Advertisement

ಬಡವರಿಗೆ ಸೇವೆ ಒದಗಿಸುವ ಹೊಣೆ ಆಸ್ಪತ್ರೆಗಳದ್ದು

11:51 AM Oct 30, 2018 | Team Udayavani |

ಬೆಂಗಳೂರು: ಆರೋಗ್ಯ ವಿಮೆ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಜವಾಬ್ದಾರಿ ಆಸ್ಪತ್ರೆಗಳ ಮೇಲಿದೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ವಿಶ್ವ ಪಾರ್ಶ್ವವಾಯು ಅರಿವು ದಿನಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಬಿಆರ್‌-ಲೈಪ್‌, ಎಸ್‌ಎಸ್‌ಎನ್‌ಎಂಸಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆ ಹೊರತಂದಿದ್ದ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿ ಮಾತನಾಡಿದರು.

ಆರೋಗ್ಯ ಸೇವೆ ದುಬಾರಿಯಾಗುತ್ತಿದ್ದು, ದೇಶದ ಖಾಸಗಿ ಆಸ್ಪತ್ರೆಗಳು ಆರೋಗ್ಯ ವಿಮೆ ಸೌಲಭ್ಯವನ್ನು ಪರಿಣಮಕಾರಿಯಾಗಿ ಬಳಸಿ, ಜನರಿಗೆ  ಉತ್ತಮ ಆರೋಗ್ಯ ಸೇವೆ ನೀಡಬೇಕು. ಹಾಗೆಯೇ ಆರೋಗ್ಯ ವಿಮೆ ಸೌಲಭ್ಯ ಎಲ್ಲರಿಗೂ ಸಿಗುವಂತಾಗಬೇಕು ಎಂದು ಹೇಳಿದರು.

ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ರೋಗಗಳ ಪ್ರಮಾಣ ಹೆಚ್ಚಾಗುತ್ತಿದೆ. ಹೃದ್ರೋಗ ಮತ್ತು ಪಾರ್ಶ್ವವಾಯು ಸಹ ನರಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಸಂಭವಿಸುತ್ತಿವೆ. ಪ್ರತಿ ಹತ್ತು ಸೆಕೆಂಡ್‌ಗೆ ಒಬ್ಬರಂತೆ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಪಾರ್ಶ್ವವಾಯು ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಬಿಆರ್‌-ಲೈಪ್‌, ಎಸ್‌ಎಸ್‌ಎನ್‌ಎಂಸಿ ನರವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎನ್‌.ಕೆ.ವೆಂಕಟರಮಣ ಮಾತನಾಡಿ, ಪಾರ್ಶ್ವವಾಯು ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಶೀಘ್ರ ರೋಗಪತ್ತೆ ಮಾಡಿದರೆ ದೊಡ್ಡ ಅಪಾಯ ತಪ್ಪಿಸಬಹುದು ಎಂದು ಹೇಳಿದರು.

Advertisement

ರಕ್ತನಾಳದ ಅಸಹಜತೆ, ಆನುವಂಶಿಕ ಕಾರಣಗಳು, ಅಧಿಕ ರಕ್ತದೊತ್ತಡ, ನಿಯಂತ್ರಣಕ್ಕೆ ಬಾರದ ಮಧುಮೇಹ, ಹೈಪರ್‌ ಲಿಪಿಡೆಮಿಯಾ, ನಿದ್ರಾಹೀನತೆ, ಧೂಮಪಾನ, ಮದ್ಯಪಾನ, ಜಡತ್ವ ಹಾಗೂ ಒತ್ತಡದ ಜೀವನ ಶೈಲಿಯಿಂದಾಗಿ ಪಾರ್ಶ್ವವಾಯ ಹೆಚ್ಚಾಗಿ ಕಂಡುಬರುತ್ತಿದೆ. ಭಾರತದಲ್ಲಿ 18 ರಿಂದ 21 ದಶಲಕ್ಷ ಮಂದಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ. 25ರಿಂದ 30ರ ವಯೋಮಾನದವರಲ್ಲಿ ಈ ಸಮಸ್ಯೆ ಹೆಚ್ಚಾಗಿರುವುದು ಆತಂಕದ ವಿಷಯ ಎಂದರು.

ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೋ, ಬಿಆರ್‌-ಲೈಪ್‌ ಗ್ರೂಪ್‌ನ ಸಿಇಒ ಕರ್ನಲ್‌ ಹೇಮ್‌ರಾಜ್‌ ಸಿಂಗ್‌ ಪರ್ಮಾರ್‌, ಸಂಸ್ಥೆಯ ಗ್ರೂಪ್‌ ಮೆಡಿಕಲ್‌ ಡೈರೆಕ್ಟರ್‌ ಡಾ.ಅಜಯ್‌ ರಾಜ್‌ ಮಲ್ಪೆ, ಬ್ರೈನ್ಸ್‌ ಸಂಸ್ಥೆಯ ಸಿಇಒ ಪ್ರಭಾಕರ್‌ ಇದ್ದರು.
ಇದೆ ವೇಳೆ ಪಾರ್ಶ್ವವಾಯು ಸಮಸ್ಯೆ ನಿರ್ವಹಣೆಗೆ ಎಸ್‌ಎಸ್‌ಎನ್‌ಎಂಸಿ-ಬ್ರೈನ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕೇಂದ್ರಕ್ಕೂ ಚಾಲನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next