ಬೆಂಗಳೂರು: “ನಗರದಲ್ಲಿ ಸೋಂಕಿತರನ್ನು ದೃಢಪಟ್ಟ ಕ್ಷಣದಿಂದ ಆರು ಗಂಟೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದ್ದಾರೆ. “ಇತ್ತೀಚೆಗೆ ಸೊಂಕಿತರನ್ನು ಆಸ್ಪತ್ರೆಗೆ ದಾಖಲಿ ಸಲು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಸೋಂಕು ದೃಢಪಟ್ಟು ಒಂದು ದಿನ ಕಳೆದರೂ ಆಸ್ಪತ್ರೆಗೆ ಸೇರಿಸದಿರುವ ಬಗ್ಗೆ ದೂರುಗಳು ಬಂದಿವೆ.
ಈ ಹಿನ್ನೆಲೆಯಲ್ಲಿ ಸೋಂಕು ದೃಢಪಟ್ಟ ಕ್ಷಣದಿಂದ 6 ತಾಸಿನೊಳಗೆ ಆಸ್ಪತ್ರೆಗೆ ದಾಖಲಿಸಲಾಗುವುದು’ ಎಂದು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಸೋಂಕಿತರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ನಿಟ್ಟಿನಲ್ಲಿ ನೂರು ಹೆಚ್ಚುವರಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ 200 ಅಥವಾ 250 ಆ್ಯಂಬುಲೆನ್ಸ್‌ಗಳನ್ನು ಖರೀದಿ ಮಾಡಲಾಗುವುದು.
ಇನ್ಮುಂದೆ ಸೋಂಕು ದೃಢಪಟ್ಟವರನ್ನು ಮನೆಯಲ್ಲಿಯೇ ಪರೀಕ್ಷಿಸಿ ಅವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರಿಸಬೇಕಾ ಅಥವಾ ಆಸ್ಪತ್ರೆಗೆ ಕಳುಹಿಸಬೇಕಾ ನಿರ್ಣಯಿಸಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಹೆಚ್ಚಿಸಲು ಕ್ರಮ ತೆಗೆದು ಕೊಳ್ಳಲಾಗುತ್ತಿದ್ದು, ಸದ್ಯಕ್ಕೆ 1,300 ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ, ಪ್ಯಾರಮೆಡಿಕಲ್ ಸಿಬ್ಬಂದಿ, ಆ್ಯಂಬುಲೆನ್ಸ್, ಊಟದ ವ್ಯವಸ್ಥೆ ಹಾಗೂ ಸ್ವತ್ಛತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಿಯಲ್ ಟೈಮ್ ಮಾಹಿತಿ: ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳಿವೆ ಎನ್ನುವ ಬಗ್ಗೆ ಮಾಹಿತಿ ಕೊರತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ವಾರ್ ರೂಂನಿಂದಲೇ ರಿಯಲ್ ಟೈಮ್ ಮಾಹಿತಿ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಇದರಿಂದ ಆ್ಯಂಬುಲೆನ್ಸ್ ಸಿಬ್ಬಂದಿಗೆ ಯಾವ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದೆ ಎನ್ನುವ ಮಾಹಿತಿ ಲಭ್ಯವಾಗಲಿದೆ ಎಂದರು.