Advertisement

Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ

03:03 PM Sep 19, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆಯಾ..? ಇಂತಹುದೊಂದು ಸುಳಿವನ್ನು ಇತ್ತೀಚಿನ ಬೆಳವಣಿಗೆಗಳು ನೀಡಿವೆ.

Advertisement

ಹೌದು.. ನಾನು ಚನ್ನಪಟ್ಟಣ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಲ್ಲ ಎಂದು ಆರಂಭದಿಂದಲೇ ಹೇಳುತ್ತಿರುವ ಡಿ.ಕೆ.ಸುರೇಶ್‌ ಚನ್ನಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಆಸಕ್ತಿ ತೋರಿದ್ದಾರೆ.

ಮತ್ತೂಂದೆಡೆ ಮೈತ್ರಿ ಪಾಳಯವನ್ನು ಎದುರಿಸುವ ಸಮರ್ಥ ಅಭ್ಯರ್ಥಿ ಕೊರತೆಯು ಕಾಂಗ್ರೆಸ್‌ ಪಾಳಯದಲ್ಲಿ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿ.ಕೆ. ಸುರೇಶ್‌ ಅವರನ್ನು ಕಣಕ್ಕಿಳಿಸುವ ಸಿದ್ಧತೆ ಕೈಪಾಳಯದಲ್ಲಿ ನಡೆಯುತ್ತಿರುವುದನ್ನು ಕೆಲ ಬೆಳವಣಿಗೆಗಳು ತಿಳಿಸುತ್ತಿವೆ.

ಚನ್ನಪಟ್ಟಣ ಉಪಚುನಾವಣೆಗೆ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದು ಡಿ.ಕೆ.ಸುರೇಶ್‌ ಆರಂಭದಲ್ಲೇ ಹೇಳಿದ್ದರು. ಸದ್ಯಕ್ಕೆ ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್‌ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲವಾದರೂ, ಚನ್ನಪಟ್ಟಣದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಹೆಚ್ಚು ಓಡಾಡುತ್ತಿರುವುದೇ ಇವರು. ಇನ್ನು ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಆಪರೇಷನ್‌ ಹಸ್ತ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲೂ ಡಿಕೆಸು ಪಾತ್ರ ಪ್ರಮುಖವಾಗಿದೆ. ಇದೆಲ್ಲವೂ ಡಿ.ಕೆ.ಸುರೇಶ್‌ ಅಭ್ಯರ್ಥಿಯಾಗುತ್ತಾರೆ ಎಂಬ ಅಭಿಪ್ರಾಯ ಗಟ್ಟಿಗೊಳ್ಳುವಂತೆ ಮಾಡುತ್ತಿದೆ.

ಸ್ಥಳೀಯ ಕಾರ್ಯಕರ್ತರ ಒತ್ತಡ: ಕಾಂಗ್ರೆಸ್‌ನಿಂದ ಯೋಗೇಶ್ವರ್‌ ಹೊರನಡೆದ ಬಳಿಕ ಚನ್ನಪಟ್ಟಣದಲ್ಲಿ ಎದುರಾದ 2 ಉಪಚುನಾವಣೆ, 3 ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ ಠೇವಣಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 2013ರಲ್ಲಿ ನಡೆದ ಲೋಕಸಭಾ ಉಪಚುನಾವಣೆ, 2014,2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ಡಿ.ಕೆ. ಸುರೇಶ್‌ ಹೆಚ್ಚಿನ ಮತವನ್ನು ಚನ್ನಪಟ್ಟಣ ಕ್ಷೇತ್ರದಲ್ಲಿ ಪಡೆದುಕೊಂಡಿದ್ದರಾದರೂ, ಅದಕ್ಕೆ ಕಾರಣ 2 ಬಾರಿ ಯೋಗೇಶ್ವರ್‌ ಜೊತೆಗಿದಿದ್ದು, ಮತ್ತೂಂದು ಬಾರಿ ಕುಮಾರಸ್ವಾಮಿ ಬೆಂಬಲ ನೀಡಿದ್ದು ಕಾರಣ. 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಚನ್ನಪಟ್ಟಣದಲ್ಲಿ ಕೇವಲ 15 ಸಾವಿರ ಮತಪಡೆದು ಠೇವಣಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂತದ್ದರಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ವಸಾಮರ್ಥ್ಯದ ಮೇಲೆ 85 ಸಾವಿರ ಮತಗಳನ್ನು ಗಳಿಸಿರುವುದರ ಹಿಂದೆ ಡಿ.ಕೆ.ಸುರೇಶ್‌ ತಂತ್ರಗಾರಿಕೆ, ಹಾಗೂ ಹೆಸರು ಕೆಲಸ ಮಾಡಿದೆ.

