Advertisement

ವರ್ಷಗಳಿಂದ ಸ್ಥಗಿತಗೊಂಡಿದೆ ಹಾಸ್ಟೆಲ್‌ ಕಾಮಗಾರಿ

03:19 PM Jul 23, 2018 | |

ಚನ್ನಗಿರಿ: ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ಪಟ್ಟಣದಲ್ಲಿ ವಿದ್ಯಾರ್ಥಿನಿಲಯಗಳ ಸಮಸ್ಯೆ ವಿದ್ಯಾಕಾಂಕ್ಷಿಗಳನ್ನು ಕಾಡುತ್ತಿದೆ. ಸ್ನಾತಕೋತ್ತರ ಪದವಿಗಾಗಿ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು ಹಾಸ್ಟೆಲ್‌ ಸೌಲಭ್ಯವಿಲ್ಲದೆ ಪರದಾಡುವ ಸ್ಥಿತಿಯಿದೆ.

Advertisement

ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಹಿಳಾ ಪಿಜಿ ಹಾಸ್ಟೆಲ್‌ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ವಿದ್ಯಾರ್ಥಿಗಳು ಹಾಸ್ಟೆಲ್‌ ಸೌಲಭ್ಯಕ್ಕಾಗಿ ಅಲೆದಾಡುವಂತಾಗಿದೆ. ಕಟ್ಟಡ ಬೇಗ ಪೂರ್ಣಗೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಚಿತ್ರದುರ್ಗ, ದಾವಣೆಗೆರ ಜಿಲ್ಲೆಯ ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಅಧ್ಯಯನಕ್ಕೆಂದು ಪಟ್ಟಣಕ್ಕೆ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಆಡಳಿತ ಮಂಡಳಿ ಕಾಲೇಜು ಕ್ಯಾಂಪಸ್‌ನಲ್ಲಿ ಮಹಿಳಾ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಮುಂದಾಗಿದೆ. ಪ್ರಾರಂಭದಲ್ಲಿ ಹಾಸ್ಟೆಲ್‌ ಕಾಮಗಾರಿ ಭರದಿಂದ ಸಾಗಿದರೂ ನಂತರ ಹಣದ ಕೊರತೆಯಿಂದ ಅರ್ಧಕ್ಕೆ ಸ್ಥಗಿತಗೊಂಡಿತು. ಅಲ್ಲಿಂದ ಈವರೆಗೆ 4ವರ್ಷ ಕಳೆಯುತ್ತ ಬಂದರೂ ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ.

ಗಿಡಗಂಟಿಗಳಿಂದ ಮುಚ್ಚಿಹೋಗಿದೆ ಹಾಸ್ಟೆಲ್‌: ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಒಟ್ಟು 1100 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ನೀಡುವ ಸಲುವಾಗಿ 2015ರಲ್ಲಿ ಯುಜಿಸಿಗೆ ಪತ್ರ ಬರೆದು
ಹಾಸ್ಟೆಲ್‌ಗೆ ಮಂಜೂರಾತಿ ಪಡೆಯಲಾಯಿತು. ದಾವಣಗೆರೆ ವಿಶ್ವವಿದ್ಯಾಲಯದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ ನಂತರ ಒಟ್ಟು 3 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲು ತಿರ್ಮಾನಿಸಲಾಯಿತು. ಮೊದಲ ಹಂತದಲ್ಲಿ ವಿಶ್ವವಿದ್ಯಾಲಯ 40 ಲಕ್ಷ ರೂ. ಬಿಡುಗಡೆ ಮಾಡಿತು. ಉಳಿದಂತೆ 2.60 ಕೋಟಿ ರೂ. ವೆಚ್ಚದ ಕಟ್ಟಡ ಕ್ರಿಯಾಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಪ್ರಸ್ತಾಪನೆಯನ್ನು ಸಲ್ಲಿಸಲಾಗಿದೆ.

ಕಟ್ಟಡದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಆದರೆ ಸರ್ಕಾರಿಂದ ಯಾವುದೇ ಅನುದಾನ
ಇದುವರೆಗೆ ಬಂದಿಲ್ಲ. ವಿವಿಯಿಂದ ಮಂಜೂರು ಆದ 40 ಲಕ್ಷ ರೂ.ಗಳಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಕಟ್ಟಡ
ಅರ್ಧಕ್ಕೆ ನಿಂತಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಹಣಕ್ಕಾಗಿ 4 ವರ್ಷಗಳಿಂದ ಕಾಲೇಜಿನ ಆಡಳಿತ ಮಂಡಳಿಯವರು ಕಾಯುತ್ತಿದ್ದಾರೆ. ಈಗಾಗಲೇ ನಿರ್ಮಿಸಲಾದ ಕಟ್ಟಡ ಪಾಳುಬಿಳುವ ಸ್ಥಿತಿಗೆ ತಲುಪಿದೆ. ಗಡಗಂಟಿಗಳು ಎಲ್ಲೆಡೆ ಬೆಳೆದು
ಕಟ್ಟಡವನ್ನು ಆವರಿಸಿವೆ.

