ಕಲಬುರಗಿ: ಸರಕಾರಿ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ವಿನಾ ಕಾರಣ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಹಲವು ತಿಂಗಳಿಂದ ವೇತನವನ್ನು ಸರಿಯಾಗಿ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಬಾಕಿ ಇರುವ ವೇತನ ನೀಡುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಆಗ್ರಹಿಸಿದೆ.
ಸಚಿವರಿಗೆ ಮನವಿ ಸಲ್ಲಿಸಿರುವ ಸಂಘದ ಸದಸ್ಯರು, ಇದಕ್ಕೂ ಮುನ್ನ ಸಚಿವರ ಮನೆ ಮುಂದೆ ಘೋಷಣೆಗಳನ್ನು ಕೂಗಿ
ನ್ಯಾಯಕ್ಕಾಗಿ ಆಗ್ರಹಿಸಿದರು. ಸರಕಾರ ನಿಗದಿ ಪಡಿಸಿರುವ ಕನಿಷ್ಠ ವೇತನ ಜಾರಿ ಮಾಡಬೇಕು. ಇದರಿಂದ ಕಿರುಕುಳ ತಪ್ಪುತ್ತದೆ. ಅಲ್ಲದೆ, ಕಳೆದ ಐದಾರು ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಒಂದು ಸಾವಿರ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಂಕಷ್ಟದಲ್ಲಿದ್ದಾರೆ. 2016ರಲ್ಲಿ ನೌಕರರ ಸಂಬಳವನ್ನು ಹೆಚ್ಚು ಮಾಡಿದಾಗಿನಿಂದ ಅಧಿಕಾರಿಗಳು ಕಿರುಕುಳ ನೀಡಿ ನೌಕರರನ್ನು ಕೆಲಸದಿಂದ ತೆಗೆದು ಹಾಕಲು ಮಸಲತ್ತು ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ. ಇದರಿಂದ 500ರೂ.ಗಳಲ್ಲಿ ಕೆಲಸ ಮಾಡುತ್ತಾ ಬಂದಿರುವ ಸಿಬ್ಬಂದಿ ಈಗ ರಕ್ಷಣೆ ಇಲ್ಲದೆ ಅಪಾಯ ಎದುರಿಸುವಂತಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ವಸತಿನಿಲಯದ ನಾಲ್ವರು ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ನಿಲಯಗಳಲ್ಲಿ ನೌಕರರಿಗೆ ನೀವು ವೇತನಕ್ಕೆ ಆಗ್ರಹಿಸಿ ಮಾಡುವ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಕೆಲಸದಿಂದ ತೆಗೆಯುತ್ತೇವೆ ಎಂದು ಭಯವೊಡ್ಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ 10-12 ತಿಂಗಳಿಂದ ಸಂಬಂಳ ನೀಡಿಲ್ಲ. ಹಣ ನೀಡಿದವರಿಗೆ ಸಂಬಳ ನೀಡಲಾಗುತ್ತಿದೆ ಎಂದು ದೂರಿದ್ದಾರೆ. ಕಳೆದ 19ರಿಂದ ಬಾಕಿ ವೇತನಕ್ಕೆ ಆಗ್ರಹಿಸಿ ಧರಣಿ ನಡೆಸುತ್ತಿದ್ದರೂ, ನಮ್ಮ ಗೋಳು ಯಾರೂ ಕೇಳುತ್ತಿಲ್ಲ. ಯಾವ ಅಧಿಕಾರಿಯೂ ನಮ್ಮ ಬೇಡಿಕೆಯನ್ನು ಕೇಳಲು ತಯಾರಿಲ್ಲ. ಆದ್ದರಿಂದ ಕೂಡಲೇ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಕಾರ್ಯದರ್ಶಿ ಮೋಹನ ಕಟ್ಟಿಮನಿ ಈ ಸಂದರ್ಭದಲ್ಲಿದ್ದರು.