ಪುತ್ತೂರು: ನಗರದ ಉರ್ಲಾಂಡಿಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಅನಂತರದ ವಿದ್ಯಾರ್ಥಿ ನಿಲಯದ ಛಾವಣಿಯ ಶೀಟ್‌ಗಳು ಹಾರಿ ಹೋಗಿವೆ.
ನಗರ ಜು. 30: ನಗರದಲ್ಲಿ ಮೂರು ಕಡೆ ಕಾರ್ಯಾಚರಿಸುತ್ತಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ಅನಂತರದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳ ಕಟ್ಟಡಗಳು ಪರವಾನಿಗೆ ಪಡೆದ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಕಟ್ಟಡಗಳಾಗಿವೆ ಎಂಬ ವಿಚಾರ ಮಾಹಿತಿ ಹಕ್ಕು ಮೂಲಕ ಸಲ್ಲಿಸಿದ ಅರ್ಜಿಯ ಉತ್ತರದಲ್ಲಿ ಬಹಿರಂಗವಾಗಿದೆ.
ಮೂರು ವಿದ್ಯಾರ್ಥಿ ನಿಲಯಗಳ ಕಟ್ಟಡಗಳ ಕುರಿತು ನಗರದ ದರ್ಬೆ ನಿವಾಸಿ ಅಬ್ದುಲ್ ಅಜೀಝ್ ಅವರು ನಗರಸಭೆಗೆ ಮಾಹಿತಿ ಹಕ್ಕು ಮೂಲಕ ಅರ್ಜಿ ಸಲ್ಲಿಸಿದ್ದರು. ಜು. 26ರಂದು ನಗರಸಭಾ ಕಾರ್ಯಾಲಯದಿಂದ ಅರ್ಜಿದಾರರಿಗೆ ಬಂದ ಮಾಹಿತಿಯಲ್ಲಿ ಈ ವಿಚಾರ ಬಹಿರಂಗವಾಗಿದೆ.
•ಚಿಕ್ಕ ಮುಟ್ನೂರು ಗ್ರಾಮದ ಡೋರ್ ನಂ. 1-197/2 ರಲ್ಲಿರುವ ಆರ್‌ಸಿಸಿ ಕಟ್ಟಡವು ವಸತಿ ಉದ್ದೇಶಕ್ಕಾಗಿ ನೀಡಿದ್ದು, ಇದು ಅಧಿಕೃತವಾಗಿದೆ. ಈ ಕಟ್ಟಡಕ್ಕೆ ಎಸಿ ಶೀಟ್ನಿಂದ ಸೇರಿಸಲಾದ ಕಟ್ಟಡವು ಅನಧಿಕೃತವಾಗಿದ್ದು, ಎರಡು ಪಟ್ಟು ತೆರಿಗೆ ವಿಧಿಸಲಾಗಿದೆ. ಈ ಕಟ್ಟಡದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಇದೆ ಎಂಬ ವಿಚಾರ ನಗರಸಭೆಯ ಅಧಿಕಾರಿಗಳಿಗೆ ತಿಳಿದಿಲ್ಲ. ನಗರಸಭೆಯ ಮಾಹಿತಿ ಹಕ್ಕು ಅಧಿಕಾರಿಯು ಜಾಣ ಉತ್ತರ ನೀಡಿದ್ದಾರೆ.
•ಬನ್ನೂರು ಗ್ರಾಮದ ಜೋಡುಕಟ್ಟೆ ಯಲ್ಲಿ ಕಟ್ಟಡ ಪರವಾನಿಗೆಯಂತೆ ಉದ್ದೇಶಿತ ಕಟ್ಟಡಕ್ಕೆ ಕಟ್ಟಡ ನಂಬರ್ ನೀಡಲಾಗಿದೆ. ಇದು ವಾಸ್ತವ್ಯದ ಕಟ್ಟಡವಾಗಿದೆ ಎಂದು ನಗರಸಭೆ ತಿಳಿಸಿದೆ. ಆದರೆ ಈ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕಾಗಿ ನೀಡಲಾಗಿದೆ. ಈ ಕಟ್ಟಡದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯ ಇದೆ. ಈ ಕಟ್ಟಡವು ನಗರಸಭಾ ನಿಯಮಾವಳಿಯಂತೆ ಅಕ್ರಮ ಕಟ್ಟಡದ ಸಾಲಿಗೆ ಸೇರುತ್ತದೆ. ಈ ವಾಸ್ತವ ವಿಚಾರವನ್ನು ಮರೆಮಾಚಿ ನಗರಸಭೆ ಮಾಹಿತಿ ದಾರರಿಗೆ ಉತ್ತರ ನೀಡಿದೆ.
•ನಗರದ ಉರ್ಲಾಂಡಿಯಲ್ಲಿರುವ ಕಟ್ಟಡ ನಂ. 1-751, 1-751/1 ಎಸಿ ಶೀಟ್ ಕಟ್ಟಡವು ವಸತಿ ಕಟ್ಟಡವಾಗಿರುತ್ತದೆ ಹಾಗೂ ಕಟ್ಟಡ ನಂ. 1-752 ಆರ್‌ಸಿಸಿ ಕಟ್ಟಡವಾಗಿದ್ದು, ಕೆಎಂಎಫ್ -24ರ ನಮೂನೆ ಪುಸ್ತಕದಲ್ಲಿ ವಾಣಿಜ್ಯ ಉದ್ದೇಶ ಎಂಬುದಾಗಿ ಕಂಡುಬರುತ್ತದೆ ಎಂದು ಮಾಹಿತಿ ಹಕ್ಕು ಅಧಿನಿಯಮದಡಿ ಅಧಿಕಾರಿಗಳು ಉತ್ತರಿಸಿದ್ದಾರೆ.
ವಾಸ್ತವ ಮರೆಮಾಚಿದ್ದಾರೆ
ಉರ್ಲಾಂಡಿಯಲ್ಲಿರುವ ಕಟ್ಟಡವೇ ಮೆಟ್ರಿಕ್ ಅನಂತರದ ವಿದ್ಯಾರ್ಥಿ ನಿಲಯವಾಗಿದ್ದು, ಸೋಮವಾರ ರಾತ್ರಿ ಈ ಕಟ್ಟಡದ ಛಾವಣಿಗೆ ಹೊದಿಸಿದ ಸಿಮೆಂಟ್ ಶೀಟ್‌ಗಳು ಹಾರಿಹೋಗಿವೆ. ಇದು ನಿಯಮ ಬಾಹಿರ ಕಟ್ಟಡವಾದರೂ ವಾಸ್ತವವನ್ನು ಮರೆಮಾಚಿ ಉತ್ತರ ನೀಡುವ ಪ್ರಯತ್ನವನ್ನು ನಗರಸಭೆಯ ಮಾಹಿತಿ ಹಕ್ಕು ಅಧಿಕಾರಿ ಮಾಡಿದ್ದಾರೆ ಎನ್ನುವುದು ಅಬ್ದುಲ್ ಅಜೀಜ್ ಅವರ ವಾದ.