Advertisement

ಈ ಕಾರಣಕ್ಕಾಗಿ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್‌ ಅವರನ್ನೇ ಕಣಕ್ಕಿಳಿಸುವುದು ಸೂಕ್ತ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಡಿ.ಕೆ.ಸುರೇಶ್‌ ಅವರೇ ನಮ್ಮ ಅಭ್ಯರ್ಥಿಯಾಗ ಬೇಕು ಎಂಬ ಅಭಿಪ್ರಾಯ ಸ್ಥಳೀಯ ಕಾರ್ಯಕರ್ತರಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ಈ ಸಂಬಂಧ ಪಕ್ಷದ ಆಂತರಿಕ ವೇದಿಕೆಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಡಿ.ಕೆ.ಸುರೇಶ್‌ ಅವರೇ ಕಣಕ್ಕಿಳಿಯ ಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಹುತೇಕ ಕೈ ನಾಯಕರು, ಬೇರೆ ಪಕ್ಷದಿಂದ ವಲಸೆ ಬಂದಿರುವ ಮುಖಂಡರು ನೇರವಾಗಿ ಡಿ.ಕೆ.ಸುರೇಶ್‌ ಅವರ ಸಂಪರ್ಕದಲ್ಲಿದ್ದು, ಅವರ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ಅನುದಾನಗಳಲ್ಲಿ ಡಿ.ಕೆ.ಸುರೇಶ್‌ ಪಾತ್ರ: ಉಪಚು ನಾವಣೆ ಘೋಷಣೆಯಾದ ಬೆನ್ನಲ್ಲೇ ಚನ್ನಪಟ್ಟಣಕ್ಕೆ ಅನುದಾನದ ಹೊಳೆ ಹರಿದು ಬಂದಿದೆ. ಚನ್ನಪಟ್ಟಣ ದಲ್ಲಿ 5 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವ ಸಂಬಂಧ ಡಿ. ಕೆ.ಸುರೇಶ್‌ ಚನ್ನಪಟ್ಟಣದ ಕಾಂಗ್ರೆಸ್‌ ಮುಖಂಡರಾದ ರಘುನಂದನ್‌ ರಾಮಣ್ಣ ಜತೆಗೂಡಿ ವಸತಿ ಸಚಿವರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಚನ್ನಪಟ್ಟಣ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ 500 ಕೋಟಿ ರೂ. ಕೊಡುಗೆ ನೀಡಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಗಂಗಾಧರ್‌ ಸುದ್ದಿಗೋಷ್ಠಿ ನಡೆಸಿ ತಿಳಿಸುವ ಜತೆಗೆ ಇದೆಲ್ಲದರ ಹಿಂದೆ ಡಿ.ಕೆ.ಸುರೇಶ್‌ ಶ್ರಮವಿದೆ ಎಂದು ಹೇಳುವ ಮೂಲಕ ಡಿ.ಕೆ.ಸುರೇಶ್‌ ಅವರ ಪರ ಪರೋಕ್ಷವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ಎಲ್ಲ ಬೆಳವಣಿಗೆ ನೋಡಿದರೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್‌ ಅಭ್ಯರ್ಥಿಯಾಗಲಿದ್ದಾರೆ ಎಂಬ ಸಂಗತಿ ಬಲಗೊಳ್ಳುತ್ತಿದೆ.

