ಯಲಬುರ್ಗಾ: ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಹೊರವಲಯದಲ್ಲಿ ಎರಡು ವರ್ಷದ ಹಿಂದೆ ಶಂಕುಸ್ಥಾಪನೆಗೊಂಡ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಇನ್ನು ಕಾಲ ಕೂಡಿಬಂದಿಲ್ಲ.
ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲವಾಗಲಿ ಹಾಗೂ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ವಸತಿ ನಿಲಯ ಸಿಗದೇ ಪರದಾಡುತ್ತಿದ್ದರು. ವಿದ್ಯಾರ್ಥಿಗಳ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2 ಕೋಟಿ ಅನುದಾನವನ್ನು ಹಾಸ್ಟೆಲ್ ಕಟ್ಟಡಕ್ಕೆ ನೀಡಲಾಗಿದೆ. ಪಟ್ಟಣದ ಹೊರವಲಯದಲ್ಲಿ ಸ್ವಂತ ಕಟ್ಟಡ ನಿರ್ಮಿಸುತ್ತಿದ್ದು, ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.
ಕಟ್ಟಡ ಕಾಮಗಾರಿಯನ್ನು ನಿರ್ಮಿತಿ ಸಂಸ್ಥೆ ಕೈಗೊಂಡಿದ್ದು, ಇದರ ಉಸ್ತುವಾರಿಯನ್ನು ವಾಸು ಎಂಬ ಎಂಜನಿಯರ್ ನಿರ್ವಹಿಸುತ್ತಿದ್ದಾರೆ. ಆದರೆ ಎರಡು ವರ್ಷ ಕಳೆದರೂ ಕಟ್ಟಡ ಪೂರ್ಣಗೊಂಡಿಲ್ಲ. ನಿರ್ಮಾಣ ಹೊಣೆ ಹೊತ್ತ ನಿರ್ಮಿತಿ ಇಲಾಖೆಯ ನಿರ್ಲಕ್ಷ್ಯದಿಂದ ಕಾಮಗಾರಿ ಅಪೂರ್ಣಗೊಂಡು ನಿಂತಿದೆ.
ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ: ಸದ್ಯ ವಸತಿ ನಿಲಯ ಪಟ್ಟಣದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇಲಾಖೆ ಲಕ್ಷಾಂತರ ರೂ. ವ್ಯಯ ಮಾಡುತ್ತಿದೆ. ಸರಕಾರ ಅನುದಾನ ನೀಡಿದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳಿದ್ದು, ಸೂಕ್ತ ಸೌಲಭ್ಯಗಳಿಲ್ಲದೇ ಸಂಕಷ್ಟ ಎದುರಿಸುವಂತಾಗಿದೆ.
ತ್ವರಿತ ಕಾಮಗಾರಿಗೆ ಆಗ್ರಹ: ನಿರ್ಮಿತಿ ಕೇಂದ್ರದವರು ವಸತಿ ನಿಲಯ ಕಟ್ಟಡ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ವಿದ್ಯಾರ್ಥಿ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶಾಲಾ-ಕಾಲೇಜು, ಹಾಸ್ಟೆಲ್ ಕಟ್ಟಡ ನಿರ್ಮಾಣಗಳ ಉಸ್ತುವಾರಿ ವಹಿಸಿಕೊಂಡಿದ್ದು, ಎಲ್ಲ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. ಶೈಕ್ಷಣಿಕ ಹಿತದೃಷ್ಟಿಯಿಂದ ಸಂಸ್ಥೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ ವಹಿಸುತ್ತಿರುವ ಗುತ್ತಿಗೆದಾರರ ಮೇಲೆ ಚುನಾಯಿತ ಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರಕಾರದಿಂದ ಅನುದಾನ ಬಂದರೂ ವಸತಿ ನಿಲಯ ಕಟ್ಟಡ ನಿರ್ಮಿಸಲು ನಿರ್ಮಿತಿ ಸಂಸ್ಥೆಯ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವ ಪರಿಣಾಮ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ. ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲದೇ ಇದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ.
-ಎಂ. ಸಿದ್ದಪ್ಪ, ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ತಾಲೂಕು ಅಧ್ಯಕ್ಷ
ಲಾಕ್‌ಡೌನ್ ಪರಿಣಾಮ ಕಾರ್ಮಿಕರ ಹಾಗೂ ಸಾಮಗ್ರಿಗಳ ಸಮಸ್ಯೆ ಎದುರಾಗಿತ್ತು. ಇನ್ನು ಮೂರು ತಿಂಗಳು ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸಲಾಗುವುದು.
-ವಾಸು, ಇಂಜನಿಯರ್, ನಿರ್ಮಿತಿ ಇಲಾಖೆ
-ಮಲ್ಲಪ್ಪ ಮಾಟರಂಗಿ