ವರದಿ: ಮಹಾದೇವ ಪೂಜೇರಿ
ಚಿಕ್ಕೋಡಿ: ಕೊರೊನಾ ಎರಡನೆ ಅಲೆ ವ್ಯಾಪಕವಾಗಿ ಹರಡಿ ಪ್ರತಿಯೊಬ್ಬರನ್ನು ಬೆಚ್ಚಿ ಬಿಳಿಸಿತ್ತು. ಮೂರನೆ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದರೆ, ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿ ಆರಂಭವಾದ 20 ಕೋಟಿ ರೂ ವೆಚ್ಚದ ತಾಯಿ-ಮಗು ಆಸ್ಪತ್ರೆಯ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿರುವುದು ಗಡಿ ಜನರಲ್ಲಿ ಅಸಮಾಧಾನ ಮೂಡಿಸಿದೆ.
ಮೂರನೆ ಅಲೆ ಬರುವುದರೊಳಗೆ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಕ್ತಾಯಗೊಳಿಸಿ ಮಕ್ಕಳ ಚಿಕಿತ್ಸೆಗೆ ಬೇಕಾಗುವ ಮೂಲಭೂತ ಸೌಲಭ್ಯ ಒದಗಿಸಲು ಆರೋಗ್ಯ ಇಲಾಖೆ ಮುಂದಾಗಬೇಕು ಎನ್ನುವುದು ನಿಯೋಜಿತ ಚಿಕ್ಕೋಡಿ ಜಿಲ್ಲೆಯ ಜನರ ಒತ್ತಾಯವಾಗಿದೆ. ನಗರದ ಹೊರವಲಯದ ಬಾಣಂತಿಕೋಡಿ ಬಳಿ 100 ಹಾಸಿಗೆಯ ತಾಯಿ-ಮಗು ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಕಳೆದ 2018ರಿಂದ ಆರಂಭವಾದ ಆಸ್ಪತ್ರೆಯ ಕಟ್ಟಡ ಕಾಮಗಾರಿ ಇನ್ನೂ ಮುಗಿದಿಲ್ಲ.
2017ರಲ್ಲಿ ತಾಯಿ-ಮಗು ಆಸ್ಪತ್ರೆಗೆ ಸರಕಾರಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. 2018 ರಲ್ಲಿ ಗುತ್ತಿಗೆದಾರರಿಗೆ ವರ್ಕ ಆರ್ಡರ್ ಕೊಟ್ಟು ಅಂದಿನ ಲೋಕೋಪಯೋಗಿ ಇಲಾಖೆ ಸಚಿವರಾದ ಎಚ್.ಸಿ.ಮಹಾದೇವಪ್ಪ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. 2019ರಲ್ಲಿ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರಿಗೆ ಅನುಕೂಲವಾಗಬೇಕಿತ್ತು. ಆದರೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಆಸ್ಪತ್ರೆಯ ಕಟ್ಟಡ ಕಾಮಗಾರಿ ನಾಲ್ಕು ವರ್ಷವಾದರೂ ಇನ್ನೂ ಮುಗಿದಿಲ್ಲ.
2017ರಲ್ಲಿ ಚಿಕ್ಕೋಡಿ ಜೊತೆ ನಿಪ್ಪಾಣಿ ಮತ್ತು ಗೋಕಾಕ ನಗರದಲ್ಲಿಯೂ ತಾಯಿ-ಮಗು ಆಸ್ಪತ್ರೆ ಮಂಜೂರಾಗಿದ್ದವು. ಗೋಕಾಕ ಮತ್ತು ನಿಪ್ಪಾಣಿ ಎರಡು ನಗರದ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿದು ಲೋಕಾರ್ಪಣೆಗೊಂಡು ಸಾರ್ವಜನಿಕ ಸೇವೆಗೆ ಅಣಿಯಾಗಿದೆ.