ದೇವನಹಳ್ಳಿ: ಬೇಸಿಗೆ ಅವಧಿಯಲ್ಲಿ ಮಕ್ಕಳಿಗೆ ರಜೆ ಇರುವುದರಿಂದ ರಜಾ ಅವಧಿಯಲ್ಲಿ ಮಕ್ಕಳಿಗೆ ಬಿಸಿ ಯೂಟ ನೀಡಲು ಸರ್ಕಾರ ಆದೇಶಿಸಿದ್ದು ಜಿಲ್ಲೆಯಲ್ಲಿ 26 ಸಾವಿರ ಮಕ್ಕಳು ನೋಂದಣಿ ಆಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ.
ಏಪ್ರಿಲ್ 2024 ಮತ್ತು ಮೇ ನಲ್ಲಿ ಬೇಸಿಗೆ ರಜೆ ಅವಧಿಯಲ್ಲಿ ಪಿಎಂ ಪೋಷಣ್ ಮಧ್ಯಾಹ್ನ ಉಪಾಹಾರ ಯೋಜನೆಯಡಿ ಬಿಸಿಯೂಟವನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತದೆ. ಶಾಲಾ ಹಂತದಲ್ಲಿ ತರಗತಿವಾರು ಪ್ರತಿ ವಿದ್ಯಾರ್ಥಿಯಿಂದ ಬಿಸಿಯೂಟ ಸ್ವೀಕರಿಸುವ ಸಲುವಾಗಿ ವಿದ್ಯಾರ್ಥಿ ಮತ್ತು ಪೋಷಕರಿಂದ ಒಪ್ಪಿಗೆ ಪತ್ರವನ್ನು ಶಾಲಾ ಮುಖ್ಯ ಶಿಕ್ಷಕರು ಪಡೆದುಕೊಳ್ಳಬೇಕು. ಒಪ್ಪಿಗೆ ಪತ್ರ ಆಧರಿಸಿ ಶಾಲಾ ಹಂತದಲ್ಲಿ ಬಿಸಿಯೂಟ ಸ್ವೀಕರಿಸುವ ಮಕ್ಕಳ ಸಂಖ್ಯಾಬಲ ಗುರುತಿಸಿ ನಿಗದಿತ ನಮೂನೆಯಲ್ಲಿ ತರಗತಿ ವಾರು ಕ್ರೋಢೀಕರಿಸಿ ತಾಪಂ ನಿರ್ದೇಶಕರು ಪಿಎಂ ಪೋಷಣ್ ಇವರಿಗೆ ಸಲ್ಲಿಸಬೇಕು. ತಾಲೂಕು ಹಂತದಲ್ಲಿ ಶಾಲಾವಾರು ಮತ್ತು ತರಗತಿವಾರು ಒಪ್ಪಿಗೆ ಸೂಚಿಸಿರುವ ಮಕ್ಕಳ ಸಂಖ್ಯಾಬಲ ಕ್ರೂಢೀಕರಿಸಿ ತಾಲೂಕು ಮಾಹಿತಿಯನ್ನು ತಾಪಂ ನಿರ್ದೇಶಕರು ಪಿಎಂ ಪೋಷಣ್ ಮಾಹಿತಿ ಸಲ್ಲಿಸಬೇಕು. ತಾಲೂಕು ಮಟ್ಟದ ಪಿಎಂ ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕರು ದೃಢೀಕರಿಸಬೇಕಿದೆ. ಇದನ್ನು ಪಿಎಂ ಪೋಷಣ್ ಯೋಜನೆಯ ಜಿಪಂ ಶಿಕ್ಷಣಾಧಿ ಕಾರಿಗಳಿಗೆ ಸಲ್ಲಿಸಬೇಕಿದೆ. ಆ ಮೂಲಕ ಬರಪಡಿತ ತಾಲೂಕುಗಳ ಮಕ್ಕಳಿಗೆ ರಜೆ ಅವಧಿಯಲ್ಲಿ ಉತ್ತಮ ಆಹಾರ ನೀಡಲು ಅನುಕೂಲವಾಗುತ್ತದೆ.
