ಮಹಾನಗರ: ದಸರಾ ರಜೆ ಪೂರ್ಣಗೊಂಡು ಶೈಕ್ಷಣಿಕ ಚಟುವಟಿಕೆ ಗುರುವಾರದಿಂದ ಪುನರಾರಂಭವಾಗಿದೆ. ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆ ಮೊದಲ ದಿನ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಾಂಗವಾಗಿ ನಡೆಯಿತು.
ಬಹುದಿನಗಳ ಬಳಿಕ ವಿದ್ಯಾರ್ಥಿಗಳು ಶಾಲೆಗಲ್ಲಿ ಒಟ್ಟಿಗೆ ಕುಳಿತು ಬಿಸಿಯೂಟ ಸವಿದು ಸಂಭ್ರಮಿಸಿದರು.
ಬಹುತೇಕ ಶಾಲೆಗಳಲ್ಲಿ ಮೊದಲ ದಿನ ಅನ್ನ ಸಾಂಬಾರು, ಪಲ್ಯ ಇದ್ದರೆ, ಉಳಿದ ಶಾಲೆಗಳಲ್ಲಿ ಇದರ ಜತೆಗೆ ಪಾಯಸವೂ ಇತ್ತು. ಜತೆಗೆ ಕೆಲವು ಶಾಲೆಯಲ್ಲಿ ಸಿಹಿತಿಂಡಿಯನ್ನೂ ನೀಡಿದ್ದಾರೆ. ಇನ್ನೂ ಕೆಲವು ಶಾಲೆಯಲ್ಲಿ ಮೊದಲ ದಿನ ಮಕ್ಕಳಿಗೆ ದಾನಿಗಳ ಸಹಕಾರದಿಂದ ಐಸ್‌ಕ್ರೀಮ್ ನೀಡಿದ್ದಾರೆ. ಈ ಮೂಲಕ ದಸರಾ ರಜೆ ಮುಗಿಸಿದ 6ರಿಂದ 10ನೇ ತರಗತಿಯ ಸರಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳು ಬಿಸಿಯೂಟ ಪಡೆದಿದ್ದಾರೆ.
ಮಂಗಳೂರು ದಕ್ಷಿಣ, ಉತ್ತರ ಹಾಗೂ ಮೂಡುಬಿದಿರೆ ವ್ಯಾಪ್ತಿಯನ್ನು ಒಳಗೊಂಡಂತೆ ಒಟ್ಟು 23,179 ವಿದ್ಯಾರ್ಥಿಗಳು ಬಿಸಿಯೂಟದ ಲಾಭ ಪಡೆದಿದ್ದಾರೆ. ಮಂಗಳೂರು ದಕ್ಷಿಣದ 187 ಹಾಗೂ ಮಂಗಳೂರು ಉತ್ತರದ 172 ಸರಕಾರಿ, ಅನುದಾನಿತ ಶಾಲೆಯಲ್ಲಿ ಬಿಸಿಯೂಟ ಯೋಜನೆ ಆರಂಭವಾಗಿದೆ. ಈ ಪೈಕಿ ಮಂಗಳೂರು ದಕ್ಷಿಣ (44) ಮಂಗಳೂರು ಉತ್ತರ (76) ಹಾಗೂ ಬಂಟ್ವಾಳ (13)ವ್ಯಾಪ್ತಿಯ ಒಟ್ಟು 133 ಶಾಲೆಗಳಲ್ಲಿ ಇಸ್ಕಾನ್ ವತಿಯಿಂದ ಬಿಸಿಯೂಟ ವಿತರಿಸಲಾಗಿದೆ. ಇಸ್ಕಾನ್ ವತಿಯಿಂದಲೇ ಇಲ್ಲಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗುತ್ತದೆ. ಇದರ ವೆಚ್ಚವನ್ನು ಸರಕಾರ ಇಸ್ಕಾನ್‌ಗೆ ನೀಡುತ್ತದೆ.
ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಪ್ರಾರಂಭವಾಗಿದೆ. ಹಲವು ಶಾಲೆಗಳಲ್ಲಿ ಪಾಯಸದೂಟ ಕೂಡ ಇತ್ತು. ಸುದೀರ್ಘ ಸಮಯದ ಬಳಿಕ ಮಕ್ಕಳು ಬಿಸಿಯೂಟ ಪಡೆದು ಸಂತೋಷಪಟ್ಟಿದ್ದಾರೆ.
–ಉಷಾ ಎಂ., ಕಾರ್ಯನಿರ್ವಾಹಕ ಅಧಿಕಾರಿ, ಅಕ್ಷರದಾಸೋಹ ಯೋಜನೆ-ದ.ಕ.