ಡಿ.ಕೆ.ಸುರೇಶ್‌ ಅಭ್ಯರ್ಥಿಯಾಗಲು ಇರುವ ಕಾರಣಗಳು:

ಚನ್ನಪಟ್ಟಣ ಅಭಿವೃದ್ಧಿ ವಿಚಾರದಲ್ಲಿ ಸಕ್ರಿಯವಾಗಿರುವ ಡಿ.ಕೆ.ಸುರೇಶ್‌, ಕೆಲ ಸಚಿವರು, ಸರ್ಕಾರಿ ಇಲಾಖೆಗಳಿಗೆ ಖುದ್ದು ಚನ್ನಪಟ್ಟಣ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸುತ್ತಿರುವುದು.

ಇತ್ತೀಚಿಗೆ ರಾಮನಗರದಲ್ಲಿ ಚನ್ನಪಟ್ಟಣ ಉಪಚುಣಾವಣೆ ಸಂಬಂಧ ಸಭೆ ನಡೆಸಿದ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ದತ್ತ ಅವರ ಸಮ್ಮುಖದಲ್ಲಿ ಚನ್ನಪಟ್ಟಣದ ಎಲ್ಲಾ ಮುಖಂಡರು ಡಿ. ಕೆ.ಸುರೇಶ್‌ ಅವರೇ ಅಭ್ಯರ್ಥಿಯಾಗಬೇಕು ಎಂದಿರುವುದು.

ಚನ್ನಪಟ್ಟಣದಲ್ಲಿ ಸ್ಥಳೀಯವಾಗಿ ಸಮರ್ಥ ಅಭ್ಯರ್ಥಿಗಳು ಯಾರೂ ಇಲ್ಲದ ಕಾರಣ ಡಿ.ಕೆ.ಸುರೇಶ್‌ ಅವರನ್ನೇ ಕಣಕ್ಕಿಳಿಸಬೇಕು ಎಂದು ಸ್ಥಳೀಯ ಕಾರ್ಯಕರ್ತರು ಒತ್ತಡ

ಚನ್ನಪಟ್ಟಣ ನಗರಸಭೆಯ ಜೆಡಿಎಸ್‌ನ 12ಕ್ಕೂ ಹೆಚ್ಚು ಸದಸ್ಯರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ , ಕೆಲ ಬಿಜೆಪಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಡಿ.ಕೆ.ಸುರೇಶ್‌ ಪ್ರಮುಖ ಪಾತ್ರ

ಚನ್ನಪಟ್ಟಣದ ಕಾಂಗ್ರೆಸ್‌ ರಾಜಕೀಯದ ಕೇಂದ್ರ ಬಿಂದು ಡಿ.ಕೆ.ಸುರೇಶ್‌ ಎನಿಸಿದ್ದು, ಡಿ.ಕೆ.ಸುರೇಶ್‌ ಅಭ್ಯರ್ಥಿಯಾದರೆ ಯಾವುದೇ ಪ್ರತಿರೋಧವಿಲ್ಲದೇ ಎಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಸಹಮತ ವ್ಯಕ್ತಪಡಿಸುತ್ತಿರುವುದು.

ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ವರಿಷ್ಠರು ಘೋಷಣೆ ಮಾಡುತ್ತಾರೆ. ಚನ್ನಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರ ಶ್ರಮ ಹೆಚ್ಚು ಇದೆ. ಹಗಲು ರಾತ್ರಿ ಎನ್ನದೆ ಸರ್ಕಾರಿ ಕಚೇರಿಗಳಿಗೆ ತಿರುಗಾಡಿ ಚನ್ನಪಟ್ಟಣಕ್ಕೆ ನೂರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಅವರ ಕೊಡುಗೆ, ಶ್ರಮವನ್ನು ನಾವು ಸ್ಮರಿಸಬೇಕು. ●ಎಸ್‌.ಗಂಗಾಧರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ್ಯ

ಸು.ನಾ.ನಂದಕುಮಾರ್‌

 

Advertisement

Udayavani is now on Telegram. Click here to join our channel and stay updated with the latest news.

Next