Advertisement

ಹಾಸ್ಟೆಲ್‌ಗ‌ಳು ಬಂದ್‌;ಅಂಗವಿಕಲ ಮಕ್ಕಳು ಮನೆಗೆ

11:52 AM Apr 03, 2020 | Suhan S |

ಹುಬ್ಬಳ್ಳಿ: ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಅಂಗವಿಕಲ ವಿದ್ಯಾರ್ಥಿನಿಲಯಗಳನ್ನು ಬಂದ್‌ ಮಾಡಲಾಗಿದ್ದು, ಅಲ್ಲಿದ್ದ ಎಲ್ಲ ಮಕ್ಕಳನ್ನು ಅವರವರ ಮನೆಗಳಿಗೆ ಕಳುಹಿಸಲಾಗಿದೆ.

Advertisement

ಇಲ್ಲಿನ ಆನಂದನಗರ ರಸ್ತೆಯಲ್ಲಿರುವ ಅಂಧಮಕ್ಕಳ ಸರಕಾರಿ ಪಾಠಶಾಲೆಯಲ್ಲಿ 1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ.16ರಿಂದ 23ರವರೆಗೆ ಪರೀಕ್ಷೆಗಳನ್ನು ನಡೆಸಿ 23ರಿಂದ ಮಕ್ಕಳನ್ನು ಮನೆಗಳಿಗೆ ಕಳುಹಿಸಿಕೊಡಲಾಯಿತು. ಏಳನೇ ತರಗತಿ ಪರೀಕ್ಷೆ ಕುರಿತು ಮಕ್ಕಳಿಗೆ ನಂತರ ತಿಳಿಸಲಾಗುವುದು ಎಂದು ತಿಳಿಸಲಾಗಿತ್ತು. ಮಾ.31ರೊಳಗೆ ವಿದ್ಯಾರ್ಥಿ ನಿಲಯವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಇಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 42 ಜನ ವಿದ್ಯಾರ್ಥಿಗಳು ಹಾಗೂ ಏಳು ಜನ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದರು. 23 ರಂದು ಕೇವಲ ಅಗತ್ಯ ಕಾರ್ಯಕ್ಕೆಂದು ಇಬ್ಬರನ್ನು ಮಾತ್ರ ಇಡಲಾಗಿದ್ದು, 31ರಂದು ಅವರನ್ನೂ ಮನೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಮುಖೋಪಾಧ್ಯಾಯ ಅಣ್ಣಪ್ಪ ಕೋಳಿ ಮಾಹಿತಿ ನೀಡಿದರು.

ಇಲ್ಲಿನ ವಿಶ್ವಧರ್ಮ ಅಂಗವಿಕಲರ ಮಕ್ಕಳ ಶಾಲೆಯಲ್ಲಿ ಐವರು ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಮೂವರು ವಿದ್ಯಾರ್ಥಿಗಳು ಬನಹಟ್ಟಿಯವರಾಗಿದ್ದು, ಒಬ್ಬ ವಿದ್ಯಾರ್ಥಿ ಅಫಜಲ್ಪುರ ಹಾಗೂ ಇನ್ನೊಬ್ಬ ವಿದ್ಯಾರ್ಥಿನಿ ಬೀದರ ಬಳಿಯ ಹಳ್ಳಿಗೆ ಸೇರಿದವಳು. ಲಾಕ್‌ ಡೌನ್‌ ಆಗುವ ಪೂರ್ವದಲ್ಲಿ ಮಾ.23ರಂದು ಒಟ್ಟು 112 ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕಳುಹಿಸಿಕೊಡಲಾಗಿದ್ದು, ಎಂಟು ವಿದ್ಯಾರ್ಥಿಗಳಷ್ಟೇ ಸದ್ಯ ಉಳಿದುಕೊಂಡಿದ್ದಾರೆ. ಬೀದರ, ಅಫಜಲಪುರ ಹಾಗೂ ಬನಹಟ್ಟಿ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿಗಳ ಪರವಾನಗಿ ಪಡೆದು ಅವರ ಮನೆಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸಂಸ್ಥೆ ಮುಖ್ಯಸ್ಥ ಐ.ಕೆ.ಲಕ್ಕುಂಡಿ ಮಾಹಿತಿ ನೀಡಿದರು.

ಇನ್ನು ನೇಕಾರ ನಗರದ ವಿಶ್ವಧರ್ಮ ಶಾಲೆಯಲ್ಲಿ 89 ವಿದ್ಯಾರ್ಥಿಗಳಿದ್ದು, ಈಗಾಗಲೇ ಅಲ್ಲಿನ 83 ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕಳುಹಿಸಿಕೊಡಲಾಗಿದೆ. ಇನ್ನುಳಿದ ಆರು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡುವ ಮೂಲಕ ನೋಡಿ ಕೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ಮೇಲ್ವಿಚಾರಕಿ ಯಶೋಧಾ ಅವರು ಮಾಹಿತಿ ನೀಡಿದರು.

ಫಲಿತಾಂಶ ಸಿದ್ದ : ಇಲ್ಲಿನ ಆನಂದನಗರ ಅಂಧಮಕ್ಕಳ ಶಾಲೆಯ 1ರಿಂದ 6ನೇ ತರಗತಿ ಮಕ್ಕಳ ಫಲಿತಾಂಶ ಈಗಾಗಲೇ ಸಿದ್ದಪಡಿಸಲಾಗುತ್ತಿದ್ದು, ಇದೀಗ ಸರಕಾರ ಏಳನೇ ತರಗತಿ ಪರೀಕ್ಷೆಗಳನ್ನೂ ರದ್ದುಪಡಿಸಿದೆ. ಆ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಕೂಡಲೇ ಸಿದ್ದಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುವುದು. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ 23ರಂದು ಎಲ್ಲ ಮಕ್ಕಳನ್ನು ಅವರ ಮನೆಗಳಿಗೆ ಕಳುಹಿಸಿಕೊಡಲಾಗಿದ್ದು, ಸದ್ಯ ವಿದ್ಯಾರ್ಥಿನಿಲಯವನ್ನು ಸರಕಾರದ ಆದೇಶದಂತೆ ಬಂದ್‌ ಮಾಡಲಾಗಿದೆ. -ಅಣ್ಣಪ್ಪ ಕೋಳಿ, ಮುಖೋಪಾಧ್ಯಾಯ, ಸರಕಾರಿ ಅಂಧಮಕ್ಕಳ ಶಾಲೆ

Advertisement

ಪರವಾನಿಗೆಗೆ ಕಾಯುತ್ತಿದ್ದೇವೆ : ಇಲ್ಲಿನ ಗಬ್ಬೂರನಲ್ಲಿರುವ ವಿಶ್ವಧರ್ಮ ಅಂಗವಿಕಲರ ಮಕ್ಕಳ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಈಗಾಗಲೇ ಅವರವರ ಮನೆಗಳಿಗೆ ಕಳುಹಿಸಿಕೊಡಲಾಗಿದೆ. ಇನ್ನುಳಿದ ಐವರು ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲು ಜಿಲ್ಲಾಧಿಕಾರಿಗಳ ಪರವಾನಿಗೆಗೆ ಕಾಯುತ್ತಿದ್ದೇವೆ. ಈ ನಿಟ್ಟಿನಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲಾಗುವುದು. – ಐ.ಕೆ.ಲಕ್ಕುಂಡಿ, ವಿಶ್ವಧರ್ಮ ಅಂಗವಿಕಲ ಸಂಸ್ಥೆಯ ಮುಖ್ಯಸ್ಥ

 

­-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next