಥೆ ಇಲ್ಲ. ಶಿಕ್ಷಕರು ಅವರ ಹಣವನ್ನು ನೀಡಿ, ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತದೆ. ಅವರ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಲು ಈಗ ಮಳೆಗಾಲ ಆದ್ದರಿಂದ ಲಾರಿಗಳ ಟೆಂಡರ್ ಮುಗಿಯುವ ವರೆವಿಗೂ ಇದೇ ಸಮಸ್ಯೆ ಮುಂದುವರಿದರೂ ಆಶ್ಚರ್ಯವಿಲ್ಲ. ಮಕ್ಕಳು ಊಟವಿಲ್ಲದ್ದೇ ಕಷ್ಟ ಅನುಭವಿಸುತ್ತಿರುವಾಗ ಜನ ಪ್ರತಿನಿಧಿಗಳು ಅಧಿಕಾರಕ್ಕಾಗಿ ರಸ್ತೆಗೆ ಬಂದು ಕಿತ್ತಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.