ತಯಾರಿಗೆ ಸಿದ್ಧತೆ: ಜಿಲ್ಲೆಯ 4 ತಾಲೂಕುಗಳಲ್ಲೂ ಎಲ್ಲಾ ಶಾಲೆಗಳ ಮಕ್ಕಳ ಪಟ್ಟಿ ತಯಾರಿಕೆಗೆ ಸಹಾಯಕ ನಿರ್ದೇಶಕರು ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1ರಿಂದ 8ನೇ ತರಗತಿಯ 69 ಸಾವಿರ ಮಕ್ಕಳಿದ್ದು ಅದರಲ್ಲಿ 26 ಸಾವಿರ ಮಕ್ಕಳು ನೋಂದಣಿ ಮಾಡಿಕೊಳ್ಳಲಿದ್ದಾರೆ. 2024ರ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳ ಒಟ್ಟು 41 ದಿನ ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ ದೊರೆಯಲಿದೆ. ಮಕ್ಕಳ ಸಂಖ್ಯೆ ಅನುಗುಣ ನೋಡಿಕೊಂಡು ಶಾಲೆಯಲ್ಲಿ ಕೊಡಬೇಕು ಅಥವಾ ಬೇರೆ ಎಲ್ಲಿ ಕೊಡಬೇಕು ಬಿಸಿಯೂಟವನ್ನು ರಾಜ್ಯ ಪಿಎಂ ಪೋಷಣ್ ಯೋಜನೆ ನಿರ್ದೇಶಕರ ಜತೆ ಚರ್ಚಿಸಿ ತೀರ್ಮಾನ ಆಗಲಿದೆ.
ಪಟ್ಟಿ ತಯಾರಿಸಲು ಪೋಷಕರ ಜತೆ ಚರ್ಚೆ: ಶಿಕ್ಷಕರು ಬಿಸಿಯೂಟ ಇಚ್ಛಿಸುವ ಮಕ್ಕಳ ಪಟ್ಟಿ ತಯಾರಿಸುವ ಜತೆಗೆ ಪೋಷಕರೊಂದಿಗೆ ಚರ್ಚಿಸಬೇಕು. ಬಿಸಿಯೂಟ ಕಾರ್ಯಕ್ರಮ ಬಡವರ್ಗದ ವಿದ್ಯಾರ್ಥಿಗಳ ಜತೆಗೆ ಕೂಲಿ ಕಾರ್ಮಿಕರ ಹಾಗೂ ಕೆಲಸಗಳಿಗೆ ತೆರಳುವ ಪೋಷಕರ ಮಕ್ಕಳಿಗೆ ಸಹಕಾರಿ ಆಗಲಿದೆ. ಅಲ್ಲದೇ, ಮಕ್ಕಳ ಪೌಷ್ಟಿಕತೆ ಕಾಪಾಡಲು ಇದು ವರದಾನವಾಗಿದೆ. ಒಂದರಿಂದ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಬೇಸಿಗೆ ರಜೆ ವೇಳೆಯಲ್ಲಿ ಬಿಸಿಯೂಟ ವಿತರಿಸಲಾಗುತ್ತದೆ.
ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಇರುವುದರಿಂದ ಸರ್ಕಾರ ಘೋಷಿಸಿರುವ ಶಾಲಾ ಮಕ್ಕಳಿಗೆ ಬೇಸಿಗೆ ಸಂದರ್ಭದಲ್ಲಿ ಬಿಸಿಯೂಟ ನೀಡುವ ಯೋಜನೆ ಮಕ್ಕಳಿಗೆ ಸಹಕಾರಿ. ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಯೋಜನೆ ಅನ್ವಯವಾಗಲಿದೆ.
– ರಾಮಚಂದ್ರ, ಪೋಷಕರು
ಜಿಲ್ಲೆಯ 4 ತಾಲೂಕು ಬರ ಪೀಡಿತ ಪ್ರದೇಶಗಳೆಂದು ಘೋಷಣೆಯಾಗಿದೆ. ಶಾಲೆ ರಜೆ ಅವಧಿಯಲ್ಲಿ ಬಿಸಿಯೂಟ ಸ್ವೀಕರಿಸುವ ಮಕ್ಕಳ ಮಾಹಿತಿಯನ್ನು ಜಿಲ್ಲಾವಾರು ಕ್ರೋಢೀಕರಿಸಲಾಗುತ್ತಿದೆ.
– ಲಲಿತಾ, ಜಿಪಂ ಪಿಎಂ ಪೋಷಣ್ ಯೋಜನೆ ಸಹಾಯಕ ನಿರ್ದೇಶಕಿ