ಗುಜರಾತ್: ಕೋವಿಡ್ 19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತಿಮ ಬಿಲ್ ನ ಹಣ ಪಾವತಿಸದ ಪರಿಣಾಮ ಶವ ಹಸ್ತಾಂತರಿಸಲು ನಿರಾಕರಿಸಿರುವ ಘಟನೆ ಗುಜರಾತ್ ನ ವಲ್ಸಾಡ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಅಂತಿಮ ಬಿಲ್ ನ ಹಣ ಪಾವತಿಸದೇ ಶವವನ್ನು ಹಸ್ತಾಂತರಿಸುವುದಿಲ್ಲ ಎಂದು ವಲ್ಸಾಡ್ ಆಸ್ಪತ್ರೆ ತಿಳಿಸಿದ್ದು, ಕುಟುಂಬದ ಕಾರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ.
ವರದಿಯ ಪ್ರಕಾರ, ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ವಾಪಿಯ 21ನೇ ಸೆಂಚುರಿ ಆಸ್ಪತ್ರೆಗೆ ವ್ಯಕ್ತಿಯೊಬ್ಬರನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮಂಗಳವಾರ(ಏಪ್ರಿಲ್ 13) ಸಾವನ್ನಪ್ಪಿದ್ದರು ಎಂದು ತಿಳಿಸಿದೆ.
ಆದರೆ ಆಸ್ಪತ್ರೆಯ ವೈದ್ಯರು ಶವವನ್ನು ತಮಗೆ ಹಸ್ತಾಂತರಿಸುತ್ತಿಲ್ಲ ಎಂದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಏತನ್ಮಧ್ಯೆ ಕುಟುಂಬ ಸದಸ್ಯರು ಅಂತಿಮ ಬಿಲ್ ಹಣ ಪಾವತಿಸಿದ ಬಳಿಕವೇ ಶವ ನೀಡುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿದೆ.
ಅಂತಿಮ ಬಿಲ್ ಹಣ ಪಾವತಿಸದೇ ಇದ್ದ ಕಾರಣ ಕಾರನ್ನು ನಮ್ಮ ವಶಕ್ಕೆ ತೆಗೆದುಕೊಂಡಿದ್ದು, ಶವವನ್ನು ಕೊಂಡೊಯ್ಯಲಿ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸೂಚಿಸಿರುವುದಾಗಿ ವರದಿ ವಿವರಿಸಿದೆ. ಈ ಬಗ್ಗೆ ಕುಟುಂಬದ ಸದಸ್ಯರು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದೆ.
ದೂರಿನ ಆಧಾರದ ಮೇಲೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಿದೆ. ಅಲ್ಲದೇ ಕಾರನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಗೂ ಮುನ್ನ ವಲ್ಸಾಡ್ ನ ಸೆಂಚುರಿ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತಿಮ ಬಿಲ್ ಹಣ ಪಾವತಿಸದೇ ಕಾರಣ ಕಾರನ್ನು ವಶಕ್ಕೆ ತೆಗೆದುಕೊಂಡು, ಅಂತಿಮ ಬಿಲ್ ಪಾವತಿಸಿದ ಬಳಿಕವಷ್ಟೇ ಕಾರನ್ನು ವಾಪಸ್ ನೀಡಿರುವುದಾಗಿ ವರದಿ ತಿಳಿಸಿದೆ.