Advertisement

ಮೂಲ ಸೌಕರ್ಯಗಳ ಒದಗಣೆ, ಜಾಗೃತಿ ಅಭಿಯಾನ

10:58 AM Apr 24, 2018 | Team Udayavani |

ಮಹಾನಗರ: ಮತದಾರರನ್ನು ಮತಗಟ್ಟೆಗಳತ್ತ ಸೆಳೆದು ಮತದಾನ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಚುನಾವಣಾ ಆಯೋಗವು ವಿನೂತನ ಪ್ರಯತ್ನಗಳನ್ನು ಮಾಡುತ್ತಿದೆ. ಜಿಲ್ಲೆಯಲ್ಲಿ ‘ಸ್ವೀಪ್‌’ ಸಮಿತಿಯು ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳ ಒದಗಣೆ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದೆ.

Advertisement

ಆಯೋಗ ಈ ಬಾರಿ ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳತ್ತ ವಿಶೇಷ ಆಸಕ್ತಿ ವಹಿಸಿರುವುದು ಗಮನಾರ್ಹ. ಈ ಹಿಂದೆ ಕನಿಷ್ಠ ಮೂಲಸೌಕರ್ಯ ಪರಿಕಲ್ಪನೆ (ಬೇಸಿಕ್‌ ಮಿನಿಮಮ್‌ ಫೆಸಿಲೀಟಿಸ್‌ -ಬಿಎಂಎಫ್‌) ಜಾರಿಗೆ ತಂದಿತ್ತು. ಈಗ ಅದನ್ನು ಕನಿಷ್ಠ ಮೂಲ ಸೌಕರ್ಯ ಖಾತ್ರಿ (ಆಶ್ಯುರ್ಡ್‌ ಮಿನಿಮಮ್‌ ಫೆಸಿಲಿಟೀಸ್‌-ಎಎಂಎಫ್‌) ಎಂಬುದಾಗಿ ಮರು ವ್ಯಾಖ್ಯಾನಗೊಳಿಸಿ ಅನುಷ್ಠಾನಿಸಲಿದೆ. ಇದು ಗರಿಷ್ಠ ಮತದಾನ ನಡೆಯಲು ಆಯೋಗದ ಮುತುವರ್ಜಿ.

ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಆದ್ಯತೆಯಲ್ಲಿ ಮತದಾನಕ್ಕೆ ಅವಕಾಶ, ಸುಗಮ ಮತ ಚಲಾವಣೆಗಾಗಿ ನಾಮಫಲಕ ಅಳವಡಿಕೆ, ಮಹಿಳಾ ಸ್ನೇಹಿ ಮತಗಟ್ಟೆ, ಸ್ವಯಂಸೇವಕರಿಂದ ನಗುಮುಖದ ಸೇವೆ, ಮತದಾರ ಸ್ನೇಹಿ ಪೊಲೀಸ್‌ ಸೇವೆಗಳನ್ನು ಆಯೋಜಿಸಲಾಗುತ್ತಿದೆ.

ಅಂಗವಿಕಲರಿಗೆ ವಿಶೇಷ ವ್ಯವಸ್ಥೆ
ಅಂಗವಿಕಲರು ಹಾಗೂ ಅಂಧರಿಗೆ ಮತದಾನ ಅನುಕೂಲಕ್ಕಾಗಿ ಆಯೋಗ ವಿಶೇಷ ಕ್ರಮ ಕೈಗೊಂಡಿದೆ. ಅವರಿಗಾಗಿ ಎಲ್ಲ ಮತಗಟ್ಟೆಗಳು ನೆಲ ಅಂತಸ್ತಿನಲ್ಲೇ ಇರಲಿವೆ ಮತ್ತು ಅಲ್ಲಿ ರ್‍ಯಾಂಪ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮತ ಚಲಾವಣೆಯಲ್ಲಿ ಅವರಿಗೆ ಮೊದಲ ಆದ್ಯತೆ, ಮತಗಟ್ಟೆ ಬಳಿಯೇ ಅವರ ವಾಹನ ನಿಲುಗಡೆಗೆ ಅವಕಾಶ ಇರುತ್ತದೆ. ಅಂಧರಿಗಾಗಿ ಬ್ರೈಲ್‌ ಲಿಪಿ ಸಹಿತ ಮತಯಂತ್ರಗಳು ಇರುತ್ತವೆ. ಪ್ರತೀ ಕ್ಷೇತ್ರದ ಅಂಗವಿಕಲ ಹಾಗೂ ಅಂಧ ಮತದಾರರನ್ನು ಮೊದಲೇ ಗುರುತಿಸಿ, ಅದಕ್ಕೆ ಅನುಗುಣವಾಗಿ ಆಯಾ ಮತಗಟ್ಟೆಗಳಲ್ಲಿ ಈ ವ್ಯವಸ್ಥೆಗಳನ್ನು ರೂಪಿಸುವಂತೆ ಆಯೋಗ ನಿರ್ದೇಶನ ನೀಡಿದೆ.