Advertisement

ಖಾಸಗಿ ರೂಂಗಳಿಗೆ ಮೊರೆ: ಉನ್ನತ ಶಿಕ್ಷಣಕ್ಕಾಗಿ ಬರುವಂತಹ ವಿದ್ಯಾರ್ಥಿಗಳು ಕಾಲೇಜ್‌ ಕ್ಯಾಂಪಸ್‌ನಲ್ಲಿ ಹಾಸ್ಟೆಲ್‌ ವ್ಯವಸ್ಥೆಯಿಲ್ಲದೆ ಪಟ್ಟಣದ ಕೆಲ ಖಾಸಗಿ ರೂಂಗಳನ್ನು ದುಪ್ಪಟ್ಟ ಹಣ ನೀಡಿ ಪಡೆಯುವಂತಾಗಿದೆ. ಹಾಗೂ ಊಟಕ್ಕಾಗಿ ಮೆಸ್‌ಗಳ ಮೊರೆ ಹೋಗಿದ್ದಾರೆ. ಇದರಿಂದ ಉನ್ನತ ಶಿಕ್ಷಣವನ್ನು ಪಡೆಯುವುದು ಹೊರೆಯಾಗಿದೆ.

ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಯುಜಿಸಿಯಿಂದ 40 ಲಕ್ಷ ರೂ. ಮಂಜೂರು ಆಗಿತ್ತು. ಅಷ್ಟು ಹಣದಲ್ಲಿ ಆಗುವಷ್ಟು ಕಟ್ಟಡ ನಿರ್ಮಾಣ ಮಾಡಲಾಗಿದೆ. ಇನ್ನಷ್ಟು ಕಾಮಗಾರಿ ಬಾಕಿಯಿದೆ. ಕಾಮಗಾರಿ ಪೂರ್ಣಗೊಳಿಸಲು ಯಾವುದೇ ಅನುದಾನ
ಬಾರದೆ ಇರುವ ಕಾರಣ ಕಾಲೇಜು ಪ್ರಾಂಶುಪಾಲರ ವಶಕ್ಕೆ ಕಟ್ಟಡವನ್ನು ನೀಡಲಾಗಿದೆ.  ಎ.ವಿ. ರವಿಕುಮಾರ್‌, ಸಹಾಯಕ
ಇಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಹಾಸ್ಟೆಲ್‌ ಪ್ರಾರಂಭಿಸಲು ಆಗುವುದಿಲ್ಲ. ಹಾಸ್ಟೆಲ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿನಿಯರಿಗೆ  ತೊಂದರೆಯಾಗಿದೆ. ಅನುದಾನಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.  ಡಾ| ಬಿ.ವಿ. ವೀರಪ್ಪ, ಪ್ರಾಂಶುಪಾಲರು, ಶ್ರೀ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜ್‌, ಚನ್ನಗಿರಿ.

ಕಾಲೇಜಿನಲ್ಲಿ ದಾಖಲಾತಿಯನ್ನು ಪಡೆಯುವಾಗ ಹಾಸ್ಟೆಲ್‌ ಸೌಲಭ್ಯವಿದೆ ಎಂದು ಹೇಳಿದ್ದರು. ಸದ್ಯ ದ್ವಿತೀಯ ವರ್ಷದ ಪಿಜಿಯನ್ನು ಮುಗಿಸಿದ್ದೇವೆ. ಚನ್ನಗಿರಿಯಲ್ಲಿ ಮನೆ ಬಾಡಿಗೆಗೆ ಪಡೆದು ಅಭ್ಯಾಸ ಮಾಡುತ್ತಿದ್ದೇವೆ. ಇಲ್ಲಿಯವರೆಗೂ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿಲ್ಲ. ತಕ್ಷಣ ಹಾಸ್ಟೆಲ್‌ ಪ್ರಾರಂಭಿಸಿದರೆ ಅನುಕೂಲವಾಗಲಿದೆ.  ಹಾಸ್ಟೆಲ್‌ ವಂಚಿತ ವಿದ್ಯಾರ್ಥಿನಿ.

„ಸಿ.ಎಸ್‌. ಶಶೀಂದ್ರ

Advertisement

Udayavani is now on Telegram. Click here to join our channel and stay updated with the latest news.

Next