ಅರಸೀಕೆರೆ: ದೇಶದಲ್ಲಿ ಗಂಟೆ ಲೆಕ್ಕದಲ್ಲಿ ಕೂಲಿ ಪಡೆಯುತ್ತಿರುವ ಸಿಬ್ಬಂದಿ ಎಂದರೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಿ ಮಕ್ಕಳಿಗೆ ನಿತ್ಯ ಉಣಬಡಿಸುವ ಅಡುಗೆ ಸಿಬ್ಬಂದಿ ಇವರುಗಳಿಗೆ ಕಳೆದ ಮೂರು ತಿಂಗಳು ವೇತನವಿಲ್ಲ.
ಶಾಲಾ ಮಕ್ಕಳಿಗೆ ನಿತ್ಯ ಬಿಸಿ ಊಟ ತಯಾರಿಸಿ ಬಡಿಸಿ ಪಾತ್ರೆಗಳನ್ನು ಮತ್ತು ಕೋಣೆಯನ್ನು ಸ್ವತ್ಛಗೊಳಿಸಿ ಹೊರಡುವ ವೇಳೆಗೆ ಮೂರು ಗಂಟೆ ಆಗಿರುತ್ತದೆ. ಆದರೆ ಸರ್ಕಾರ ಹೇಳುವುದು ಇವರು ಕೆಲಸ ಮಾಡುವುದು ದಿನದಲ್ಲಿ ನಾಲ್ಕು ಗಂಟೆ ಮಾತ್ರ ಎನ್ನುತ್ತದೆ. ಇವರಿಗೆ ದಿನಕ್ಕೆ 120 ಕೂಲಿಯನ್ನು ಗೌರವಧನ ಎಂಬ ಹೆಸರಿನಲ್ಲಿ ತಿಂಗಳಿಗೆ 3,600 ಗಳನ್ನು ನೀಡಲಾಗುತ್ತಿದೆ.
ಆಧಾರ್ ಕಾರ್ಡ್ ಲಿಂಕ್ ಆಗಬೇಕೆಂಬ ಕಾರಣವನ್ನು ನೀಡುತ್ತಿರುವ ಇಲಾಖೆ ಮೂರು ತಿಂಗಳಿಂದ ಈ ಪ್ರಕ್ರಿಯೆಯನ್ನು ಪೂರೈಸಲಾಗಿಲ್ಲವೇ? ಆಧಾರ್ ಕಾರ್ಡ್ ಲಿಂಕ್ ಮಾಡಿರುವ ಸಿಬ್ಬಂದಿಗಳಿಗಾದರೂ ರಾಜ್ಯಾದ್ಯಂತ ವೇತನವನ್ನು ಬಿಡುಗಡೆ ಮಾಡಬೇಕಿತ್ತು. ನಮಗೆ ಕನಿಷ್ಠ ಕೂಲಿ ನೀಡಬೇಕೆಂದು ನ್ಯಾಯಾಲಯ ಮೊರೆ ಹೋಗಿದ್ದರು. ದಿನದಲ್ಲಿ ಕೇವಲ ನಾಲ್ಕು ಗಂಟೆ ಮಾತ್ರ ಕೆಲಸ ಮಾಡುವುದರಿಂದ ದಿನದ ಪೂರ ಕೂಲಿಯನ್ನು ಇವರಿಗೆ ನೀಡಲಾಗುವುದಿಲ್ಲ ಎಂಬ ಆದೇಶ ಹೊರ ಬಿದ್ದಿದೆ.
ಅತ್ಯಲ್ಪ ಹಣದಲ್ಲಿ ಸೇವೆ ಮಾಡುವ ಇವರು ನಿತ್ಯ ಮೂರು ಗಂಟೆ ನಂತರ ಬೇರೆ ಕೆಲಸಕ್ಕೂ ಹೋಗಲಾಗುವುದಿಲ್ಲ. ಇವರ ದಿನದ ಆದಾಯ ಕೇವಲ 120ಕ್ಕಷ್ಟೇ ಸೀಮಿತವಾಗಿದೆ. ಬಹುತೇಕ ಎಲ್ಲಾ ಅಡಿಗೆ ಸಿಬ್ಬಂದಿಯು ಆರ್ಥಿಕ ದುರ್ಬಲ ವರ್ಗ ದವರೇ ಆಗಿದ್ದು, ಮೂರು ತಿಂಗಳಿಂದ ಕಿರಾಣಿ ಅಂಗಡಿ, ಮತ್ತು ಮನೆಯ ಬಾಡಿಗೆ ಮೊದಲಾದ ಖರ್ಚು ಗಳಿಗೆ ಎಲ್ಲಡೆ ಸಾಲವನ್ನು ಮಾಡಿಕೊಂಡಿದ್ದಾರೆ.
ಆಧಾರ್ ಕಾರ್ಡ್ ಲಿಂಕ್ ಗಾಗಿ ಜೀವನ ಆಧಾರಕ್ಕೆ ಧಕ್ಕೆ ಆಗಬಾರದು. ಪ್ರತಿ ಶಾಲೆಯಲ್ಲೂ ಬಿಸಿಯೂಟ ಯೋಜನೆಯ ಹಣ ಇರುತ್ತದೆ. ತಾತ್ಕಾಲಿಕವಾಗಿ ಈ ಹಣದಲ್ಲಿ ಸ್ವಲ್ಪ ಹಣವನ್ನು ಕೊಡುವ ವ್ಯವಸ್ಥೆಯನ್ನಾದರೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಬಿಸಿ ಯೋಜನೆಯ ಅಧಿಕಾರಿಗಳು ಜಿಪಂ ಸಿಇಒ ಆರ್ಥಿಕ ಸಂಕಷ್ಟದಲ್ಲಿರುವ ಇವರುಗಳ ಸಮಸ್ಯೆಗೆ ಸಹಾನುಭೂತಿಯಿಂದ ಸ್ಪಂದಿಸಬೇಕಿದೆ.