ಮತದಾರ ಮಾರ್ಗದರ್ಶಿ
ಮತದಾರರಿಗೆ ಕನ್ನಡ/ಇಂಗ್ಲಿಷ್‌ನಲ್ಲಿ ಮತದಾರ ಮಾರ್ಗದರ್ಶಿ ವಿತರಿಸುವ ವ್ಯವಸ್ಥೆಯನ್ನು ಈ ಬಾರಿ ಆಯೋಗ ಕೈಗೊಂಡಿದೆ. ಇದು ಮತದಾನ ದಿನಾಂಕ ಹಾಗೂ ಸಮಯ, ಬೂತ್‌ ಮಟ್ಟದ ಅಧಿಕಾರಿಗಳ ದೂರವಾಣಿ ಸಂಖ್ಯೆ, ಮುಖ್ಯ ವೆಬ್‌ಸೈಟ್‌ಗಳು, ಸಹಾಯವಾಣಿ ಸಂಖ್ಯೆ, ಗುರುತು ಚೀಟಿ, ಮತದಾನ ನಿಯಮಗಳನ್ನು ಒಳಗೊಂಡಿದೆ. ಬಿಎಲ್‌ಒಗಳು ಭಾವಚಿತ್ರವಿರುವ ಮತದಾರ ಚೀಟಿಯೊಂದಿಗೆ ಈ ವೋಟರ್‌ ಗೈಡ್‌ಗಳನ್ನು ವಿತರಿಸುತ್ತಾರೆ.

Advertisement

ಮತದಾನ ವಿಭಾಗದ ಎತ್ತರ ಪರಿಷ್ಕರಣೆ
ಈ ಬಾರಿ ವಿವಿಪ್ಯಾಟ್‌ ಬಳಕೆಯಾಗುವುದರಿಂದ ಗೌಪ್ಯತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಆಯೋಗವು ಮತಗಟ್ಟೆಗಳಲ್ಲಿ ಮತದಾನ ವಿಭಾಗದ ಎತ್ತರವನ್ನು ಎರಡೂವರೆ ಅಡಿ (30 ಇಂಚು)ಗೆ ಏರಿಸುವಂತೆ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಹವಾಮಾನ ಪರಿಣಾಮ ಬೀರುವ ಸಾಧ್ಯತೆ 
ಮತ ಚಲಾವಣೆ ಪ್ರಮಾಣದ ಮೇಲೆ ಆ ದಿನದ ಹವಾಮಾನ ಕೂಡ ಪರಿಣಾಮ ಬೀರುತ್ತದೆ. ಉತ್ತರ ಕರ್ನಾಟಕ ಹಾಗೂ ಕರಾವಳಿಯಲ್ಲಿ ಮೇಯಲ್ಲಿ ಬಿಸಿಲಿನ ತೀವ್ರತೆ, ಉಷ್ಣಾಂಶ ಜಾಸ್ತಿ ಇರುವುದು ವಾಡಿಕೆ. ಆದರೆ ಮೇ 12ರ ಹವಾಮಾನವನ್ನು ಈಗಲೇ ಊಹಿಸುವುದು ಅಸಾಧ್ಯ. ವಾಡಿಕೆಯಂತೆ ಮೇಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿ ಗರಿಷ್ಠ ಉಷ್ಣಾಂಶ ಅಧಿಕಗೊಳ್ಳುವ ಸಾಧ್ಯತೆಯಿದೆ. ಮಧ್ಯಾಹ್ನದ ಬಳಿಕ ಗುಡುಗು, ಮಿಂಚು ಸಹಿತ ಮಳೆಯಾಗುವ ಸಂಭವವಿರುತ್ತದೆ, ಇದು ನಿರೀಕ್ಷಿತ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಪಿ.ಎಸ್‌. ಪಾಟೀಲ್‌ ‘ಉದಯವಾಣಿ’ಗೆ ತಿಳಿಸಿದ್ದಾರೆ .

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next